ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಮುಖ್ಯ

| Published : May 30 2024, 12:46 AM IST

ಸಾರಾಂಶ

ಚನ್ನಪಟ್ಟಣ: ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳು ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಚನ್ನಪಟ್ಟಣ: ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳು ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ತಾಲೂಕಿನ ಹೊಂಗನೂರು ಗ್ರಾಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವೆಂಕಟಪ್ಪನವರ ಸಹಕಾರದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೆಪಿಎಸ್ ಶಾಲಾ ಕಟ್ಟಡ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳಬೇಕಿದ್ದು, ಆ ನಿಟ್ಟಿನಲ್ಲಿ ರಾಜಕಾರಣಿಗಳು ಕಾರ್ಯಪ್ರವೃತರಾಬೇಕಿದೆ. ಪ್ರತಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಡಾ. ವೆಂಕಟಪ್ಪ ಅವರಂತಹ ದಾನಿಗಳು ಹಾಗೂ ಉದ್ಯಮಿಗಳ ಜತೆ ಸೇರಿ ಈ ರೀತಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದರೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿದೆ ಎಂದರು.

ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ನಮ್ಮ ಗ್ರಾಮದಲ್ಲಿ ೭ ಎಕರೆ ಪ್ರದೇಶದಲ್ಲಿ ನಮ್ಮ ತಂದೆಯ ಹೆಸರಿನಲ್ಲಿ ಒಂದು ಸರ್ಕಾರಿ ಶಾಲೆ ಕಟ್ಟಿಸಿದ್ದು, ಆ ಶಾಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ೪೫ ಲಕ್ಷ ಬಹುಮಾನ ಪಡೆದಿದೆ. ನಮ್ಮ ಶಾಲೆ ಉದ್ಘಾಟನೆಗೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲೆಯನ್ನು ಪ್ರತಿ ತಾಲೂಕಿನಲ್ಲೂ ಇಂತಹ ಒಂದು ಶಾಲೆ ಇದ್ದರೆ ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.

ರಾಜ್ಯಕ್ಕೆ ಮಾದರಿ ಶಾಲೆಯಾಗಲಿ: ಕಣ್ವ ಡಯಾಗ್ನೋಸ್ಟಿಕ್ ಮಾಲೀಕ ಡಾ. ವೆಂಕಟಪ್ಪ ಅವರ ಆಹ್ವಾನದ ಮೇರೆಗೆ ಇಂದು ಇಲ್ಲಿನ ಶಾಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದೆ. ವೆಂಕಟಪ್ಪ ಸುಮಾರು ೯ ಕೋಟಿಗೂ ಹೆಚ್ಚು ಹಣ ವ್ಯಯಿಸಿ ಗುಣಮಟ್ಟದ ಎರಡು ಶಾಲೆಯನ್ನು ನಿರ್ಮಿಸಿಕೊಡುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲದ ಅತ್ಯಾಧುನಿಕ ಸೌಲಭ್ಯಗಳನ್ನು ಈ ಶಾಲೆ ಹೊಂದಿದ್ದು, ಇಡೀ ರಾಜ್ಯದಲ್ಲಿ ಇದೊಂದು ಮಾದರಿ ಶಾಲೆಯಾಗಿದ್ದು, ನಮ್ಮ ತಾಲೂಕಿನ ಶಾಲೆಗಿಂತ ಒಂದು ಹಜ್ಜೆ ಮುಂದಿದೆ ಎಂದು ಪ್ರಶಂಸಿಸದರು.

ಇಲ್ಲಿ ಉತ್ತಮ ವಾತಾವರಣ, ಸಿಬ್ಬಂದಿ ಇದ್ದಾರೆ. ಮಾನಸಿಕವಾಗಿ ನೆಮ್ಮದಿ ಕೊಡುವಂತ ವಾತಾವರಣ ಇದ್ದಾರೆ ಉತ್ತಮ ಶಿಕ್ಷಣ ಕೊಡಬಹುದು, ಶಿಕ್ಷಕರು ಸಹ ಉತ್ತಮವಾಗಿ ಪಾಠ ಮಾಡಲು ಅನುಕೂಲ. ಎಲ್ಲ ತಾಲೂಕಿನಲ್ಲೂ ವೆಂಕಪಟ್ಟನಂಥ ದಾನಿಗಳು ಮುಂದೆ ಬಂದು ಇಂಥ ಒಂದು ಶಾಲೆ ಕಟ್ಟಿಸಿದರೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಎಂದರು.

ಶಾಲೆಗೆ ಆಗಮಿಸಿದ ಬಸವರಾಜ ಹೊರಟ್ಟಿ, ಶಾಲೆಯ ಮೂರು ಹಂತಸ್ತಿನ ಕಾಮಗಾರಿ, ಪೀಠೋಪಕರಣಗಳ, ವಿದ್ಯಾರ್ಥಿಗಳಿಗೆ ಯಾವೆಲ್ಲ ಸೌಲಭ್ಯಗಳು ಕಲ್ಪಿಸಲಾಗುತ್ತಿದೆ, ಈ ಶಾಲೆಯಿಂದ ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಬ ಮಾಹಿತಿ ಪಡೆದುಕೊಂಡರು.

ಈ ವೇಳೆ ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ. ವೆಂಕಟಪ್ಪ, ಡಿಡಿಪಿಐ ಪುರೊಷೋತ್ತಮ್, ಕ್ಷೇತ್ರ ಶಿಕ್ಷಾಣಾಧಿಕಾರಿ ಮರೀಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಶಿಕ್ಷಕರಾದ ನಾಗೇಶ್, ವಿಷಕಂಠ, ಹಿರೇಮಠ್ ಉಪಸ್ಥಿತರಿದ್ದರು.

ಪೋಟೊ೨೯ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ನಿರ್ಮಿಸುತ್ತಿರುವ ಕೆಪಿಎಸ್ ಶಾಲಾ ಕಟ್ಟಡ ಕಾಮಗಾರಿಯನ್ನು ಸಭಾಪತಿ ಬಸವರಾಜ ಹೊರಟ್ಟಿ ವೀಕ್ಷಿಸಿದರು.