ಸಾರಾಂಶ
ಮಂಗಳೂರು ಹೊರವಲಯದ ಮಂಗಳೂರು ತಾಲೂಕಿನ ಕುಪ್ಪೆಪದವಿನ ನೆಲ್ಲಿಜೋರ ಎಂಬಲ್ಲಿ ಒಂಟಿ ಕೋತಿ ಕಾಟಕ್ಕೆ ನಲುಗಿದ ಕುಟುಂಬಗಳು, ಮಹಿಳೆಗೆ ಗಂಭೀರ ಗಾಯವಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಹೊರ ವಲಯದಲ್ಲಿ ಒಂಟಿ ಕೋತಿ ಕಾಟ ಆರಂಭವಾಗಿದ್ದು, ಕೋತಿಯ ಕಾಟಕ್ಕೆ ಬೆದರಿದ ಜನತೆ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಮಂಗಳೂರು ತಾಲೂಕಿನ ಕುಪ್ಪೆಪದವಿನ ನೆಲ್ಲಿಜೋರ ಎಂಬಲ್ಲಿ ಈ ವಿಚಿತ್ರ ಘಟನೆ ನಡೆಯುತ್ತಿದೆ.ಮಹಿಳೆಯರು ಹಾಗೂ ಲುಂಗಿ ಧರಿಸಿದವರನ್ನು ಗುರಿಯಾಗಿಸಿ ಕೋತಿ ಕಾಟ ನೀಡುತ್ತಿದೆ. ಕೇವಲ ಮೂರ್ನಾಲ್ಕು ಕುಟುಂಬಗಳಿಗೆ ಕೋತಿ ಕಾಟ ಕಂಟಕಪ್ರಾಯವಾಗಿದೆ. ಕೃಷಿಗೆ ಹಾನಿ ಮಾಡದೇ ಕೇವಲ ನೆಲ್ಲಿಜೋರ ಪ್ರದೇಶದ ಜನರ ಮೇಲೆ ಕೋತಿ ದಾಳಿ ನಡೆಸುತ್ತಿದೆ.
ಕಳೆದ 25 ದಿನಗಳಿಂದ ಕೋತಿ ದಾಳಿ ವಿಪರೀತ ಹಂತಕ್ಕೆ ಹೋಗುತ್ತಿದೆ. ಪ್ರಮುಖವಾಗಿ ಮೂರು ಕುಟುಂಬದ ಮೇಲೆ ಕಂಡ ಕಂಡಲ್ಲಿ ಕೋತಿ ಎರಗುತ್ತಿದ್ದು, ಮಾನವನ ಮೇಲಿನ ದ್ವೇಷದಿಂದ ದಾಳಿ ಮಾಡುತ್ತಿರುವಂತೆ ಕೋತಿ ವರ್ತಿಸುತ್ತಿದೆ. ಕೋತಿ ದಾಳಿಯಿಂದ ಮಹಿಳೆಯೋರ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೀಲಾಕ್ಷಿ ಎಂಬ ಮಹಿಳೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಆಕೆಯ ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇಷ್ಟೆಲ್ಲ ರದ್ಧಾಂತ ನಡೆಯುತ್ತಿದ್ದರೂ ಕೋತಿ ಸೆರೆ ಹಿಡಿಯುವ ವಿಚಾರದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.ಅರಣ್ಯ ಇಲಾಖೆ ಗೂಡು ಇರಿಸಿದರೂ ಅದಕ್ಕೆ ಸಿಲುಕಗೆ ಕೋತಿ ಪರಾರಿಯಾಗುತ್ತಿದೆ. ಹೀಗಾಗಿ ಕೈಯಲ್ಲಿ ದೊಣ್ಣೆ ಹಿಡಿದುಕೊಂಡೇ ಜನತೆ ಓಡಾಟ ನಡೆಸುವಂತಾಗಿದೆ. ಕೋತಿಯ ಕಾಟದಿಂದಾಗಿ ಕೋವಿಡ್ ಲಾಕ್‌ಡೌನ್‌ಗಿಂತಲೂ ಈ ಮೂರು ಮನೆಗಳ ಜನರ ಬದುಕು ದಯನೀಯವಾಗಿದೆ. ಮನೆಗಳಿಗೆ ನೆಟ್ ಅಳವಡಿಸಿ ಬಾಗಿಲು ಹಾಕಿ ನಾಲ್ಕು ಗೋಡೆಯ ಮಧ್ಯೆ ಜೀವನ ನಡೆಸುವಂತಾಗಿದೆ. ಒಂದೇ ಒಂದು ಮಂಗನ ಕಾಟಕ್ಕೆ ಅಕ್ಷರಶಃ ಸಂಕಷ್ಟಕ್ಕೆ ಈ ಕುಟುಂಬಗಳು ತುತ್ತಾಗಿದೆ.