ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಗೌಡರ ಜೀವನ ಮತ್ತು ಹೋರಾಟದಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು. ಕಾರ್ಪೊರೇಟ್ ಜಗತ್ತು ರಾಜಕಾರಣಿಗಳು ಕೈಗೊಂಬೆಯನ್ನಾಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಯುವ ಸಮೂಹ ಜವಾಬ್ದಾರಿಯುತವಾಗಿ ದೇಶ ಕಟ್ಟುವ ಕೆಲಸ ಮಾಡಬೇಕಿದೆ.

ಕನ್ನಡಪ್ರಭವ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ವಿದ್ಯಾ ಸಂಸ್ಥೆಯನ್ನು ಕಟ್ಟಿ ಬಹು ದೊಡ್ಡಗಾಗಿ ಬೆಳೆಸಿದ ಶಿಕ್ಷಣ ಕ್ಷೇತ್ರದ ಮಾಂತ್ರಿಕ ಮಾಜಿ ಸಂಸದ ದಿ.ಜಿ. ಮಾದೇಗೌಡರ ಆದರ್ಶಗಳನ್ನು ಅಳವಡಿಸಿಕೊಂಡು ಅವರಂತೆ ರೂಪುಗೊಳ್ಳಬೇಕು ಎಂದು ಸಂಗೀತ ನಿರ್ದೇಶಕ ಕವಿರಾಜ್ ಕರೆ ನೀಡಿದರು.

ಇಲ್ಲಿ ಭಾರತೀ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಭಾರತೀ ಉತ್ಸವದಲ್ಲಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಕಟ್ಟಿದ ಸಂಸ್ಥೆ ಇಂದು ಶರವೇಗದಲ್ಲಿ ಬೆಳೆದಿದೆ. ಜೊತೆಗೆ ಗೌಡರ ಸಾಮಾಜಿಕ, ಶೈಕ್ಷಣಿಕ ಆರೋಗ್ಯ ಮತ್ತು ರೈತಪರ ಕಾಳಜಿ ದೇಶ ವ್ಯಾಪ್ತಿ ಪಸಿರಿಸಿದೆ ಎಂದರು.

ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಗೌಡರ ಜೀವನ ಮತ್ತು ಹೋರಾಟದಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು. ಕಾರ್ಪೊರೇಟ್ ಜಗತ್ತು ರಾಜಕಾರಣಿಗಳು ಕೈಗೊಂಬೆಯನ್ನಾಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಯುವ ಸಮೂಹ ಜವಾಬ್ದಾರಿಯುತವಾಗಿ ದೇಶ ಕಟ್ಟುವ ಕೆಲಸ ಮಾಡಬೇಕಿದೆ ಎಂದರು.

ಇಂದಿನ ರಾಜಕಾರಣಿಗಳು ವರ್ತಮಾನ ಭವಿಷ್ಯತ್ ಬಗ್ಗೆ ಚಿಂತನೆ ನಡೆಸುವ ಬದಲು ಭೂತಕಾಲದ ವಿಷಯಗಳನ್ನು ಚರ್ಚೆಗೆ ತಂದು ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಭಾವನಾತ್ಮಕವಾಗಿ ಮತ ಕೇಳಲಾಗುತ್ತಿದೆ ಹೊರತು ಅಭಿವೃದ್ಧಿ ಪಡಿಸಿ ಮತ ಕೇಳುವ ಸನ್ನಿವೇಶಗಳು ಸೃಷ್ಟಿಯಾಗುತ್ತಿಲ್ಲ ಎಂದು ವಿಷಾದಿಸಿದರು.

