ಸಾರಾಂಶ
ಇಳಕಲ್ಲ: ಮಹಾಕವಿ ಸರ್ವಜ್ಞರು ಸಮಾಜದಲ್ಲಿ ಸಮಾನತೆಯ ಜಾಗೃತಿ ಮೂಡಿಸುವ ವಚನ ರಚನೆ ಮಾಡಿ, ಸಮಾಜವನ್ನು ತಿದ್ದುವಂತ ಕೆಲಸ ಮಾಡಿದ್ದಾರೆ. ಅವರ ವಚನಗಳು ಇಂದು ನಮಗೆಲ್ಲ ದಾರಿ ದೀಪವಾಗಿವೆ ಎಂದು ಶಾಸಕ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು
ಕನ್ನಡಪ್ರಭ ವಾರ್ತೆ ಇಳಕಲ್ಲ
ಮಹಾಕವಿ ಸರ್ವಜ್ಞರು ಸಮಾಜದಲ್ಲಿ ಸಮಾನತೆಯ ಜಾಗೃತಿ ಮೂಡಿಸುವ ವಚನ ರಚನೆ ಮಾಡಿ, ಸಮಾಜವನ್ನು ತಿದ್ದುವಂತ ಕೆಲಸ ಮಾಡಿದ್ದಾರೆ. ಅವರ ವಚನಗಳು ಇಂದು ನಮಗೆಲ್ಲ ದಾರಿ ದೀಪವಾಗಿವೆ ಎಂದು ಶಾಸಕ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.ಇಲ್ಲಿಯ ಶ್ರೀ ವಿಜಯಮಹಾಂತೇಶ್ವರ ಶ್ರೀಮಠದ ದಾಸೋಹ ಭವನದಲ್ಲಿ ಕರ್ನಾಟಕ ಪ್ರದೇಶ ಕುಂಬಾರರ ಸಂಘ ಹಾಗೂ ಹುನಗುಂದ ಹಾಗೂ ಇಳಕಲ್ಲ ತಾಲೂಕ ಘಟಕಗಳ ವತಿಯಿಂದ ಹಮ್ಮಿಕೊಳ್ಳಲಾದ ಮಹಾಕವಿ ಸರ್ವಜ್ಞನವರ ೫೦೪ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಸರ್ಕಾರ ಕುಂಬಾರ ಸಮಾಜದ ಅಭಿವೃದ್ಧಿಗಾಗಿ ಸರ್ವಜ್ಞ ಅಭಿವೃದ್ಧಿ ನಿಗಮ ಸ್ಥಾಪಿಸುವ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ನಾನೂ ಸಹ ಒತ್ತಾಯಿಸುತ್ತೇನೆ. ನೀವು ಸಲ್ಲಿಸಿದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಹಿನ್ನೆಲೆಯಲ್ಲಿ ಕುಂಬಾರ ಸಮಾಜದ ವತಿಯಿಂದ ವಿಜಯಾನಂದ ಕಾಶಪ್ಪನವರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ನಗರದ ಗ್ರಾನೈಟ್ ಉದ್ಯಮಿ ವೆಂಕಟೇಶ ಸಾಕಾ ಆಗಮಿಸಿದ್ದರು. ಸಮಾಜದ ಮುಖಂಡರಾದ ಲಿಂಗರಾಜ ಕುಂಬಾರ, ರುದ್ರಪ್ಪ ಕುಂಬಾರ, ಮಹಾಂತೇಶ ಹನಮನಾಳ, ಲಕ್ಷ್ಮೀಬಾಯಿ ಕುಂಬಾರ, ಬಸವರಾಜ ಬೆಳಗಲ್ಲ, ಬಸವರಾಜ ಚಕ್ರಸಾಲಿ, ಮಲ್ಲಿಕಾರ್ಜುನ ಕುಂಬಾರ, ಹೊನ್ನಪ್ಪ ಗುಡಗುಂಟಿ, ಕುಮಾರ ಕುಂಬಾರ, ಮಂಜಯನಾಥ ಕುಂಬಾರ, ವೀರೇಶ ಕುಂಬಾರ, ಸಂಗಣ್ಣ ಕುಂಬಾರ, ಅಮರಪ್ಪ ಕುಂಬಾರ, ಹುಚ್ಚಪ್ಪ ಬೆಳಗಲ್ಲ ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.