ಸಾರಾಂಶ
ಶಿಗ್ಗಾಂವಿ: ಮನುಷ್ಯ ಭವ್ಯ ಮನೆ, ಮಹಲುಗಳನ್ನು ಕಟ್ಟಿದರೆ ಬದುಕು ಸಾರ್ಥಕವಾಗುವುದಿಲ್ಲ. ಆ ಮನೆಯ ಮಂದಿಯ ಮನದಲ್ಲಿ ಸುಜ್ಞಾನದ ದೀಪ ಬೆಳಗಬೇಕು. ಸತ್ಪುರುಷರ ನಡೆ, ನುಡಿಗಳು ಜೀವನ ವಿಕಾಸಕ್ಕೆ ಬೆಳಕು ತೋರುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶನಿವಾರ ತಾಲೂಕಿನ ಬಂಕಾಪುರ ಅರಳೆಲೆ ಹಿರೇಮಠದ ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ ೫೧ನೇ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಚಿನ್ನ, ಬೆಳ್ಳಿ, ಉಡುಗೆ-ತೊಡುಗೆಗಳು ಮನಕ್ಕೆ ಮುದ ಕೊಡುವ ಬಹಿರಂಗದ ಅಲಂಕಾರಗಳು. ದಾನ, ದಯೆ, ಪರೋಪಕಾರ, ದೈವೀ ಗುಣಗಳು ಆತ್ಮಾನಂದವನ್ನು ನೀಡುವ ಅಮೂಲ್ಯ ಸಾಧನಗಳು. ಬದುಕನ್ನು ಕೆಡಿಸುವ, ನೆಮ್ಮದಿ ಕಳೆಯುವ ಸಾಮಾನ್ಯರ ನಿಂದೆಯ ನುಡಿಗಳನ್ನು ಮನುಷ್ಯ ನೆನಪಿಡುತ್ತಾನೆ. ಆದರೆ ಸತ್ಪುರುಷರ ಅಮರ ನುಡಿಗಳನ್ನು ಮರೆಯುತ್ತಾನೆ. ಮೌಲ್ಯಾಧಾರಿತ ಬದುಕಿಗೆ ಆಚಾರ್ಯರು ಕೊಟ್ಟ ಸಂದೇಶಗಳನ್ನು ಹೃದಯದಲ್ಲಿಟ್ಟು ನಿತ್ಯ ಸ್ಮರಿಸಿ ನಡೆದರೆ ನಮ್ಮ ಬಾಳ ಬದುಕು ಬಲು ಸುಂದರ. ಲಿಂ. ಶ್ರೀ ಗುರು ರುದ್ರಮುನಿ ಶಿವಾಚಾರ್ಯರ ಸರಳ, ಸಾತ್ವಿಕ ವ್ಯಕ್ತಿತ್ವ, ಸಜ್ಜನಿಕೆ ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಅಧ್ಯಾತ್ಮ ಲೋಕಕ್ಕೆ ಮತ್ತು ಸಕಲರ ಬಾಳಿಗೆ ವೀರಶೈವ ಧರ್ಮದ ಮಠಗಳು ಅಮೂಲ್ಯ ಕೊಡುಗೆ ಕೊಟ್ಟಿವೆ ಎಂದು ಹೇಳಿದರು.ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಅಧ್ಯಾತ್ಮ ದಾರಿಗೆ ಹೊಸ ಭಾಷ್ಯ ಬರೆದ ಕೀರ್ತಿ ಶ್ರೀ ಗುರು ರುದ್ರಮುನಿ ಶಿವಾಚಾರ್ಯರಿಗೆ ಸಲ್ಲುತ್ತದೆ. ಮನುಷ್ಯನ ಬದುಕು ಹೊರಗೆ ಭವ್ಯವಾಗಿ ಕಂಡರೂ ಒಳಗೆ ಬರಡಾಗಿದೆ. ಬರಡಾದ ಹೃದ್ಭೂಮಿಯಲ್ಲಿ ಶಿವಜ್ಞಾನದ ಬೀಜ ಬಿತ್ತಿ, ಸುಖ, ಶಾಂತಿ ಬದುಕಿಗೆ ಅವರು ತೋರಿದ ದಾರಿ ನಮ್ಮೆಲ್ಲರಿಗೂ ದಾರಿದೀಪ ಎಂದರು.
ಅಧ್ಯಕ್ಷತೆ ವಹಿಸಿದ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ಲಿಂ. ಶ್ರೀ ಗುರು ರುದ್ರಮುನಿ ಶಿವಾಚಾರ್ಯರ ದೂರದೃಷ್ಟಿ, ಧರ್ಮಪ್ರಜ್ಞೆ ಮತ್ತು ಗುರು ಪರಂಪರೆಯ ಚಿಂತನಗಳು ನಮ್ಮೆಲ್ಲರ ಬದುಕಿನ ಉನ್ನತಿಗೆ ಪ್ರೇರಕಶಕ್ತಿಯಾಗಿವೆ ಎಂದರು.ಹಾವೇರಿಯ ಸಂಜೀವಕುಮಾರ ನೀರಲಗಿ ಅವರಿಗೆ “ಶ್ರೀ ರುದ್ರಮುನೀಶ್ವರ ಸಂಪದ” ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯಾಸೀರಖಾನ್ ಪಠಾಣ, ಮಾಜಿ ಸಂಸದ ಮಂಜುನಾಥ ಕುನ್ನೂರ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಪಾಲ್ಗೊಂಡಿದ್ದರು. ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯರು, ಶಾಂತಪುರಮಠದ ಶಿವಾನಂದ ಶಿವಾಚಾರ್ಯರು, ಹಾವೇರಿ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕೂಡಲ ಗುರುಮಹೇಶ್ವರ ಶ್ರೀಗಳು ಉಪಸ್ಥಿತರಿದ್ದು, ಶ್ರೀ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.ವಿನಯಕುಮಾರ ಅರಳೆಲೆಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ಎಸ್. ಅರಳೆಲೆ ಹಿರೇಮಠ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಮತ್ತು ಎಂ.ಬಿ. ಉಂಕಿ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ಲಿಂ. ಶ್ರೀ ಗುರು ರುದ್ರಮುನಿ ಶಿವಾಚಾರ್ಯರ ಬೆಳ್ಳಿ ಪುತ್ಥಳಿಯ ಭವ್ಯ ಮೆರವಣಿಗೆ ಬಂಕಾಪುರ ಪಟ್ಟಣದಲ್ಲಿ ಜರುಗಿತು. ಸಮಾರಂಭದ ಆನಂತರ ಅನ್ನ ದಾಸೋಹ ನೆರವೇರಿತು.