ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ವಾಣಿ ವಿಲಾಸ ಜಲಾಶಯದ ಎಡ ಮತ್ತು ಬಲನಾಲೆಗಳ ನೀರಿಗೆ ಕನ್ನ ಹಾಕಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನ ಅಚ್ಚುಕಟ್ಟು ಪ್ರದೇಶಗಳಿಗೆ ವಾಣಿವಿಲಾಸ ಸಾಗರ ಜಲಾಶಯದ ಎಡ ಮತ್ತು ಬಲನಾಲೆಗಳ ಮೂಲಕ ನೀರು ಹಾಯಿಸಲಾಗುತ್ತಿದ್ದು ಆ ನೀರಿಗೆ ಕನ್ನ ಹಾಕಲಾಗುತ್ತಿದೆ.
ಕೆಲವು ಬಲಾಢ್ಯರು ಹಣ ಮತ್ತು ರಾಜಕೀಯ ಶಕ್ತಿ ಬಳಸಿಕೊಂಡು ಯಾವುದೇ ತೆರಿಗೆ ಪಾವತಿಸದೆ 6 ರಿಂದ 10 ಇಂಚು ಗಾತ್ರದ ಪೈಪ್ ಅಳವಡಿಸಿ ನಾಲೆಯಿಂದ ನೇರವಾಗಿ ನೀರು ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಮುಂದೆ ಹೋಗುವ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಸಿಗದಂತಾಗಿದೆ. ಕೊನೆಯ ಹಂತದಿಂದ ನೀರು ಹಾಯಿಸಬೇಕು ಎಂಬ ನಿಯಮವನ್ನೇ ಗಾಳಿಗೆ ತೂರಲಾಗಿದೆ. ನೀರು ತಲುಪುವ ಕೊನೆಯ ಹಂತದ ರೈತರು ಹೆಡ್ ನೀರು ಹರಿಯದೆ ಬರುವ ಅಲ್ಪ ಸ್ವಲ್ಪ ನೀರಲ್ಲೇ ಜಮೀನು ನೆನೆ ಹಾಕಲು ಹರಸಾಹಸ ಪಡುತ್ತಿದ್ದಾರೆ. ಸಾಮಾನ್ಯವಾಗಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ 30 ದಿನಗಳು ನೀರು ಹರಿಸುವುದು ವಾಡಿಕೆ. ಆದರೆ ಫೆಬ್ರವರಿಯಲ್ಲಿ 42 ದಿನಗಳ ಕಾಲ ನೀರು ಹರಿಸಲಾಗಿದೆ. ಇದಕ್ಕೆ ಕಾರಣ ನಾಲೆಗಳಲ್ಲಿ ಹೂಳು, ಗಿಡಗಂಟಿ ಬೆಳೆದಿರುವುದು. ಪ್ರಮುಖವಾಗಿ ನೀರು ಅಕ್ರಮವಾಗಿ ಬಳಸುತ್ತಿರುವುದಾಗಿದೆ.ಮುಂಚೆಯಂತೆ ಚೌಡಿಗಳು ಪ್ರತಿ ತೂಬಿನ ಹತ್ತಿರ ಕುಳಿತು ರೈತರಿಗೆ ನೀರು ಹರಿಸುತ್ತಿಲ್ಲ. ನಾಲೆಗಳಿಂದ ನೀರು ಕನ್ನ ಹಾಕುತ್ತಿರುವ ಫೋಟೋ ಕೊಟ್ಟಿದ್ದರು ಸಹ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನೀರಿನ ನಿರ್ವಹಣೆ ಸರಿ ಇಲ್ಲದ ಕಾರಣಕ್ಕೆ ಬಹಳಷ್ಟು ಪ್ರಮಾಣದ ನೀರು ವೇದಾವತಿ ನದಿಗೆ ಸೇರುತ್ತಿದೆ. 2017ರಲ್ಲಿ ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದನ್ನು ಎಲ್ಲರೂ ಮರೆತಂತಿದೆ. ಮತ್ತೊಮ್ಮೆ ಅಂತಹ ಪರಿಸ್ಥಿತಿ ಬರಬಾರದು ಎಂದಾದರೆ ನೀರಿನ ಕನ್ನ ತಪ್ಪಿಸಬೇಕು. ನಾಲೆಗಳನ್ನು ದುರಸ್ತಿ ಮಾಡಿಸಬೇಕು. ಸಚಿವ ಡಿ.ಸುಧಾಕರ್ ಅವರು ನೀರಾವರಿ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿ ಇದನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ರೈತರ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.