ಹೊಸ ತಲೆಮಾರಿನವರು ನಮ್ಮ ಕಾಲದ ನಮ್ಮದೇ ಕತೆಗಳನ್ನು ಬರೆಯುತ್ತಿದ್ದಾರೆ. ಆ ಬರಹಗಳು ಸಮಾಜದ ಕತೆಗಳು ಎಂಬ ತಿಳಿವಳಿಕೆ ಬಂದಾಗ ಓದುವ, ಬರೆಯುವ ಪ್ರಕ್ರಿಯೆಗೆ ಹೊಸ ಆಯಾಮ ಬರುತ್ತದೆ.
ಧಾರವಾಡ:
21ನೇ ಶತಮಾನದ ಮೊದಲ ದಶಕದಲ್ಲಿ ಅನುಭವಿಸುತ್ತಿರುವ ಜಾಗತೀಕರಣ ಬಗ್ಗೆ ತೀಕ್ಷ್ಣವಾಗಿ ಬರೆಯುವ ಲೇಖಕ ವರ್ಗ ಹೊಸತಲೆಮಾರಿನ ರೂಪದಲ್ಲಿ ಈಗ ಉದಯಿಸುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರಷೋತ್ತಮ ಬಿಳಿಮಲೆ ಹೇಳಿದರು.ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಟಾನವು ಇತ್ತೀಚೆಗೆ ಆಯೋಜಿಸಿದ್ದ ಬಸವರಾಜ ಕಟ್ಟೀಮನಿ ಯುವಸಾಹಿತ್ಯ ಪುಸ್ತಕ ಪ್ರಶಸ್ತಿ ಮತ್ತು ಆತ್ಮಕಥಾ ಪುಸ್ತಕ ಪ್ರಶಸ್ತಿ ಪ್ರದಾನದಲ್ಲಿ ಅವರು ಮಾತನಾಡಿದ ಅವರು, ಹೊಸ ತಲೆಮಾರಿನವರು ನಮ್ಮ ಕಾಲದ ನಮ್ಮದೇ ಕತೆಗಳನ್ನು ಬರೆಯುತ್ತಿದ್ದಾರೆ. ಆ ಬರಹಗಳು ಸಮಾಜದ ಕತೆಗಳು ಎಂಬ ತಿಳಿವಳಿಕೆ ಬಂದಾಗ ಓದುವ, ಬರೆಯುವ ಪ್ರಕ್ರಿಯೆಗೆ ಹೊಸ ಆಯಾಮ ಬರುತ್ತದೆ. ಒಟ್ಟಾರೆ ಜಾಗತೀಕರಣದ ಸಂದರ್ಭದಲ್ಲಿ ಬೆಳೆಯುತ್ತಿರುವ ಹೊಸ ಭಾವನೆಗಳನ್ನು ಯುವ ಲೇಖಕರು ಬರಹದ ಮೂಲಕ ಹಿಡಿಯುತ್ತಿರುವುದು ಸಂತಸದ ಸಂಗತಿ ಎಂದರು.
ಸಮಾಜದಲ್ಲಿ ನಡೆಯುತ್ತಿರುವ ಹಲವು ತಿಕ್ಕಾಟದ ಮಧ್ಯೆ ಬರಹ ರೂಪುಗೊಳ್ಳುವುದೇ ವಿಶಿಷ್ಟ. ಅಸ್ವಸ್ಥ ಮನಸ್ಸುಗಳು ಅತ್ಯುತ್ತಮ ಸಾಹಿತ್ಯವನ್ನು ರಚಿಸುತ್ತವೆ. ಎಲ್ಲರಿಗೂ ಬರೆಯುವ ಹಕ್ಕು ಇದೆ. ಎಲ್ಲರೂ ಬರೆಯಬೇಕು’ ಎಂದರು.ಭಾಷೆ ಕುರಿತಾಗಿ ಮಾತನಾಡಿದ ಬಿಳಿಮಲೆ ಅವರು, ಉತ್ತರ ಭಾರತದಲ್ಲಿ ಕರ್ನಾಟಕದವರು 20 ಸಾವಿರಕ್ಕಿಂತ ಹೆಚ್ಚಿಲ್ಲ. ಆ 20 ಸಾವಿರ ಜನರಿಗಾಗಿ ಇಲ್ಲಿ 7.42 ಲಕ್ಷ ಮಕ್ಕಳಿಗೆ ಹಿಂದಿ ಕಲಿಸುತ್ತೇವೆ. ಇದು ಸರಿಯಾದ ಕ್ರಮವಲ್ಲ. 7.42 ಲಕ್ಷ ಮಕ್ಕಳಲ್ಲಿ 1.42 ಲಕ್ಷ (ಶೇ 22) ಮಕ್ಕಳು ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿದ್ಧಾರೆ. ಒಂದು ಭಾಷೆಯನ್ನು ಹೇಗೆ, ಎಲ್ಲಿಯ ವರೆಗೆ ಕಲಿಸಬೇಕು ಎನ್ನುವ ಕುರಿತು ಪ್ರಾದೇಶಿಕತೆ, ಆ ಭಾಷೆಗಿರುವ ಅಗತ್ಯ. ಭಾಷೆಯಾಗಿ ಚಾಚಿಕೊಳ್ಳುವ ಗುಣದ ಬಗ್ಗೆ ಪ್ರಬುದ್ಧ ತಿಳಿವಳಿಕೆ ಇಲ್ಲದಿದ್ದರೆ ಇಂತಹ ಸಮಸ್ಯೆಗಳಾಗುತ್ತವೆ ಎಂದು ಹೇಳಿದರು.
ಗೋವಿಂದರಾಜು ಕಲ್ಲೂರ ಅವರ ಸಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕಥೆ, ಫೌಝಿಯ ಸಲೀಂ ಅವರ ನೀ ದೂರ ಹೋದಾಗ ಕಾದಂಬರಿಗೆ 2023ನೇ ಸಾಲಿನ ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ ಹಾಗೂ ಕಾವ್ಯಾ ಕಡಮೆ ಅವರ ತೊಟ್ಟು ಕ್ರಾಂತಿ ಕಥೆ ಹಾಗೂ ಜಯರಾಮಚಾರಿ ಅವರ ಕಿಲಿಗ್ ಕಾದಂಬರಿಗೆ 2024ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನು, ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರಿಗೆ ಬಸವರಾಜ ಕಟ್ಟೀಮನಿ ಆತ್ಮಕಥಾ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ, ಸದಸ್ಯರಾದ ಮಂಜುಳಾ, ಸಾಹಿತಿ ಮಾಲತಿ ಮುದಕವಿ, ವಿಷ್ಣುಶಿಂಧೆ, ಸಂಘ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇದ್ದರು.