ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ ವಾರದ ಸಂತೆ

| Published : Jan 16 2025, 12:46 AM IST

ಸಾರಾಂಶ

ಮಾರುಕಟ್ಟೆಯಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಶೌಚಾಲಯಗಳು ನಿರ್ವಹಣೆಯ ಕೊರತೆಯಿಂದಾಗಿ ಗಬ್ಬು ನಾರುತ್ತಿವೆ.

ಬಿ.ಎಚ್.ಎಂ. ಅಮರನಾಥಶಾಸ್ತ್ರಿ

ಕಂಪ್ಲಿ: ಪಟ್ಟಣದಲ್ಲಿನ ವಾರದ ಸಂತೆ ಮಾರುಕಟ್ಟೆಯು ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ತರಕಾರಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಮಾರುಕಟ್ಟೆಯಲ್ಲಿ ಒಟ್ಟು 22 ಮಳಿಗೆಗಳಿದ್ದು, ಅದರಲ್ಲಿ 10-15 ಮಳಿಗೆಗಳನ್ನು ಮಾತ್ರ ತರಕಾರಿ ವ್ಯಾಪಾರಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದು, ಹಿಂಬದಿಯಲ್ಲಿನ ಕೆಲ ಮಳಿಗೆಗಳು ನಿರ್ವಹಣೆಯ ಕೊರತೆಯಿಂದಾಗಿ ಅನುಪಯುಕ್ತವಾಗಿವೆ. ಇದರಿಂದ ಕೆಲ ಕಟ್ಟಡಗಳು ಇದ್ದೂ ಇಲ್ಲದಂತಾಗಿದೆ.

ಕಾಂಪೌಂಡ್ ಕಿರಿದಾಗಿದ್ದು ಕೆಲಭಾಗ ಕುಸಿದಿದೆ. ಕೆಲ ಮಳಿಗೆಗಳಲ್ಲಿ ಸ್ಥಳೀಯರು ಮಲಮೂತ್ರ ವಿಸರ್ಜನೆಗೆ ತೆರಳುತ್ತಿದ್ದಾರೆ. ಇನ್ನು ಸಂಜೆಯಂತೂ ಈ ಮಾರುಕಟ್ಟೆ ಮದ್ಯ ವ್ಯಸನಿಗಳ ತಾಣವಾಗಿರುತ್ತದೆ. ಎಲ್ಲಿ ಬೇಕೆಂದರಲ್ಲಿ ಮದ್ಯ ಸೇವಿಸಿ ಬಿಸಾಡಲಾದ ಬಾಟಲ್‌ಗಳು, ಕಸ-ಕಡ್ಡಿ, ಗಾಜಿನ ಚೂರುಗಳು ಬಿದ್ದಿರುತ್ತವೆ. ಮಾರುಕಟ್ಟೆಯಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಶೌಚಾಲಯಗಳು ನಿರ್ವಹಣೆಯ ಕೊರತೆಯಿಂದಾಗಿ ಗಬ್ಬು ನಾರುತ್ತಿವೆ. ಮಾರಾಟಗಾರರು, ಗ್ರಾಹಕರಿಗೆ ಮಲಮೂತ್ರ ವಿಸರ್ಜನೆಗೆ ಸುಸುಜ್ಜಿತ ಶೌಚಾಲಯದ ವ್ಯವಸ್ಥೆಯಿಲ್ಲದೆ ಜನ ಎಲ್ಲೆಂದರಲ್ಲಿ ಬಹಿರ್ದೆಸೆಗೆ ತೆರಳುತ್ತಾರೆ. ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆಯಿಲ್ಲ. ವಿದ್ಯುತ್‌ ಸಂಪರ್ಕವಿದ್ದರೂ ಸರಿಯಾಗಿ ಬೀದಿದೀಪಗಳ ವ್ಯವಸ್ಥೆ ಇಲ್ಲ. ಇರುವ ಕೆಲ ವಿದ್ಯುತ್ ದೀಪಗಳೂ ಕೆಟ್ಟಿದ್ದು, ಮಾರುಕಟ್ಟೆ ಕಗ್ಗತ್ತಲಿನಿಂದ ಕೂಡಿದೆ. ಇದರಿಂದಾಗಿ ಮದ್ಯ ವ್ಯಸನಿಗಳಿಗೆ ಅನುಕೂಲವಾದಂತಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿನ ಮೂಲ ಸೌಕರ್ಯಗಳ ಕೊರತೆ ವ್ಯಾಪಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಬಿಡಾಡಿ ದನ-ಹಂದಿಗಳ ಹಾವಳಿ

