ಸಾರಾಂಶ
ಗಜೇಂದ್ರಗಡ: ಪಟ್ಟಣದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಸಾರ್ವಜನಿಕರ ಸಮಸ್ಯೆ ಪರಿಹಾರ ದೂರದ ಮಾತಾಗಿದೆ. ಚುನಾಯಿತ ಸದಸ್ಯರಿಗೆ ಗಮನಕ್ಕೆ ಬಾರದಂತೆ ಅನವಶ್ಯಕ ಕೆಲಸಗಳು ನಡೆಯುತ್ತಿವೆ ಎಂದು ಪಟ್ಟಣದ ಪರಸಭೆ ಹಂಗಾಮಿ ಅಧ್ಯಕ್ಷ, ಮಾಜಿ ಚೇರ್ಮನ್ ಹಾಗೂ ಪುರಸಭೆ ಸದಸ್ಯರು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ದೂರಿದ ಘಟನೆ ಘಟನೆ ಶುಕ್ರವಾರ ನಡೆಯಿತು.
ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತದಿಂದ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಪುರಸಭೆ ಭಾಗಶಃ ಸದಸ್ಯರು ಜಿಲ್ಲಾಧಿಕಾರಿಗೆ ದೂರು ನೀಡಿದರು. ಜನಸ್ಪಂದನ ಸಭೆ ಕುರಿತು ಅಧಿಕಾರಿಗಳು ಪುರಸಭೆ ಸದಸ್ಯರಿಗೆ ಶುಕ್ರವಾರ ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅರ್ಜಿ ಸಿದ್ಧಪಡಿಸಿಕೊಂಡು ಬರಲು ವಿಳಂಬವಾಯಿತು ಎಂದು ಸದಸ್ಯರು ಹೇಳಿದರು.ಪಟ್ಟಣದ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಹದಗೆಟ್ಟಿದ್ದು, ದುರಸ್ತಿ ಕೆಲಸಕ್ಕೂ ಅನುದಾನವಿಲ್ಲ. ಹೊಸ ರಸ್ತೆ ಸೇರಿ ಇತರ ಕಾಮಗಾರಿಗೆ ಅನುದಾನ ಬಂದಿಲ್ಲ. ಅಲ್ಲದೆ ಸದಸ್ಯರ ಗಮನಕ್ಕೆ ಬಾರದೆ ಕೆಲವು ಅನವಶ್ಯಕ ಕಾಮಗಾರಿ ನಡೆಸುವುದಲ್ಲದೆ, ಪುರಸಭೆ ಸದಸ್ಯರನ್ನು ಕನಿಷ್ಠವಾಗಿ ನಡೆಸಿಕೊಳ್ಳಲಾಗುತ್ತಿದೆ. ಅಲ್ಲದೆ ರಾಜೀವ ಗಾಂಧಿ ವಸತಿ ನಿಗಮದಲ್ಲಿ ಸ್ಥಳೀಯ ೧೮೩/೧ ಮತ್ತು ೧೮೩/೩ರಲ್ಲಿ ಬಾಕಿ ಉಳಿದ ೧೮ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಆದೇಶವಿದ್ದರೂ ಅಧಿಕಾರಿಗಳು ನೀಡುತ್ತಿಲ್ಲ ಎಂದು ದೂರಿದರು.
ರಾಣಿ ಕಿತ್ತೂರ ಚೆನ್ನಮ್ಮನ ಶಾಲೆಯವರು ತಮ್ಮ ಜಾಗದಲ್ಲಿ ನಿರ್ಮಿಸಿಕೊಂಡಿರುವ ತಡೆಗೋಡೆಯನ್ನು ತೆರವುಗೊಳಿಸಲು, ಪಟ್ಟಣದ ೨೨ನೇ ವಾರ್ಡಿನಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿರುವ ಕುರಿತು, ರಸ್ತೆಗಳು ಹೊಂಡಗಳಾಗಿವೆ, ಪರಿಹಾರ ಒದಗಿಸಿ ಎಂದು, ೧೩ನೇ ವಾರ್ಡಿನ ಬಾಲಕಿಯರ ಮಾದರಿ ಶಾಲೆಯಲ್ಲಿ ಶೌಚಾಲಯ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ನೀಡಿ ಎಂದು, ಬೆಳೆ ಪರಿಹಾರ ನೀಡಿ ಎಂದು ಮನವಿ ಬಂದಿವೆ.ಇತ್ತ ಈ ಹಿಂದೆ ಹಂಡೇವಜಿರ ಅವರಿಗೆ ೨ಎ ಜಾತಿ ಪ್ರಮಾಣ ನೀಡಲಾಗುತ್ತಿತ್ತು. ಈಗ ೨ಎ ಪ್ರಮಾಣಪತ್ರ ನೀಡುವ ಬದಲು ತಮಗೆ ತಿಳಿದಂತೆ ಜಾತಿ ಪ್ರಮಾಣ ನೀಡುತ್ತಿರುವ ಪರಿಣಾಮ ನನ್ನ ಮಗಳಿಗೆ ೨ಎ ನೀಡಿದರೆ, ಮಗನಿಗೆ ೩ಬಿ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ವ್ಯಕ್ತಿಯೊಬ್ಬರು ಮನವಿ ನೀಡಿದರು.
ಉಣಚಗೇರಿ ಗ್ರಾಮದಲ್ಲಿನ ಕೋಳಿ ಫಾರ್ಮ್ ತೆರವಿಗೆ ಈ ಹಿಂದಿನ ಜನಸ್ಪಂದನ ಸಭೆಯಲ್ಲಿ ಮನವಿ ನೀಡಲಾಗಿತ್ತು, ಆದರೆ ಯಾವುದೇ ಕ್ರಮವಾಗಿಲ್ಲ ಎಂದು ದೂರು ನೀಡಲಾಯಿತು. ೧೫ ದಿನದೊಳಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.ಒಟ್ಟು ೧೪೨ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.
ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಸಿಪಿಐ ಎಸ್.ಎಸ್. ಬೀಳಗಿ, ಬಿಇಒ ರುದ್ರಪ್ಪ ಹುರಳಿ ಇದ್ದರು.