ನೀರಿನ ಪೈಪ್‌ಲೈನ್‌ ಒಡೆದು ಕೆರೆಯಂತಾದ ರಸ್ತೆ

| Published : Dec 13 2024, 12:50 AM IST

ಸಾರಾಂಶ

ಇದರ ನಡುವೆ ಎಚ್ಚರಿಕೆಯಿಂದ ಮಾಡಬೇಕಾದ ಹೆದ್ದಾರಿ ಕಾಮಗಾರಿಯನ್ನು ಬೇಕಾಬಿಟ್ಟಿ ಮಾಡಿದ ಪರಿಣಾಮ ಎಂ.ಜಿ.ರಸ್ತೆಯ ದರ್ಗಾ ಬಳಿಯಲ್ಲಿ ಜಕ್ಕಲಮೊಡಗು ಜಲಾಶಯದ ಪ್ರಧಾನ ಪೈಪ್‌ಲೈನ್ ಹೊಡೆದು ಹೋಗಿದ್ದು ಲಕ್ಷಾಂತರ ಲೀಟರ್ ನೀರು ಬೀದಿಯಲ್ಲಿ ಹರಿಯುತ್ತಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಕುಡಿಯುವ ನೀರಿನ ಆಸರೆಯಾಗಿರುವ ಜಕ್ಕಲಮೊಡಗು ಜಲಾಶಯ ಒಂದು ತಿಂಗಳ ಹಿಂದೆ ಸುರಿದ ಮಳೆಗೆ ಭರ್ತಿಯಾಗುವ ಮೂಲಕ ಎರಡೂ ನಗರಗಳ ನಿವಾಸಿಗಳ ಮನದಲ್ಲಿ ಸಂತೋಷದ ಹೊನಲನ್ನು ಹರಿಸಿತ್ತು. ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 69ರ ಕಾಮಗಾರಿ ನಡೆದಿರುವ ಕಾರಣ ಜೆಸಿಬಿ ಟಿಪ್ಪರ್, ಟ್ರ್ಯಾಕ್ಟರ್ ಲಾರಿಗಳ ಹಾವಳಿ ಮಿತಿಮೀರಿದೆ. ಇವುಗಳ ಹಾವಳಿಯಿಂದ ಇತರ ವಾಹನ ಸವಾರರು ಹೈರಾಣಾಗಿರುವಂತೆ ಪಾದಚಾರಿಗಳು ಕೂಡ ಬೇಸತ್ತಿದ್ದಾರೆ.

ಪೈಪ್‌ ಒಡೆದು ನೀರು ವೋಲು

ಇದರ ನಡುವೆ ಎಚ್ಚರಿಕೆಯಿಂದ ಮಾಡಬೇಕಾದ ಹೆದ್ದಾರಿ ಕಾಮಗಾರಿಯನ್ನು ಬೇಕಾಬಿಟ್ಟಿ ಮಾಡಿದ ಪರಿಣಾಮ ಎಂ.ಜಿ.ರಸ್ತೆಯ ದರ್ಗಾ ಬಳಿಯಲ್ಲಿ ಜಕ್ಕಲಮೊಡಗು ಜಲಾಶಯದ ಪ್ರಧಾನ ಪೈಪ್‌ಲೈನ್ ಹೊಡೆದು ಹೋಗಿದ್ದು ಲಕ್ಷಾಂತರ ಲೀಟರ್ ನೀರು ಬೀದಿಯಲ್ಲಿ ಹರಿಯುತ್ತಿದೆ. ಬುಧವಾರ ಸಂಜೆ ಈ ಅವಘಡ ಸಂಭವಿಸಿದ್ದು ಸ್ಥಳಕ್ಕೆ ತೆರಳಿದ ಮಾಧ್ಯಮದವರು ಈ ವಿಷಯವನ್ನು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಆದರೆ ಇದು ನಮ್ಮ ಕೆಲಸವಲ್ಲ ಎಂಬ ಉಡಾಫೆಯ ಮಾತುಗಳನ್ನು ಆಡಿದ್ದಲ್ಲದೆ, ನೀವು ಎಲ್ಲವನ್ನೂ ಸರಿಯಾಗಿ ಮಾಡುತ್ತೀರಾ ಎಂದು ವರದಿಗಾರರಿಗೇ ಪ್ರಶ್ನಿಸಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ಜಕ್ಕಲಮೊಡಗು ಜಲಾಶಯದ ಕುಡಿಯುವ ನೀರು ಹೀಗೆ ವ್ಯರ್ಥವಾಗಿ ಹರಿಯುತ್ತಿದೆ. ಹೆದ್ದಾರಿ ಕಾಮಗಾರಿ ಮಾಡುವವರ ಅಸಡ್ಡೆ, ದುರ್ವರ್ತನೆಗೆ ನೀರು ಪೋಲಾಗುತ್ತಿರುವುದನ್ನು ಕಂಡು ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನೀರಿನಿಂದಾಗಿ ಪೂರ್ಣ ರಸ್ತೆಯೇ ಮುಳುಗಿದೆ.ಸಾರ್ವಜನಿಕರ ಆಕ್ರೋಶ

