ಹೆದ್ದಾರಿಯಲಿ ಬಿಳಿ ಪಟ್ಟಿ ಮಾಯ; ಅಪಘಾತಕ್ಕೆ ಆಹ್ವಾನ!

| Published : Jan 07 2025, 12:15 AM IST

ಸಾರಾಂಶ

ಗುಂಡ್ಲುಪೇಟೆ-ನಂಜನಗೂಡು ಹೆದ್ದಾರಿಯ ರಾಘವಾಪುರ ಬಳಿ ಹೆದ್ದಾರಿಯಲ್ಲಿ ಲೇನ್‌ ಮಾರ್ಕಿಂಗ್‌ ಅಳಿಸಿ ಹೋಗಿರುವುದು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುವ ಮೈಸೂರು-ಊಟಿ ಹಾಗೂ ಗುಂಡ್ಲುಪೇಟೆ-ಸುಲ್ತಾನ್‌ ಬತ್ತೇರಿ ಹೆದ್ದಾರಿಯಲ್ಲಿ ಲೇನ್‌ ಮಾರ್ಕಿಂಗ್ (ಬಿಳಿ ಪಟ್ಟಿ) ಬಹುತೇಕ ಅಳಿಸಿ ಹೋಗಿದ್ದು, ಇದು ರಾತ್ರಿ ವೇಳೆ ಅಪಘಾತಕ್ಕೆ ಎಡೆ ಮಾಡಿ ಕೊಡುತ್ತಿದೆ.!

ಮೈಸೂರು-ಗುಂಡ್ಲುಪೇಟೆ, ಬಂಡೀಪುರ ಕೆಕ್ಕನಹಳ್ಳ ಮತ್ತು ಗುಂಡ್ಲುಪೇಟೆಯಿಂದ ಮೂಲೆಹೊಳೆ ಗಡಿ ತನಕ ಹಾದು ಹೋಗುವ ಹೆದ್ದಾರಿಯಲ್ಲಿ ಲೇನ್‌ ಮಾರ್ಕಿಂಗ್‌ ಹೆದ್ದಾರಿ ಎರಡು ಬದಿ ಹಾಗೂ ಹೆದ್ದಾರಿ ಮಧ್ಯ ಭಾಗದಲ್ಲಿ ಬಹುತೇಕ ಕಡೆ ಅಳಿಸಿ ಹೋಗಿದೆ. ರಾತ್ರಿ ವೇಳೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಚಾಲಕರು, ಮಾಲೀಕರಿಗೆ ಹೆದ್ದಾರಿಯ ಮಧ್ಯ ಭಾಗದಲ್ಲಿ ಲೇನ್‌ ಮಾರ್ಕಿಂಗ್‌ ಅಳಿಸಿ ಹೋಗಿರುವ ಕಾರಣ ಹೆದ್ದಾರಿಯಲ್ಲಿ ಎದುರು ಬದುರು ಬರುವ ವಾಹನಗಳಿಗೆ ಹೆದ್ದಾರಿಯ ಮಧ್ಯಭಾಗ ಕಾಣದೆ ಡಿಕ್ಕಿ ಆಗಿವೆ ಹಾಗೂ ಮುಂದೆ ಕೂಡ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಲೇನ್‌ ಮಾರ್ಕಿಂಗ್‌ ಅಳಿಸಿ ಹೋಗಿರುವ ಕಾರಣ ವಾಹನಗಳ ಹೆದ್ದಾರಿ ಎಡ್ಜ್‌ ಕಾಣುತ್ತಿಲ್ಲ. ಹೆದ್ದಾರಿ ಎಡ್ಜ್‌ ಕಾಣಿಸಿದೆ ಹೆದ್ದಾರಿ ಬದಿಯ ಹಳ್ಳಕ್ಕೆ ವಾಹನಗಳು ಹೋಗಿವೆ, ಮುಂದೆಯೂ ಹೋಗಿ ಬಿದ್ದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಮೈಸೂರು-ಊಟಿ ಹಾಗೂ ಸುಲ್ತಾನ್‌ ಬತ್ತೇರಿ ಹೆದ್ದಾರಿಗಳೇನು ಹಳ್ಳಿಯ ರಸ್ತೆಯಲ್ಲ, ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಈ ಹೆದ್ದಾರಿಯಲ್ಲಿ ಅಳಿಸಿ ಹೋಗಿರುವ ಲೇನ್‌ ಮಾರ್ಕಿಂಗ್‌ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮುಂದಾಗಿಲ್ಲ.

