ಸಾರಾಂಶ
ಅಸಮಾನತೆ ಹೋಗಲಾಡಿಸಿ ಸಮಾನತೆಯಿಂದ ಬದುಕಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಆರ್ಥಿಕ ಅಸಮಾನತೆ ಜೊತೆಗೆ ಲಿಂಗಭೇದ ಅಸಮಾನತೆ ಸಮಾಜದಲ್ಲಿ ಹೆಚ್ಚಾಗಿರುವ ಇಂದು ಸಮಾನತೆ ದಿನಾಚರಣೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಅಸಮಾನತೆ ಹೋಗಲಾಡಿಸಿ ಸಮಾನತೆಯಿಂದ ಬದುಕಬೇಕು ಎಂಬುದು ಸಂವಿಧಾನದ ಆಶಯವಾಗಿದೆ ಎಂದು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಚ್.ಎಸ್ ಕಾವ್ಯಶ್ರೀ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ನಡೆದ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಆರ್ಥಿಕ ಅಸಮಾನತೆ ಜೊತೆಗೆ ಲಿಂಗಭೇದ ಅಸಮಾನತೆ ಸಮಾಜದಲ್ಲಿ ಹೆಚ್ಚಾಗಿರುವ ಇಂದು ಸಮಾನತೆ ದಿನಾಚರಣೆ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.
ಬಡವ ಶ್ರೀಮಂತ, ಮೇಲು ಕೀಳು, ಹೆಣ್ಣು ಗಂಡು ಸೇರಿದಂತೆ ಹಲವು ವಿಚಾರಗಳಲ್ಲಿ ಅಸಮಾನತೆ ಅಂತರ ಹೆಚ್ಚಾಗಿದೆ. ವಿದ್ಯಾರ್ಥಿಗಳು ಜನರಲ್ಲಿ ಅರಿವು ಮೂಡಿಸಿ ಎಲ್ಲರೂ ಸಮಾನ ಅವಕಾಶ ಪಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.ಅಧಿಕಾರ, ಅರ್ಥಿಕತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದಂತೆ ಹಂಚಿಕೆಯಾಗಬೇಕು. ಆಗಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಪ್ಯಾನಲ್ ವಕೀಲರಾದ ಮೋಹನ್ ಕುಮಾರ್ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಿ.ಯಶೋಧ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಶಂಕರಸ್ವಾಮಿ, ಅಪರ ಸರ್ಕಾರಿ ವಕೀಲ ಶ್ರೀಕಂಠಸ್ವಾಮಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅನಿಲ್ ಕುಮಾರ್, ಯಶೋಧ, ಶ್ರೀಕಂಠಸ್ವಾಮಿ, ಅನಿಲ್ ಕುಮಾರ್, ಮೋಹನ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.