ಸಾರಾಂಶ
ಶಾಲಾ- ಕಾಲೇಜಿಗೊಂದು ಕನ್ನಡ ಕಾರ್ಯಕ್ರಮ । ಜನಪದ ಕುರಿತು ಯುವಕರ ಪಾತ್ರ ಉಪನ್ಯಾಸ
ಕನ್ನಡಪ್ರಭ ವಾರ್ತೆ ಮಧುಗಿರಿಜನಪದ ಸಾಹಿತ್ಯ ಜನರ ಜೀವನದಲ್ಲಿದೆ. ಜನವಾಣಿ ಬೇರು, ಕವಿವಾಣಿ ಹೂವು, ಕಾಯಕದೊಂದಿಗೆ ಜನಪದ ಸಾಹಿತ್ಯ ಹುಟ್ಟಿ ಬೆಳೆಯುತ್ತದೆ. ತೊಟ್ಟಿಲಿಂದ ಕಡೆ ತನಕ ಜನಪದ ಸಾಹಿತ್ಯ ಅರಳಿ ಬೆಳೆಯುತ್ತದೆ ಎಂದು ಜನಪದ ವಿದ್ವಾಂಸ, ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ ತಿಳಿಸಿದರು.ಕೊಡಿಗೇನಹಳ್ಳಿ ಸರ್ವೋದಯ ಶಾಲೆಯ ರಂಗಮಂದಿರದಲ್ಲಿ ಮಂಗಳವಾರ ನಡೆದ ‘ಶಾಲಾ- ಕಾಲೇಜಿಗೊಂದು ಕನ್ನಡ’ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯ ಮತ್ತು ಯುವ ಜನಾಂಗದ ಪಾತ್ರ ಕುರಿತು ಅವರು ಮಾತನಾಡಿದರು.
ಗ್ರಾಮೀಣ ಜನರ ಬದುಕಿಗೆ ಭದ್ರತೆ ಒದಗಿಸದಿದ್ದರೆ, ಅವರ ಸಂಸ್ಕೃತಿಗೆ ಮನ್ನಣೆ ನೀಡದಿದ್ದರೆ, ಅವರ ಸುಖ- ದುಃಖಗಳಲ್ಲಿ ಭಾಗಿಯಾಗದಿದ್ದರೆ ಯಾವುದೇ ದೇಶ ಅಭಿವೃದ್ಧಿ ಸಾಧಿಸದು. ಬೆವರು ಸುರಿಸುವ ಶ್ರಮ ಜೀವನವೇ ಜನಪದರ ಸತ್ವ ಎಂದರು.ಪ್ರಾಂಶುಪಾಲ ಕೆ.ವಿ.ಸತ್ಯನಾರಾಯಣ ಮಾತನಾಡಿ, ಸಾಹಿತ್ಯ ಜೀವನ ಪ್ರತಿಬಿಂಬ ಮತ್ತು ಗತಿಬಿಂಬವೂ ಹೌದು, ಭಾಷೆ ಉಳಿವಿಗಾಗಿ ನಾವೆಲ್ಲರೂ ಎಚ್ಚರ ವಹಿಸಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮುನೀಂದ್ರ ಕುಮಾರ್ ಮಾತನಾಡಿ, ಮೌಲ್ಯ ಎನ್ನುವುದು ಕೇವಲ ನಿಘಂಟಿನ ಶಬ್ದವಲ್ಲ, ನಮ್ಮ ನಡೆ ನುಡಿಯ ಕ್ರಿಯಾ ಸೂತ್ರ. ಮೌಲ್ಯವೆಂದರೆ ನಡೆ, ನುಡಿಗಳ ಹೊಂದಾಣಿಕೆ, ಹೃದಯ- ಮನಸ್ಸುಗಳ ಸಮನ್ವಯ, ವ್ಯಕ್ತಿ ವ್ಯಕ್ತಿಗಳ ಮಧ್ಯ ಆತ್ಮಿಯತೆ ಬೆಳೆಸುವ ಮತ್ತು ಸೌಹಾರ್ದ ಸಂಬಂಧ ಸಂಘಟಿಸುವ ತಾತ್ವಿಕ ರೀತಿ ನೀತಿ. ಮೌಲ್ಯಕ್ಕೆ ಅರ್ಥ ಬರುವುದು ಅನುಕರುಣೆಯಿಂದಲ್ಲ, ಅನುಷ್ಠಾನದಿಂದ ಎಂದು ಉಲ್ಲೇಖಿಸಿದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಉಪನ್ಯಾಸಕ ಎ.ರಾಮಚಂದ್ರಪ್ಪ, ಜನಪದಕ್ಕೆ ದೇಶಿ ಎಂತಲೂ ಕರೆಯುತ್ತೇವೆ. ದೇಶಿ ಎಂದರೆ ಪರಿಶುದ್ಧವಾದುದು. ಕಲಬೆರಿಕೆ ಇಲ್ಲದ್ದು, ಪರಂಪರೆಯಿಂದ ಬಂದದ್ದು, ಆಧುನಿಕತೆ ಎನ್ನುವುದು ದೇಶಿಗೆ ಬಿನ್ನವಾದುದು ಎಂದು ನುಡಿದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕು ಇಲ್ಲೇ ಅರಳುತ್ತದೆ, ಕಷ್ಟ -ಸುಖದಲ್ಲಿ ಹೊರಳುತ್ತದೆ. ಕರ್ತವ್ಯ ಮುಗಿದ ಕೂಡಲೇ ಕಾಲ ಕರೆದಲ್ಲಿಗೆ ಹೋಗುತ್ತೇವೆ, ಭೂಮಿಯ ಮೇಲಿನ ಬದುಕಿನ ಅನುಭವ ಅಂತರಂಗದಲ್ಲಿ ಹದಗೊಂಡು ಮುದವಾಗಿ ಅರಳುವುದೇ ಜನಪದ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ ನ್ಯಾತಪ್ಪ, ತಾ.ಕಸಾಪ ಗೌರವ ಕಾರ್ಯದರ್ಶಿ ರಂಗಧಾಮಯ್ಯ, ಹೋಬಳಿ ಘಟಕದ ಅಧ್ಯಕ್ಷ ಗಂಗಾಧರ ವಿ.ರೆಡ್ಡಿಹಳ್ಳಿ, ಕಾರ್ಯದರ್ಶಿ ಕೆ.ಎನ್.ರಾಮು, ಖಜಾಂಚಿ ಫಹಾತ್, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ವಿ.ವೆಂಕಟರಾಮು, ಮುಖ್ಯ ಶಿಕ್ಷಕಿ ಸುನಂದ, ಸದಾಶಿವರೆಡ್ಡಿ, ನಿವೃತ್ತ ಶಿಕ್ಷ ಪ್ರಸನ್ನ ಆಚಾರ್, ಕಾಳಪ್ಪ, ಉಪನ್ಯಾಸಕ ಕಾಂತರಾಜು, ಬಸವರಾಜು, ಶಿಕ್ಷಕಿಯರಾದ ಸುಮಲತಾ, ರಮ್ಯಾ, ದಿವ್ಯಲಕ್ಷ್ಮೀ, ಭಾರ್ಗವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.