ಮಾರುಕಟ್ಟೆಯಲ್ಲಿ ಬಿಡಾಡಿ ದನಗಳು, ಹಂದಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಇಲ್ಲಿನ ವ್ಯಾಪಾರಿಗಳು ರೋಸಿಹೋಗಿದ್ದಾರೆ. ವ್ಯಾಪಾರಕ್ಕಿಂತ ಹೆಚ್ಚಾಗಿ ಇವುಗಳನ್ನು ನಿಯಂತ್ರಿಸುವುದೇ ಕೆಲಸವಾಗಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ದನಗಳ ಹಾವಳಿಯಿಂದಾಗಿ ಮಹಿಳೆಯರು, ಮಕ್ಕಳು, ವಯಸ್ಕರು ಮಾರುಕಟ್ಟೆಗಳಿಗೆ ಬರಲು ಸಮಸ್ಯೆಯಾಗಿದೆ. ಇದರಿಂದಾಗಿ ವಾರದ ಸಂತೆ (ಮಂಗಳವಾರ)ಯಂದು ಗಂಗಾವತಿ, ಹೊಸಪೇಟೆ, ಬಳ್ಳಾರಿ ಸೇರಿ ವಿವಿಧೆಡೆಗಳಿಂದ ತರಕಾರಿ ಮಾರಾಟಕ್ಕೆ ಬರುವ ವ್ಯಾಪಾರಿಗಳು ಮಾರುಕಟ್ಟೆಯ ಹೊರ ಭಾಗದಲ್ಲಿ, ರಸ್ತೆ ಪಕ್ಕದಲ್ಲಿ ವ್ಯಾಪಾರಕ್ಕೆ ಕೂರುತ್ತಾರೆ. ಇದರಿಂದಾಗಿ ಪ್ರತಿ ಮಂಗಳವಾರ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಕುರಿತು ಪುರಸಭೆ ಅಧಿಕಾರಿಗಳು, ಸದಸ್ಯರ ಗಮನಕ್ಕೆ ತಂದಿದ್ದು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ನಾಮಕೆವಾಸ್ತೆ ಬಂದು ಮಾರುಕಟ್ಟೆಯನ್ನು ವೀಕ್ಷಿಸಿ ತೆರಳುತ್ತಾರೆಯೇ ಹೊರೆತು ಈ ವರೆಗೂ ಯಾವುದೇ ಅಧಿಕಾರಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾರುಕಟ್ಟೆಯಲ್ಲಿನ ಮಳಿಗೆಗಳನ್ನು, ಶೌಚಾಲಯಗಳನ್ನು ದುರಸ್ತಿಗೊಳಿಸಬೇಕು. ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಇಲ್ಲಿನ ವ್ಯಾಪಾರಿಗಳಾದ ಮಹಮದ್ ಆರೀಫ್, ಮೈನುದ್ದೀನ್ ಸೇರಿದಂತೆ ಇತರರ ಒತ್ತಾಯವಾಗಿದೆ.

ಅನುಕೂಲ ಕಲ್ಪಿಸಿ

ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ, ವಿದ್ಯುತ್ ದೀಪ ಸೇರಿ ಮೂಲಭೂತ ಸೌಕರ್ಯಗಳಿಲ್ಲ. ಸ್ವಚ್ಛತೆ ಹಾಗೂ ನಿರ್ವಹಣೆಯ ವಿಷಯದಲ್ಲಿ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಬಿಡಾಡಿ ದನಗಳ ಹಾವಳಿಯೂ ಹೆಚ್ಚಾಗಿದೆ. ಅಧಿಕಾರಿಗಳು ಮಾರುಕಟ್ಟೆಯ ದುರಸ್ತಿ ಕಾರ್ಯಕ್ಕೆ ಮುಂದಾಗುವ ಮೂಲಕ ಅನುಕೂಲ ಕಲ್ಪಿಸಿಕೊಡಬೇಕು ಎಂದು ಇಲ್ಲಿನ ವ್ಯಾಪಾರಿ ಗುರು ಆಗ್ರಹಿಸಿದ್ದಾರೆ. ನೂತನ ಮಾರುಕಟ್ಟೆ

ಹಳೆ ಮಾರುಕಟ್ಟೆಯನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ನೂತನ ಮಾರುಕಟ್ಟೆ ನಿರ್ಮಿಸಿ ವ್ಯಾಪಾರಿಗಳಿಗೆ ಹಾಗೂ ಮಾರುಕಟ್ಟೆಗೆ ಆಗಮಿಸುವ ಗ್ರಾಹಕರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ತಿಳಿಸಿದ್ದಾರೆ.