ಸೋಮರಡ್ಡಿ ಅಳವಂಡಿ ಕೊಪ್ಪಳ
ಕಡುಬಡತನದಲ್ಲಿಯೇ ಜೀವನ ದೂಡುತ್ತಿರುವವರು ಸೂರಿಲ್ಲದೆ ಇಂದಿಗೂ ಪರದಾಡುತ್ತಿದ್ದರೂ ಇಂಥವರಿಗೆ ಸೂರು ಕೊಡುವ ಮನಸ್ಸನ್ನು ಆಡಳಿತ ಮಾಡದೆ ಇರುವುದು ತೀವ್ರ ಆಕ್ರೋಶಕ್ಕೆ ತುತ್ತಾಗಿದೆ.ನಮಗೆ ಸೂರು ಕೊಡಿ ಎಂದು ಆಗ್ರಹಿಸಿ 2023 ನವೆಂಬರ್ ತಿಂಗಳಲ್ಲಿ ಇಲ್ಲಿನ ನಗರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಅವರ ಮಧ್ಯಸ್ಥಿಕೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ನೀಡಿದ ಭರವಸೆಯಿಂದಾಗಿ 28 ದಿನಗಳ ಬಳಿಕ ಧರಣಿ ಕೈಬಿಟ್ಟಿದ್ದರು.
ಆದರೆ, ಮೂರು ವರ್ಷವಾದರೂ ಈಗಲೂ ಸೂರು ದೂರ ಉಳಿಯಿತು, ಇನ್ನೂ ನಿವೇಶನ ನೀಡದೆ ಇರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಆಶ್ರಯ ಕಾಲನಿಯೇ ಆಗಿಲ್ಲ: ಕೊಪ್ಪಳ ನಗರದಲ್ಲಿ ಕಳೆದ 12 ವರ್ಷಗಳಿಂದ ಒಂದೇ ಒಂದು ಆಶ್ರಯ ಕಾಲನಿಯೂ ನಿರ್ಮಾಣವಾಗಿಲ್ಲ. ಹೀಗಾಗಿಯೇ ಕೊಪ್ಪಳದಲ್ಲಿ ನೆಲೆ ಕಂಡುಕೊಂಡಿದ್ದರೂ ನಿವೇಶನ ಹಾಗೂ ಸೂರಿಲ್ಲದೆ ಸಂಕಷ್ಟದಲ್ಲಿರುವ ಕುಟಂಬಗಳು ಶಪಿಸುತ್ತಲೇ ಜೀವನ ಸಾಗಿಸುತ್ತಿದ್ದಾರೆ.
ಕೊಪ್ಪಳ ನಗರದ ಸಮೀಪದಲ್ಲಿಯೇ ಗುನ್ನಾಳ ಬಳಿ ಆಶ್ರಯ ಕಾಲನಿ ಮಾಡಲು 12 ವರ್ಷಗಳ ಹಿಂದೆಯೇ 24 ಎಕರೆ ಭೂಮಿ ಖರೀದಿ ಮಾಡಲಾಗಿದೆ. ಅದನ್ನು ನಿವೇಶನ ಮಾಡಿ ಇದುವರೆಗೂ ಹಂಚಿಕೆ ಮಾಡಲು ಆಗುತ್ತಿಲ್ಲ.
ಈಡೇರದ ಭರವಸೆ: ಅನಿರ್ದಿಷ್ಟಾವಧಿ ಧರಣಿಯನ್ನು ಕೈಗೊಂಡಾಗ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆ ಆಲಿಸಿ, ಶೀಘ್ರದಲ್ಲಿಯೇ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ಮೂರು ವರ್ಷವಾದರೂ ಇದುವರೆಗೂ ಸ್ಪಂದನೆ ಮಾಡದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿ, ಈಗ ಮತ್ತೆ ಧರಣಿ ನಡೆಸಲು ನಿವೇಶನರಹಿತರು ಮುಂದಾಗಿದ್ದಾರೆ. ಈ ಬಾರಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಗರಸಭೆಯಲ್ಲಿಯೇ ರಾತ್ರಿ ವಾಸ್ತವ್ಯ ಮಾಡಿ, ಅಲ್ಲಿಯೇ ಧರಣಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.24 ಎಕರೆ ಭೂಮಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿ, ನಿವೇಶನಗಳನ್ನಾದರೂ ಹಂಚಿಕೆ ಮಾಡಿದರೆ ಅದರಲ್ಲಿ ಗುಡಿಸಲನ್ನಾದರೂ ಹಾಕಿಕೊಳ್ಳುತ್ತೇವೆ ಎನ್ನುತ್ತಾರೆ ನಿರಾಶ್ರಿತರು. ಆದರೆ, ಆಡಳಿತ ವ್ಯವಸ್ಥೆ ಮಾತ್ರ ಇದಕ್ಕೆ ಸ್ಪಂದಿಸುತ್ತಲೇ ಇಲ್ಲ ಎನ್ನುವುದು ಅವರ ಅಸಮಾಧಾನ.
ಶ್ರೀಮಂತರ ಪಾಲು: ಕೊಪ್ಪಳ ನಗರದಲ್ಲಿರುವ ಆಶ್ರಯ ಕಾಲನಿಗಳು ಬಹುತೇಕ ಶ್ರೀಮಂತರ ಪಾಲೇ ಆಗಿವೆ. ಹೀಗಾಗಿಯೇ ಸಮಸ್ಯೆಯಾಗಿದ್ದು, ಆಶ್ರಯ ಮನೆಗಳಲ್ಲಿ ಶೇ. 90ರಷ್ಟು ಬಾಡಿಗೆ ನೀಡಿದ್ದಾರೆ ಎನ್ನುವುದು ಅಚ್ಚರಿಯಾದರೂ ಸತ್ಯ.ಮನೆ ಇದ್ದವರೇ ರಾಜಕೀಯ ಪ್ರಭಾವ ಬಳಕೆ ಮಾಡಿ, ಪಡೆದುಕೊಂಡು ಬಾಡಿಗೆ ನೀಡಿದ್ದಾರೆ ಎನ್ನುವ ಆರೋಪವೂ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಮಾಡಿದರೆ ಎಲ್ಲ ಬಣ್ಣವೂ ಬಯಲಾಗುತ್ತದೆ ಎನ್ನಲಾಗುತ್ತದೆ.
ಮುನ್ನೂರಕ್ಕೂ ಹೆಚ್ಚು ನಿರಾಶ್ರಿತರು ಸೂರಿಲ್ಲದ ಅಲೆಮಾರಿಗಳಂತೆ ಬದುಕುತ್ತಿದ್ದೇವೆ. ನಮಗೆ ಸೂರು ಕೊಡಿ ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಶಾಸಕರು ನೀಡಿದ ಭರವಸೆಯಿಂದ ಧರಣಿ ಹಿಂದೆ ಪಡೆದಿದ್ದೇವೆ. ಮೂರು ವರ್ಷವಾದರೂ ನಿವೇಶನವನ್ನು ನೀಡಿಲ್ಲ ಎಂದು ಹೋರಾಟಗಾರ ಸಂಜಯದಾಸ ಕೌಜಗಿರಿ ತಿಳಿಸಿದ್ದಾರೆ.