ಯಾರೋ ಮಾಡುವ ತಪ್ಪಿಗೆ ಇನ್ಯಾರೋ ಬೆಲೆ ತೆರುವ ರೀತಿಯಲ್ಲಿ ಜಲಾಯದ ನೀರು ಧಾರಾಕಾರವಾಗಿ ಎಂ.ಜಿ.ರಸ್ತೆ ದರ್ಗಾಬಳಿ ಹರಿದುಹೋಗುತ್ತಿದೆ. ಈ ಕೆಸರಿನಲ್ಲಿಯೇ ಸಾಗುತ್ತಿರುವ ವಾಹನಗಳಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓವರ್ ಹೆಡ್ ಟ್ಯಾಂಕ್ ಗೆ ಸಾಗುತಿದ್ದ ನೀರು ಪೈಪು ಒಡೆದು ಹೋಗಿದ್ದ ಕಾರಣ ತಿಪ್ಪೇನಹಳ್ಳಿ ವಾಟರ್ ಪ್ಲಾಂಟ್ ನಲ್ಲಿ ಮೋಟರ್ ಆಫ್‌ ಮಾಡಿಸಿದ ಮೇಲೂ ಸುಮಾರು ಎರಡು ಮೂರು ಗಂಟೆಗಳ ಕಾಲ ಒಂದೆ ಸಮನೆ ಸಾವಿರಾರು ಗ್ಯಾಲನ್ ನೀರು ಹರಿಯುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಎಲ್ಲಿಂದ ಪೈಪು ಒಡೆದು ಹೋಗಿದೆ ಎಂಬುದನ್ನ ಪರಿಶೀಲಿಸಿ ಕೂಡಲೆ ನೀರು ನಿಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜೆಸಿಬಿ ಚಾಲಕ ಕಾರಣ

ಈ ವೇಳೆ ಮಾತನಾಡಿದ ಗಜೇಂದ್ರ ಅವರು, ಪೈಪ್ ತಿರುವು ಪಡೆದುಕೊಂಡಿರುವುದು ಜೆಸಿಬಿ ಡ್ರೈವರ್ ಗೆ ಗೊತ್ತಿಲ್ಲದೆ ಈ ಅವಾಂತರ ಆಗಿದೆ. ನೀರು ನಿಂತ ಕೂಡಲೆ ಇವತ್ತು ರಾತ್ರಿಯೇ ಎಷ್ಟೋತ್ತಾದರೂ ಸರಿಪಡಿಸುತ್ತೇವೆ. ಇನ್ನು ಕಾಮಗಾರಿ ವೇಳೆ ಜಕ್ಕಲಮಡಗು ನೀರು ಅಲ್ಲಲ್ಲಿ ಪೈಪ್ ಗೆ ಡ್ಯಾಮೇಜ್ ಆಗಿದೆ ಅದರಿಂದ ಚರಂಡಿ ನೀರು ಕುಡಿಯೋ ನೀರಿಗೆ ಸೇರಿಕೊಳ್ಳುತ್ತಿದೆ ಎಂಬ ಸಾರ್ವಜನಿಕರ ಆರೋಪವನ್ನ ಅಲ್ಲಗಳೆದ ಅಧ್ಯಕ್ಷರು ಹಾಗೆ ಆಗಿಲ್ಲ, ಆಗಿದ್ದು ಕಂಡಬಂದ ಕೂಡಲೆ ಸೈಟ್ ಮ್ಯಾನೇಜರ್ ಗೆ ಹೇಳಿ ಸರಿಪಡಿಸುತ್ತೇವೆ ಎಂದು ತಿಳಿಸಿದರು

ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಲಕ್ಷಾಂತರ ಲೀಡರ್‌ ನೀರು ವ್ಯರ್ಥವಾಗಿ ಹರಿದುಹೋಗಲಿದೆ ಎಂದು ಸಾರ್ವಜನಿಕರ ಆತಂಕ ವ್ಯಕ್ತಪಡಿಸಿದ್ದಾರೆ..