ಎಐ ಯುಗದಲ್ಲಿ ಪ್ರತಿದಿನವೂ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಯುವಜನರು ರೀಲ್ಸ್ ಹಿಂದೆ ಹೋಗುವ ಬದಲು ಸ್ವಂತ ಆಲೋಚನೆಯಿಂದ ನೆಲದ ಮಣ್ಣಿನ ಸತ್ವವನ್ನು ಸಮಾಜಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಆಧುನಿಕ ವೇಗಕ್ಕೆ ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಾಲದ ಸವಾಲುಗಳನ್ನು ಎದುರಿಸಲು ತಮ್ಮ ಜ್ಞಾನ, ಪ್ರತಿಭೆ, ಚಿಂತನೆ ಹಾಗೂ ವ್ಯಕ್ತಿತ್ವವನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಟ ಶರಣ್ ಮಾತನಾಡಿ, ಉತ್ತಮ ವಾತಾವರಣದಲ್ಲಿ ಶಿಕ್ಷಣ ಕಲಿಯುವ ಬದಲು ಕಾಂಕ್ರೀಟ್ ಕಟ್ಟಡದಲ್ಲಿ ಶಿಕ್ಷಣ ಪಡೆಯುವಂತಹ ಕಾಲ ಘಟ್ಟದಲ್ಲಿ ಜ್ಞಾನಾರ್ಜನೆಗೆ ಭಾರತಿ ಶಿಕ್ಷಣ ಸಂಸ್ಥೆ ಕ್ಯಾಂಪಸ್ ಉತ್ತಮ ವಾತಾವರಣದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪರಿಶ್ರಮ, ಒಳ್ಳೆಯತನ, ಉದ್ದೇಶವಿದ್ದರೆ ಯಶಸ್ಸು ಸಾಧ್ಯ ಎಂಬ ಮೂರು ಸೂತ್ರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸಂತೋಷದಿಂದ ಅನುಭವಿಸಿ, ಉತ್ಸಾಹದಿಂದ ಓದಿ, ಕಲೆ, ಸಾಹಿತ್ಯ, ಕ್ರೀಡೆ ಮತ್ತು ಸಂಸ್ಕೃತಿಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಸಂಸ್ಥೆ ಅಧ್ಯಕ್ಷ, ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಗಳಿಗೆ ಸಹಕಾರಿಯಾಗುವಂತೆ ಭಾರತಿ ಉತ್ಸವವನ್ನು ಕಳೆದ ಹತ್ತು ವರ್ಷಗಳಿಂದ ಆಚರಿಸಲಾಗುತ್ತಿದೆ. ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಪ್ರತಿಭಾವಂತ ಕಲಾವಿದರನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಸಂಸ್ಥೆಯ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಭಾರತೀ ಉತ್ಸವ ಉತ್ತಮ ವೇದಿಕೆಯಾಗಿದೆ. ಈ ಮೂಲಕ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ಪ್ರಸ್ತುತ ತಲೆಮಾರಿನ ವಿದ್ಯಾರ್ಥಿಗಳನ್ನು ಇನ್ನಷ್ಟು ಆಕರ್ಷಿಸಲು ಶಿಕ್ಷಣ ಕ್ಷೇತ್ರದಲ್ಲಿ ಹೊಸತನದ ಅಗತ್ಯವಿದೆ. ಸಿನಿಮಾ ಸೇರಿ ವಿವಿಧ ಕ್ಷೇತ್ರಗಳು ಯುವಜನತೆಯನ್ನು ಆಕರ್ಷಿಸುವಂತೆ ಶಿಕ್ಷಣದಲ್ಲಿಯೂ ವಿದ್ಯಾರ್ಥಿಗಳನ್ನು ಸೆಳೆಯಲು ಹೊಸ ಪ್ರಯತ್ನಗಳನ್ನು ರೂಪಿಸಲು ಚಿಂತಿಸಲಾಗುತ್ತಿದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಕೆ.ಎಂ.ದೊಡ್ಡಿ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾ ಮೆರವಣಿಗೆ ಗಮನ ಸೆಳೆಯಿತು. ಚಿತ್ರನಟ ಶರಣ್ ಹಾಡು ಹಾಡಿ ರಂಜಿಸಿದರು. ಸಂಗೀತ ನಿರ್ದೇಶಕ ಕವಿರಾಜ್ ಹಾಗೂ ಚಿತ್ರನಟ ಶರಣ್ ಅವರನ್ನು ಕಾಲೇಜು ವತಿಯಿಂದ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಗಾಯನ ಸ್ಪರ್ಧೆ, ಹೆಸರಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಜಿ.ಮಧು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಜಿ.ಡಿ.ಹಳ್ಳಿ ಸಿದ್ದೇಗೌಡರು, ಕೆ.ಬಿ.ಮಹದೇವಪ್ಪ, ಟ್ರಸ್ಟಿ ಕಾರ್ಕಹಳ್ಳಿ ಬಸವೇಗೌಡ, ಪ್ರಧಾನ ಸಂಚಾಲಕರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಭಾರತೀ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ.ಎಸ್.ನಾಗರಾಜು, ಭಾರತೀ ಹೆಲ್ತ್ ಸೈನ್ಸ್‌ಸ್ ನಿರ್ದೇಶಕ ಡಾ.ಟಿ. ತಮೀಜ್‌ಮಣಿ, ಸಂಚಾಲಕರಾದ ಬಿ.ಕೆ. ಕೃಷ್ಣ, ಸುಂದ್ರೇಶ್ ಸೇರಿದಂತೆ ಮತ್ತಿತರಿದ್ದರು.