ಸಾರಾಂಶ
ಕೆ.ಆರ್.ಪೇಟೆ : ಕಾಮಗಾರಿ ಪೂರ್ಣಗೊಂಡಿದ್ದರೂ ಬಸ್ ನಿಲ್ದಾಣ ಲೋಕಾರ್ಪಣೆಗೊಳ್ಳದ ಕಾರಣ ತಾಲೂಕಿನ ಅಕ್ಕಿಹೆಬ್ಬಾಳು ವ್ಯಾಪ್ತಿಯ ಸಾರ್ವಜನಿಕರ ಸೇವೆಗೆ ಬಳಕೆಯಾಗದೆ ತೊಂದರೆಯಾಗುತ್ತಿದೆ.
ಹೋಬಳಿ ಕೇಂದ್ರ ಅಕ್ಕಿಹೆಬ್ಬಳು ಗ್ರಾಮದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸುಸಜ್ಜಿತ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿದೆ. ಅಗತ್ಯ ಸೌಲಭ್ಯ ಕಲ್ಪಿಸಿ ನಿಲ್ದಾಣದ ಕಾಮಗಾರಿ ಗುಣಮಟ್ಟದೊಂದಿಗೆ ಬಹುತೇಕ ಪೂರ್ಣಗೊಂಡಿದ್ದರೂ ಇನ್ನೂ ನಿಲ್ದಾಣದ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿಲ್ಲ.
ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಅಕ್ಕಿಹೆಬ್ಬಾಳು ಗ್ರಾಮವಿದೆ. ಪ್ರತಿನಿತ್ಯ ನೂರಾರು ಜನ ಅಕ್ಕಿಹೆಬ್ಬಾಳು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ತಾಲೂಕು ಕೇಂದ್ರ ಕೃಷ್ಣರಾಜಪೇಟೆ ಪಟ್ಟಣಕ್ಕೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಾರೆ. ಅಲ್ಲದೇ, ನಿತ್ಯ ಕೃಷಿ ಮತ್ತು ಇತರೆ ಚಟುವಟಿಕೆಗಳಿಗಾಗಿ ಅಕ್ಕಿಹೆಬ್ಬಾಳು ಗ್ರಾಮಕ್ಕೆ ಅನೇಕರು ಆಗಮಿಸುತ್ತಾರೆ.
ಕಳೆದ ಆರೇಳು ತಿಂಗಳಿನಿಂದ ಪಾಳು ಬಿದ್ದಿಂತೆ ಕಾಣುತ್ತಿದೆ. ಬಸ್ ನಿಲ್ದಾಣ ಇದ್ದರೂ ಪ್ರಯಾಣಿಕರು ಮಳೆ ಬಿಸಿಲಿನಲ್ಲಿಯೇ ರಸ್ತೆ ಬದಿ ನಿಂತು ಬಸ್ ಹತ್ತಬೇಕಾಗಿದೆ. ಗ್ರಾಮದಲ್ಲಿ ಗೌತಮ ಕ್ಷೇತ್ರ ಎಂದೇ ಪ್ರಸಿದ್ಧ ಪುರಾತನ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಸೋಮೆಶ್ವರ ದೇವಾಲಯಗಳಿವೆ. ದೇವಸ್ಥಾನಗಳನ್ನು ನೋಡಲು ಅನೇಕ ಭಕ್ತಾದಿಗಳು ಆಗಮಿಸುತ್ತಾರೆ. ಅವರೆಲ್ಲರೂ ಬಸ್ಸಿಗಾಗಿ ಕಾಯಲು ಸರಿಯಾದ ಜಾಗವಿಲ್ಲದೆ. ರಸ್ತೆ ಬದಿಯಲ್ಲಿರುವ ಅಂಗಡಿಗಳ ನೆರಳಿನಲ್ಲಿ ನಿಂತುಕೊಳ್ಳುತ್ತಾರೆ.
ಪ್ರಯಾಣಿಕರ ಸಂಕಷ್ಟ ನಿವಾರಣೆಗಾಗಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿತು. ಕಾಮಗಾರಿಯು ವೇಗವಾಗಿ ನಡೆದು ಸಂಪೂರ್ಣಗೊಂಡಿದೆ. ಸಾರಿಗೆ ಇಲಾಖೆ ಮಾತ್ರ ಇದುವರೆಗೂ ಬಸ್ ನಿಲ್ದಾಣ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸುವ ಮನಸ್ಸು ಮಾಡಿಲ್ಲ.
ಗ್ರಾಮಸ್ಥರು ಅನೇಕ ಬಾರಿ ಶಾಸಕರಿಗೆ ಮನವಿ ನೀಡಿದರೂ ಯಾವುದೇ ರೀತಿಯ ಸ್ಪಂದನೆ ಮತ್ತು ಉದ್ಘಾಟನಾ ನಿಗದಿತ ದಿನಾಂಕವು ಈವರೆಗೂ ದೊರೆತಿಲ್ಲ. ಸಾರಿಗೆ ಸಂಸ್ಥೆ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳು ಇನ್ನಾದರೂ ಈ ಬಸ್ ನಿಲ್ದಾಣ ಉದ್ಘಾಟಿಸಿ ಅಧಿಕೃತ ಆರಂಭಕ್ಕೆ ಹಸಿರು ನಿಶಾನೆ ತೋರಿಸಬೇಕು. ನಿತ್ಯ ಪ್ರಯಾಣಿಸಲು ತೊಂದರೆಯಾಗುತ್ತಿರುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಕೋರಿದ್ದಾರೆ.