ಚಾಮರಾಜನಗರಕ್ಕೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ

| Published : Nov 07 2024, 11:54 PM IST

ಸಾರಾಂಶ

ಚಾಮರಾಜನಗರಕ್ಕೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ ಕಾಲಿಟ್ಟಿದ್ದು ವಿ.ಸಿ.ಹೊಸೂರಿನ ಮೂವರು ರೈತರು ಜಮೀನು ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದ ಗಡಿ ಜಿಲ್ಲೆ ಚಾಮರಾಜನಗರಕ್ಕೂ ಕಾಲಿಟ್ಟಿದ್ದು ಇಲ್ಲಿನ ವಿ.ಸಿ.ಹೊಸೂರಿನ ಮೂವರು ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಗ್ರಾಮದ ಮೂವರು ರೈತರ ಜಮೀನನ್ನು ವಕ್ಫ್ ಸಂಸ್ಥೆಯ ಹೆಸರಿಗೆ ಖಾತೆ ಬದಲಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ತಹಸೀಲ್ದಾರರಿಗೆ 2022 ರ ಜುಲೈನಲ್ಲೇ ಬರೆದಿರುವ ಪತ್ರ ಇದೀಗ ಬೆಳಕಿಗೆ ಬಂದಿದೆ. ಬಂಡಿಗೆರೆ ಸರ್ವೇ ನಂಬರ್ 179ರ 2 ಎಕರೆ 9 ಗುಂಟೆ ಜಮೀನು ಎಚ್‌.ಜಿ .ಶಾಂತಪ್ಪ, ಎಚ್‌.ವಿ. ಗಿರಿಮಲ್ಲು, ಎಚ್.ವಿ.ನಾಗರಾಜು ಎಂಬವರ ಹೆಸರಿನಲ್ಲಿದ್ದು ಇದನ್ನು ಹರದನಹಳ್ಳಿಯ ಜಾಮಿಯಾ ಮಸೀದಿ ವಕ್ಫ್ ಆಸ್ತಿ ಎಂದು ಖಾತೆ ಬದಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಖಾತೆ ಬದಲಿಗೆ ಕ್ರಮ ಕೈಗೊಳ್ಳಲು ಮೂರು ತಿಂಗಳ ಹಿಂದೆಯಷ್ಟೇ ಆರ್.ಆರ್‌.ಟಿ ವಿಭಾಗದಿಂದ ರಾಜಸ್ವ ನಿರೀಕ್ಷಕರಿಗೆ ಈ ಪತ್ರ ರವಾನೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು 45 ವರ್ಷಗಳ ಹಿಂದೆ ನಮ್ಮ ತಂದೆ ಮುಸ್ಲಿಂ ವ್ಯಕ್ತಿಯಿಂದ ಜಮೀನು ಖರೀದಿಸಿದ್ದಾರೆ. ಆದರೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಪತ್ರದ ಪ್ರತಿ ನಮಗೆ ಇದೀಗ ಲಭ್ಯವಾಗಿದ್ದು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ನಮಗು ಜಮೀನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.