ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ಭಕ್ತಿ, ಸೇವೆಯಿಂದ ನಿರ್ಮಿಸಿದ ದೇವಸ್ಥಾನಗಳ ಇತಿಹಾಸ ಇನ್ನೂ ಜೀವಂತವಾಗಿದೆ ಎಂದು ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.ಸಮೀಪದ ಆರೇಶಂಕರ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶಂಕರಲಿಂಗೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದ ದೈವ ಕೂಡಿಕೊಂಡು ನಿರ್ಮಿಸಿದಂತಹ ದೇವಸ್ಥಾನಗಳು ಇತಿಹಾಸ ಪುಟಗಳಲ್ಲಿ ಸೇರಿವೆ. ಇವತ್ತು ಬಹಳ ಜನ ದೇವಸ್ಥಾನಕ್ಕೆ ಸರ್ಕಾರದ ಅನುದಾನ ಕೇಳುತ್ತಾರೆ. ಸರ್ಕಾರದಿಂದ ಕಟ್ಟಿದ ದೇವಸ್ಥಾನಗಳನ್ನು ಕಟ್ಟಿದ ಕೆಲವು ದಿನಗಳ ನಂತರ ಬಿರುಕು ಬೀಳುತ್ತವೆ. ಹೀಗೆ ಆಗಬಾರದು. ಗ್ರಾಮಸ್ಥರು ಪಟ್ಟಿ ಹಾಕಿ ನಿರ್ಮಾಣ ಮಾಡಿದರೆ ಆ ದೇವಸ್ಥಾನದ ಕಳೆಯೇ ಬೇರೆಯಾಗುತ್ತದೆ ಎಂದರು.
ಹಿಂದೆ ನಾವು ಹಳ್ಳಿಯೊಳಗೆ ಎಲ್ಲರೂ ನಮ್ಮವರು ಅಂತ ಭಾವಿಸಿ ಯಾವ ರೀತಿ ಜೀವನ ನಡೆಸುತ್ತಿದ್ದೇವು ಅಂತಹ ಸಂಸ್ಕಾರವನ್ನು ಇಂದು ನಾವು ನಮ್ಮ ಮಕ್ಕಳಿಗೆ ನೀಡಬೇಕು. ದುಶ್ಚಟಗಳಿಂದ ನಮ್ಮ ಮಕ್ಕಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಪೂರ್ವ ಕಾಲದಿಂದಲೂ ಈ ದೇವಸ್ಥಾನವಿದೆ. ಸಣ್ಣ ಪ್ರಮಾಣದಲ್ಲಿ ಇದ್ದಂತ ದೇವಸ್ಥಾನವನ್ನು ಇವತ್ತು ಗ್ರಾಮಸ್ಥರು ಭವ್ಯವಾಗಿ ನಿರ್ಮಾಣ ಮಾಡಿರುವುದು ಖುಷಿ ನೀಡಿದೆ. ಆರೇಶಂಕರ ಗ್ರಾಮದ ಈ ದೇವಸ್ಥಾನದಲ್ಲಿ ಹಲವಾರು ಶುಭ ಸಮಾರಂಭಗಳಾಗಿವೆ. ನಾಲತವಾಡ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದವರು ಕೂಡ ಇಲ್ಲಿ ಮದುವೆ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಇತಿಹಾಸವಿದೆ ಎಂದು ಹೇಳಿದರು.ಸರೂರು ಹಾಲಮತ ಪೀಠದ ರೇವಣಸಿದ್ದೇಶ್ವರ ಶಾಂತಮಯ ಶ್ರೀಗಳು ಆಶೀರ್ವಚನ ನೀಡಿ, ದೇವರು ಶುದ್ಧಮಯ ಮನಸಿನಿಂದ ಭಕ್ತಿ ತೋರಿದರೆ ಬೇಕಾದನ್ನು ನೀಡುತ್ತಾನೆ. ಮನುಷ್ಯ ಉದ್ಧಾರ ಆಗಬೇಕಾದರೆ ಹಣದ ಅವಶ್ಯಕತೆ ಬೀಳುವುದಿಲ್ಲ. ನಾನು ನಮ್ಮ ಜೀವನವನ್ನು ಬದಲಾವಣೆ ಮಾಡಿಕೊಳ್ಳಬೇಕಾದರೆ ದೈವ ಭಕ್ತಿಯ ಜೊತೆ ಪರರ ಬಗ್ಗೆ ಒಳ್ಳೆಯ ವಿಚಾರಗಳನ್ನು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಇಂದು ಪ್ರತಿ ಹಳ್ಳಿಗಳಲ್ಲಿ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಸಾರಾಯಿ ಗುಟ್ಕಾದಂತಹ ಕೆಟ್ಟ ಚಟಗಳಲ್ಲಿ ತೊಡಗಿದ್ದಾರೆ. ಮೊದಲು ಇದರಿಂದ ಹೊರಬರಬೇಕು. ಈ ಹಿಂದೆ ಹಳ್ಳಿಯ ಜೀವನ ಉತ್ತಮ ಎನ್ನುತ್ತಿದ್ದರು. ಆದರೆ ಈಗ ಹಳ್ಳಿಯಲ್ಲಿಯೂ ಡ ದುಶ್ಚಟಗಳು ತಾಂಡವವಾಡುತ್ತಿವೆ. ಆದ್ದರಿಂದ ಹಿರಿಯರು ಯುವಕರ ಬಗ್ಗೆ ಜಾಗೃತಿ ವಹಿಸಿ ಅವರನ್ನು ಧಾರ್ಮಿಕತೆ ಕಡೆ ತೆಗೆದುಕೊಂಡು ಹೋಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಶಂಕರಲಿಂಗೇಶ್ವರ ದೇವಸ್ಥಾನವನ್ನು ಆರೇಶಂಕರ ಗ್ರಾಮದ ಭಕ್ತರು ಅದ್ಬುತವಾಗಿ ನಿರ್ಮಾಣ ಮಾಡಿದ್ದಾರೆ, ಬೆಳಗ್ಗೆಯಿಂದ ಹೋಮ ಹವನ ಹಾಗು ಕಳಸ ಮೆರವಣಿಗೆ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ಹಮ್ಮಿಕೊಂಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಿಂಥಣಿ ಬ್ರಿಜ್ ಕನಕ ಗುರುಪೀಠದ ಸಿದ್ದರಾಮಾನಂದ ಶ್ರೀಗಳು, ಗೋಲಪಲ್ಲಿಯ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಶ್ರಿಗಳು, ಹರ್ಲಾಪೂರದ ಗುರು ಕೊಟ್ಟೂರೇಶ್ವರ ಮಠದ ಡಾ.ಕೊಟ್ಟೂರೇಶ್ವರ ಶ್ರಿಗಳು, ಆರೇಶಂಕರ ಶಂಕರಲಿಂಗ ಮಠದ ರೇವಣಸಿದ್ದೇಶ್ವರ ಶ್ರೀಗಳು ಆರ್ಶಿವಚನ ನೀಡಿದರು. ಜಿಪಂ ಮಾಜಿ ಸದಸ್ಯರಾದ ಗಂಗಾಧರ ನಾಡಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಎಂ.ಎಸ್.ಪಾಟೀಲ ಮಾತನಾಡಿದರು. ನಿಂಗು ಬಳಿಗಾರ ನಿರೂಪಿಸಿದರು.ಈ ವೇಳೆ ಗುರುಪ್ರಸಾದ ದೇಶಮುಖ, ರಾಯನಗೌಡ ತಾತರೆಡ್ಡಿ, ಎಂ.ಬಿ.ಅಂಗಡಿ, ಬಸವರಾಜ ಡೇರೆದ, ಹಣಮಂತ ಕುರಿ, ಭೀಮಣ್ಣ ಗುರಿಕಾರ, ವೀರೇಶ ಕಾಜಗಾರ, ಬಸಪ್ಪ ಉಂಡಿ, ಸಂಗಪ್ಪ ಕಡ್ಡಿ, ಷಣ್ಮುಖಪ್ಪ ಹೊರಪ್ಯಾಟಿ, ಸಮ್ಮದಪ್ಪ ತೋಟದ, ಶಿವಪ್ಪ ಕೋರಿ, ಸಿದ್ದಪ್ಪ ಕೋರಿ, ಬಾಳಪ್ಪ ಅಮರಾವದಗಿ, ಹಾಗೂ ಇನ್ನಿತರರು ಇದ್ದರು.
----------------ಕೋಟ್
ನಮ್ಮ ಜೀವನ ಸಂಸಾರದಲ್ಲಿ ಎಲ್ಲಾ ವರ್ಗದ ಜನರು ನಮಗೆ ಬೇಕಾಗುತ್ತಾರೆ. ಜಾತಿ ಎಂಬುದು ನಮ್ಮ ಸಾಮರಸ್ಯದ ಜೀವನವನ್ನು ಹಾಳು ಮಾಡುತ್ತದೆ, ಎಲ್ಲರು ಕೂಡ ಒಂದಾಗಿ ಬಾಳಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ನಗು ನಗುತಾ ಇರುವ ಮನೆಯೇ ಸ್ವರ್ಗವಾಗಿದೆ.ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