ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಸೊನ್ನ ಆಲಮೇಲ ತಾಲೂಕಿನ ದೇವಣಗಾಂವ ನಡುವಿನ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರೀಜ್ ಮೇಲಿಂದ ತುಂಬಿ ಹರಿಯುತ್ತಿರುವ ಭೀಮಾ ನದಿಗೆ ಲಕ್ಷ್ಮೀ ಶಿವಾನಂದ(28) ಜಿಗಿದಿದ್ದು ಮೀನುಗಾರರ ಸಹಾಯದಿಂದ ಬದುಕುಳಿದ ಘಟನೆ ನಡೆದಿದೆ.ಲಕ್ಷ್ಮೀ ಶಿವಾನಂದ ಸೊನ್ನ-ದೇವಣಗಾಂವ ಬ್ಯಾರೇಜ್ ಮೇಲಿಂದ ಭೀಮಾ ನದಿಗೆ ಜಿಗಿದ ಸುದ್ದಿ ತಿಳಿದ ಪತಿ ಶಿವಾನಂದ ಕಡಣಿ(36) ಹಾಗೂ ಆತನ ಗೆಳೆಯ ರಾಜು ಅಂಕಲಗಿ(38) ಸ್ಥಳಕ್ಕೆ ಧಾವಿಸಿ ಭೀಮಾ ನದಿಗೆ ಜಿಗಿದು ಹುಡುಕಾಟ ನಡೆಸಿದ್ದಾರೆ. ಸ್ಥಳೀಯ ಮೀನುಗಾರರ ಸಹಾಯದಿಂದ ನದಿಗೆ ಜಿಗಿದಿದ್ದ ಲಕ್ಷ್ಮೀ ಶಿವಾನಂದ ಅವರನ್ನು ನದಿಯಿಂದ ಹೊರ ತರಲಾಗಿದೆ. ಆದರೆ ನೀರಿನ ಸೆಳೆತ ಜೋರಾಗಿದ್ದ ಪರಿಣಾಮ ಪತಿ ಶಿವಾನಂದ ಹಾಗೂ ಆತನ ಗೆಳೆಯ ರಾಜು ಅಂಕಲಗಿ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇಬ್ಬರನ್ನು ಹೊರ ತೆಗೆಯುವುದಕ್ಕಾಗಿ ಅಗ್ನಿಶಾಮಕ ದಳದವರು ಹರಸಾಹಸ ಪಟ್ಟು ಕೊನೆಗೆ ಕತ್ತಲಾದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಸ್ಥಳಕ್ಕೆ ಎಸ್.ಪಿ, ಡಿವೈಎಸ್‌ಪಿ, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಸೋಮಲಿಂಗ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಇಬ್ಬರ ಹುಡುಕಾಟದ ಮಾಹಿತಿ ಪಡೆದುಕೊಂಡಿದ್ದಾರೆ.
ಕತ್ತಲಿನಿಂದ ಕಾರ್ಯಾಚರಣೆ ನಾಳೆಗೆ ಮುಂದೂಡಿಕೆ: ನದಿಗೆ ಜಿಗಿದ ಲಕ್ಷ್ಮೀಯನ್ನು ಉಳಿಸಲು ನದಿಗೆ ಜಿಗಿದ ಪತಿ ಶಿವಾನಂದ ಹಾಗೂ ಆತನ ಗೆಳೆಯ ರಾಜು ಅಂಕಲಗಿ ನದಿಯ ನೀರಲ್ಲಿ ಕೊಚ್ಚಿ ಹೋಗಿದ್ದು ಇಬ್ಬರ ಹುಡುಕಾಟ ಮುಂದುವರೆದಿದೆ. ಶಿವಾನಂದ ಮೂಲತಃ ಕಲಬುರಗಿ ತಾಲೂಕಿನ ಕಡಣಿ ಗ್ರಾಮದವನಾಗಿದ್ದು ಅಫಜಲ್ಪುರ ಪಟ್ಟಣದಲ್ಲಿ ಆಟೋ ಮೊಬೈಲ್ಸ್ ಅಂಗಡಿ ಇಟ್ಟುಕೊಂಡಿದ್ದಾನೆ.ಈತನ ಗೆಳೆಯ ರಾಜು ಅಂಕಲಗಿ ಅಫಜಲ್ಪುರ ತಾಲೂಕಿನವನಾಗಿದ್ದು ಅಫಜಲ್ಪುರ ಪಟ್ಟಣದಲ್ಲಿ ಟೆಲರಿಂಗ್ ಕೆಲಸ ಮಾಡಿಕೊಂಡಿದ್ದಾನೆ. ನದಿಗೆ ಜಿಗಿದ ಲಕ್ಷ್ಮೀ ತನ್ನ ತವರು ಮನೆಯಾದ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮಕ್ಕೆ ಹೋಗುವಾಗ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್ ಮೇಲಿಂದ ನದಿಗೆ ಜಿಗಿದು ಈ ದುರ್ಘಟನೆ ಸಂಭವಿಸಿದೆ.ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವಾದರೂ ಪತ್ನಿಯನ್ನು ಉಳಿಸಲು ನದಿಗೆ ಜಿಗಿದ ಪತಿ ಹಾಗೂ ಆತನ ಸ್ನೇಹಿತನ ಪತ್ತೆ ಆಗಿಲ್ಲವಾದ್ದರಿಂದ ಅವರ ಹುಡುಕಾಟದ ಕಾರ್ಯಾಚರಣೆ ಮುಂದುವರೆದಿದೆ.