ಬಸವಾದಿ ಶರಣರ ವಚನಗಳು ಸಮಾಜಕ್ಕೆ ದಾರಿದೀಪ

| Published : Jan 22 2025, 12:32 AM IST

ಸಾರಾಂಶ

12ನೇ ಶತಮಾನದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ನೇರ ಮತ್ತು ನಿಷ್ಠುರ ನಡೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಬಸವಾದಿ ಶರಣರ ವಚನಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

- ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಅಪರ ಡಿಸಿ ಕುಮಾರಸ್ವಾಮಿ - - - ಕನ್ನಡಪ್ರಭ ವಾರ್ತೆ ಚಿತ್ರದುರ್ಗ

12ನೇ ಶತಮಾನದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ನೇರ ಮತ್ತು ನಿಷ್ಠುರ ನಡೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಬಸವಾದಿ ಶರಣರ ವಚನಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯರ ವಚನಗಳಲ್ಲಿ ಅವರ ನಡೆ-ನುಡಿ ವಿಶಿಷ್ಟವಾಗಿರುವುದನ್ನು ಗಮನಿಸಬಹುದಾಗಿದೆ. ಸಮಾಜದ ಅಂಕುಡೊಂಕುಗಳನ್ನು ಇರುವುದನ್ನು ಇದ್ದ ಹಾಗೆ ಹೇಳುವ ವ್ಯಕ್ತಿತ್ವವನ್ನು ಅವರು ಹೊಂದಿದ್ದರು. ಹಿಂದುಳಿದ ಸಮಾಜಗಳಲ್ಲಿ ಮೂಢನಂಬಿಕೆ, ಕಂದಾಚಾರಗಳು ಹೆಚ್ಚಾಗಿವೆ. ಶರಣರ ವಚನ, ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮಲ್ಲಿರುವ ಕಂದಾಚಾರ, ಮೂಢನಂಬಿಕೆ ಹೋಗಲಾಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕು ಎಂದು ಬಿ.ಟಿ.ಕುಮಾರಸ್ವಾಮಿ ಸಲಹೆ ನೀಡಿದರು.

ಹಿರಿಯೂರು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ. ಎಸ್. ಮಾರುತಿ ಉಪನ್ಯಾಸ ನೀಡಿ, 12ನೇ ಶತಮಾನದ ಶರಣರಲ್ಲಿ ಅಂಬಿಗರ ಚೌಡಯ್ಯ ಬಹಳ ಮುಖ್ಯರಾಗುತ್ತಾರೆ. ತನಗೆ ತಾನೇ ರೂಪಿಸಿಕೊಳ್ಳುವ ತಯಾರಕರು ಅವರು. ಜಗತ್ತು ಹೇಗಿರಬೇಕು ಎಂಬುವುದಕ್ಕಿಂತ ಮುಖ್ಯವಾಗಿ ನಾನು ಹೇಗಿರಬೇಕು ಎಂಬುದನ್ನು ಅವರು ತಿಳಿಸಿದ್ದರು. ವಚನಕಾರರು ಸಮಾಜವನ್ನು ದೂಷಣೆ ಮಾಡಲಿಲ್ಲ. ನಾವು ಸಮಾಜದ ಭಾಗ, ಹಾಗಾಗಿ ನಾವು ಸರಿಯಾಗಿರಬೇಕು ಎಂಬುದನ್ನು ಹೇಳಿದ್ದಾರೆ ಎಂದರು.

ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದ ಅಧ್ಯಕ್ಷ ಎಚ್.ಡಿ.ರಂಗಯ್ಯ ಮಾತನಾಡಿ, ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಸ್ಮಾರಕ ಭವನ ಮತ್ತು ವಿದ್ಯಾಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಸರ್ಕಾರದಿಂದ 5 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ.ಗುರುನಾಥ, ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದ ಕಾರ್ಯದರ್ಶಿ ಪಿ.ಶ್ರೀನಿವಾಸ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಸಮಾಜದ ಮುಖಂಡರಾದ ನಾಗರಾಜ್, ಶಿವಾನಂದ್, ಆರ್.ಪ್ರಕಾಶ್, ಜಯಣ್ಣ, ಮಂಜುನಾಥ್, ಮಹೇಶ್, ಶಶಿಕಿರಣ್, ರವಿಚಂದ್ರ, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. ಚಳ್ಳಕೆರೆ ತಾಲೂಕು ಮಲ್ಲೂರಹಳ್ಳಿಯ ರಾಜಣ್ಣ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

- - -

ಕೋಟ್‌ ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂಬ ಬಸವಣ್ಣನವರ ವಚನದ ಆಶಯದಂತೆ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳುವುದೇ ಜಗತ್ತಿನ ಬಹುದೊಡ್ಡ ಬದಲಾವಣೆ. ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಕಾರಾತ್ಮಕ ಬದುಕು ಸಾಗಿಸಬಹುದು

- ಡಾ. ಎಸ್.ಮಾರುತಿ, ಉಪನ್ಯಾಸಕ

- - - -21ಸಿಟಿಡಿ1.ಜೆಪಿಜಿ:

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ದಿನಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಪುಷ್ಪನಮನ ಸಲ್ಲಿಸಿದರು.