ಸುಂಕ ವಸೂಲಿ:

ಮೈಸೂರು-ಊಟಿ ಹೆದ್ದಾರಿಯ ಕಡಕೊಳ ಬಳಿ, ಗುಂಡ್ಲುಪೇಟೆ ಕೇರಳ ಹೆದ್ದಾರಿಯ ಕನ್ನೇಗಾಲ ಬಳಿ ಟೋಲ್‌ನಲ್ಲಿ ಸುಂಕ ಕಟ್ಟಿ ವಾಹನಗಳು ಸಂಚರಿಸುತ್ತಿವೆ. ಆದರೆ ಸುಂಕ ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳಿಸಿ ಹೋಗಿ ಅಪಘಾತಕ್ಕೆ ಕಾರಣವಾಗಿರುವ ಲೇನ್‌ ಮಾರ್ಕಿಂಗ್‌ (ಬಿಳಿ ಪಟ್ಟಿ) ಹಾಕಿಸಲು ಮೀನಮೇಷ ಎಣಿಸುತ್ತಿದೆ ಎಂದು ಸವಾರರು ಆರೋಪಿಸಿದ್ದಾರೆ.

ಸಿಎಂ ಕ್ಷೇತ್ರ ಬೇರೆ!:ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು-ಊಟಿ ಹೆದ್ದಾರಿ ಹಾದು ಹೋಗಿದೆ. ಅಲ್ಲದೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕಸಭಾ ಸದಸ್ಯ ಸುನೀಲ್‌ ಬೋಸ್‌, ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ ಕ್ಷೇತ್ರದಲ್ಲಿ ಹೆದ್ದಾರಿ ಗತಿ ಈ ರೀತಿಯಾಗಿದೆ.

ಲೇನ್‌ ಮಾರ್ಕಿಂಗ್‌ ಯಾವಾಗ?:

ಮೈಸೂರು-ಊಟಿ ಹಾಗೂ ಗುಂಡ್ಲುಪೇಟೆ-ಸುಲ್ತಾನ್‌ ಬತ್ತೇರಿ ಹೆದ್ದಾರಿಯಲ್ಲಿ ಅಳಿಸಿ ಹೋದ ಲೇನ್‌ ಮಾರ್ಕಿಂಗ್‌ ಮಾಡಿಸೋದು ಯಾವಾಗ ಎಂದು ಸಿಎಂ, ಸಚಿವ, ಶಾಸಕರನ್ನು ವಾಹನಗಳ ಸವಾರರು ಪ್ರಶ್ನಿಸಿದ್ದಾರೆ. ಈ ಹೆದ್ದಾರಿಗಳಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಶಾಸಕರು ವಾರದಲ್ಲಿ ನಾಲ್ಕೈದು ದಿನಗಳಾದರೂ ಕಾರಲ್ಲಿ ಓಡಾಟ ನಡೆಸುತ್ತಿದ್ದಾರೆ. ಸಂಸದರು ಇದ್ದರೂ ಈ ರಸ್ತೆಯಲ್ಲಿ ಓಡಾಡಿ ಕೆಲ ತಿಂಗಳುಗಳೇ ಉರುಳುತ್ತಿವೆ. ಅವರಿಗೆಲ್ಲಿ ಲೇನ್‌ ಮಾರ್ಕಿಂಗ್‌ ಅಳಿಸಿರೋದು ಕಾಣಿಸೋದು ಹಾಗಾಗಿ ನಂಜನಗೂಡು, ಗುಂಡ್ಲುಪೇಟೆ ಶಾಸಕರು ಸಂಸದರ ಮೇಲೆ ಒತ್ತಡ ಹೇರಿ ಲೇನ್‌ ಮಾರ್ಕಿಂಗ್‌ ಹಾಕಿಸಿ ಅಪಘಾತ ತಡೆ ಗಟ್ಟಲಿ ಎಂಬುದು ಕನ್ನಡಪ್ರಭದ ಕಳಕಳಿ.