ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ವಿವೇಕಾನಂದ ವೃತ್ತದಲ್ಲಿ ನೂತನವಾದ ವೃತ್ತವನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಕಾರ್ಯ ಆರಂಭವಾಗಿ ಒಂದು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಇನ್ನೆರಡು ವರ್ಷ ನಡೆದರೂ ಸಮಸ್ಯೆಯಿಲ್ಲ! ಆದರೆ ಈ ಕಾಮಗಾರಿಗೆ ಬೇಕಾದ ಮರಳು ಕಲ್ಲು ಜಲ್ಲಿ ನೀರಿನ ಟ್ಯಾಂಕರ್ ಹಾಗೂ ಮರಮುಟ್ಟುಗಳನ್ನು ಈ ವೃತ್ತದಲ್ಲಿಯೇ ಸಂಗ್ರಹಿಸಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಜೊತೆಗೆ ಕಾಮಗಾರಿಯ ಫ್ಲೆಕ್ಸನ್ನೂ ವೃತ್ತದ ನಡುವೆಯೇ ಪ್ರದರ್ಶಿಸಲಾಗಿದೆ! ಹೀಗಾಗಿ ವೃತ್ತದ ಬಹುಪಾಲನ್ನು ಈ ಕಾಮಗಾರಿಯ ಉಪಕರಣಗಳೇ ಆಕ್ರಮಿಸಿವೆ.ಈ ವೃತ್ತದ ಬಳಿ ಕ್ಷಣಕ್ಕೊಂದರಂತೆ ಸಿಟಿ ಬಸ್ ಹಾದು ಹೋಗುತ್ತದೆ. ಅಲ್ಲದೆ ಈ ಭಾಗದಲ್ಲಿ ವಾಹನಗಳ ಸಾಲೇ ನಿಂತಿರುತ್ತದೆ. ಗಾಯದ ಮೇಲೆ ಬರೆ ಎಂಬಂತೆ ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿ ಭೀತಿ ಮೂಡಿಸುತ್ತಿವೆ.
ವೃತ್ತದ ಬಳಿ ರಾಶಿ ಬಿದ್ದ ಮರಳು ಜಲ್ಲಿಗಳಿಂದ ಬಚಾವಾಗಿ ತಪ್ಪಿಸಿಕೊಂಡು ಬರುವ ವಾಹನಗಳು ಈ ಗುಂಡಿಗಳಿಂದಲೂ ಪಾರಾಗಬೇಕಿದೆ!ಈ ಕಾಮಗಾರಿಯಿಂದಾಗಿ ಶೇ. 50 ವಾಹನಗಳು ವೃತ್ತವನ್ನು ಬಳಸದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅಪ್ರದಕ್ಷಿಣೆಯಾಗಿ ಸಂಚರಿಸಿ ಉಳಿದ ವಾಹನಗಳಿಗೆ ಅಪಾಯ ಉಂಟುಮಾಡುತ್ತಿವೆ.
ಇದಕ್ಕೆಲ್ಲಾ ಪರಿಹಾರವಿಲ್ಲವೇ? ಖಂಡಿತಾ ಇದೆಕಾಮಗಾರಿಗೆ ಬಳಸುತ್ತಿರುವ ಮರಮುಟ್ಟು ಟ್ಯಾಂಕರ್ ಜಲ್ಲಿ ಮರಳನ್ನು ವೃತ್ತದ ಸುತ್ತಲೂ ರಾಶಿ ಹಾಕುವ ಬದಲಾಗಿ ವೃತ್ತದ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾದ ಬಸ್ ತಂಗುದಾಣ, ಸಂಕೀರ್ಣದ ಬಳಿ ವಿಶಾಲವಾಗಿ ಖಾಲಿ ಇರುವ ಜಾಗದಲ್ಲಿ ಸಂಗ್ರಹಿಸಿದರೆ ಕಾಮಗಾರಿಗೂ ತೊಂದರೆಯಾಗುವುದಿಲ್ಲ. ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗುವುದಿಲ್ಲ. ಈ ಕೂಡಲೇ ಪಾಲಿಕೆಯು ಎಚ್ಚೆತ್ತು ವಿವೇಕಾನಂದ ವೃತ್ತದ ನಡುವೆ ರಾಶಿ ಹಾಕಿರುವ ಈ ಉಪಕರಣ ಹಾಗೂ ಮರಳು ಜಲ್ಲಿಯ ರಾಶಿಗಳನ್ನು ಅಲ್ಲಿಂದ ತೆರವುಗೊಳಿಸಿ ಪಕ್ಕದಲ್ಲಿರುವ ಸಂಕೀರ್ಣದತ್ತ ಸಾಗಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ.
-ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.