ಸಾರಾಂಶ
ಶಿರಹಟ್ಟಿ: ಭಾರತೀಯ ಸಂಸ್ಕೃತಿಯಲ್ಲಿ ಶರಣರು, ಸಂತರು, ದಾಸರು ಅತ್ಯಂತ ವಿಶಿಷ್ಟ ಸ್ಥಾನ ಪಡೆದವರು. ಮಾನವ ಮನಸ್ಸಿಗೆ ಮುದ ನೀಡುವ ಅನುಭಾವ ದಯ ಪಾಲಿಸಿದವರೇ ಶರಣರು ಮತ್ತು ಸಂತರು.ಅವರಿಂದಲೇ ಮಾನವೀಯತೆ ಮತ್ತು ಲೋಕಹಿತ ಭಾವನೆಗಳು ಪ್ರಪಂಚದಲ್ಲಿ ಉಳಿದುಕೊಂಡಿವೆ ಎಂದರೆ ಅತಿಶಯೋಕ್ತಿಯಲ್ಲ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ.ಬಳಿಗೇರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ತಾಲೂಕಿನ ಕೊಂಚಿಗೇರಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮಾಸಗಳಲ್ಲಿ ಶ್ರೇಷ್ಠವಾದದ್ದು,ಪವಿತ್ರವಾದದ್ದು ಮತ್ತು ಮಾಸಗಳ ರಾಜ ಅಂತ ಕರೆಸಿಕೊಂಡಿರುವ ಶ್ರಾವಣ ಮಾಸದಲ್ಲಿ ಶರಣರ ಸಂತರ ದಾರ್ಶನಿಕರ ಮಾತುಗಳನ್ನು ಕೇಳಿ ನಮ್ಮ ಮನಸ್ಸುಗಳನ್ನು ಅರಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶರಣರು, ಸಂತರು, ದಾರ್ಶನಿಕರಿಂದಾಗುವ ಪ್ರಯೋಜನ ಮತ್ತು ಮಹತ್ವ ವರ್ಣಿಸುವುದು ಅಸಾಧ್ಯ.ಅವರು ಅಸಂಭವವಾದುದನ್ನು ಸಂಭವಾಗಿಸುವ ಅಸಾಧಾರಣ ಶಕ್ತಿಯುಳ್ಳವರು.ಅವರೆಲ್ಲರೂ ಪರಮಾತ್ಮನ ತತ್ವ ಆರಾಧಿಸಿ ವಿಶ್ವಾತ್ಮರಾದವರು.ಎಲ್ಲೆಲ್ಲಿಯೂ ಭಗವಂತನನ್ನು ಕಾಣುವ ಅವರು ಉದಾರ ಚರಿತರು. ಶ್ರಾವಣ ಮಾಸದಲ್ಲಿ ಇವರೆಲ್ಲರ ಮಾತುಗಳನ್ನು ಕೇಳಿ ತಿಳಿದುಕೊಂಡು ಅದರಂತೆ ಬದುಕಬೇಕು ಎಂದರು.ನಾವು ಕೇಳುವ ಮತ್ತು ಹೇಳುವ ಮಾತುಗಳು ಇನ್ನೊಬ್ಬರ ಮನಸ್ಸಿಗೆ ಉದ್ವೇಗವನ್ನುಂಟು ಮಾಡದೆ ಹಿತವಾಗಿ ಮಿತವಾಗಿ ಪ್ರಿಯವಾಗಿರಬೇಕು. ಅಂತಹ ಮಾತುಗಳು ಮನುಷ್ಯನ ವ್ಯಕ್ತಿತ್ವವನ್ನು ಗಟ್ಟಿಯಾಗಿ ಕಟ್ಟಿಕೊಡಬಲ್ಲವು ಹಾಗೂ ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸಬಲ್ಲವು ಎಂದರು.
ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ಮಂಗಳ ಗೌರಿ, ವರಮಹಾಲಕ್ಷ್ಮಿ, ರಕ್ಷಾಬಂಧನ, ಕೃಷ್ಣಾಷ್ಟಮಿ, ಗುರುರಾಯರ ಆರಾಧನೆ ಹೀಗೆ ಹಲವಾರು ಹಬ್ಬಗಳು ಬರುತ್ತವೆ. ಈ ಹಬ್ಬಗಳ ಆಚರಣೆಯ ಹಿಂದಿರುವ ಉದ್ದೇಶ ತಿಳಿದುಕೊಂಡು ಆಚರಣೆ ಮಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಕರೆ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ತ ಗೌರವಾಧ್ಯಕ್ಷ ಗಿರೀಶ ಕೋಡಬಾಳ ಪ್ರಾಸ್ತಾವಿಕ ಮಾತನಾಡಿ, ಭಾರತೀಯ ಮಹಿಳೆಯರು ಭಾರತೀಯ ಸಂಸ್ಕೃತಿ ಹರಿಕಾರರು. ಮಹಿಳೆ ಇಲ್ಲದ ಸಮಾಜವಾಗಲಿ ಅಥವಾ ಸಾಹಿತ್ಯವಾಗಲಿ ಇಲ್ಲ. ಮಹಿಳೆ ಭಾರತೀಯ ಸಂಸ್ಕೃತಿಯ ಸಂಕೇತವಾಗಿದ್ದಾಳೆ ಎಂದು ಹೇಳಿದರು.
ಹಿರಿಯರು ಬಿಟ್ಟು ಹೋದ ಸನಾತನ ಸಂಸ್ಕೃತಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಶ್ರಾವಣ ಮಾಸದಲ್ಲಿ ಬರುವ ಹಬ್ಬ ಹರಿದಿನಗಳು ಆಚರಣೆಗಳು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಮನುಕುಲದ ಶ್ರೇಯಸ್ಸು ಬಯಸುವವರು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ನವೀನಕುಮಾರ ಅಳವಂಡಿ ವಹಿಸಿದ್ದರು. ಆರ್.ಆರ್. ಗಡ್ಡದೇವರಮಠ, ಎನ್.ಆರ್. ಕುಲಕರ್ಣಿ, ಶಿವಪ್ರಕಾಶ ಮಹಾಜನ್‌ಶೆಟ್ಟರ್, ಶಿವನಗೌಡ ಪಾಟೀಲ್, ತಿಮ್ಮರಡ್ಡಿ ಮರಡ್ಡಿ, ರಮೇಶ್ ನಿರ್ವಾಣಶೆಟ್ಟರ, ತಿಮ್ಮರೆಡ್ಡಿ ಅಳವಂಡಿ, ಸಿ.ಬಿ. ಕುಲಕರ್ಣಿ, ವೀರಣ್ಣ ಹುಡೇದ, ಪರಯ್ಯನವರ, ಹೊನ್ನಪ್ಪ ಉದನವರ, ಎಸ್.ಆರ್. ಹತ್ತಿಕಾಳ, ಬಿ.ಎಚ್.ಮಡಿವಾಳರ ಉಪಸ್ಥಿತರಿದ್ದರು. ಚನ್ನಪ್ಪ ಬೂದಿಹಾಳ ಶಿಕ್ಷಕರು ನಿರೂಪಿಸಿದರು. ಎಸ್.ಎಚ್. ಸುಗ್ನಳ್ಳಿ ಸ್ವಾಗತಿಸಿದರು. ಆರ್.ಎಂ. ಯಣಿಗಾರ, ಅಶೋಕ ಬಡಿಗೇರ ಪ್ರಾರ್ಥನೆಗೈದರು.