ಜಿಲ್ಲಾ ಕೇಂದ್ರ ಹಾವೇರಿಯಲ್ಲೀಗ ರಸ್ತೆ ಅಗೆಯುವುದೇ ಕೆಲಸ

| Published : Sep 11 2024, 01:12 AM IST

ಜಿಲ್ಲಾ ಕೇಂದ್ರ ಹಾವೇರಿಯಲ್ಲೀಗ ರಸ್ತೆ ಅಗೆಯುವುದೇ ಕೆಲಸ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲೀಗ ಎಲ್ಲಿ ನೋಡಿದರೂ ರಸ್ತೆ ಅಗೆಯುವುದೇ ಕೆಲಸ.

ಹಾವೇರಿ:ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲೀಗ ಎಲ್ಲಿ ನೋಡಿದರೂ ರಸ್ತೆ ಅಗೆಯುವುದೇ ಕೆಲಸ.

ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆ ಮಾಡುವ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಒಂದು ಕಡೆ, ಒಳಚರಂಡಿ ಯೋಜನೆಗಾಗಿ ಮತ್ತೊಂದು ಕಡೆ ಡಾಂಬರು ರಸ್ತೆ ಅಗೆದು ಅರ್ಧಮರ್ಧ ಮುಚ್ಚಿ ಹೋಗುತ್ತಿರುವುದರಿಂದ ವಾಹನಗಳು ಗುಂಡಿಯಲ್ಲಿ ಸಿಲುಕಿ ಸವಾರರು ಪರದಾಡುವಂತಾಗಿದೆ. ಮಳೆಗಾಲದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಸರಿಯಿದ್ದ ರಸ್ತೆಯೆಲ್ಲ ಹಾಳಾಗಿದೆ. ಇತ್ತೀಚೆಗಷ್ಟೇ ಪ್ರವಾಸಿ ಮಂದಿರದ ಎದುರು ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಮಾಡಿದ್ದ ಸ್ಥಳದಲ್ಲಿ ಲಾರಿಯೊಂದು ಸಿಲುಕಿಕೊಂಡಿತ್ತು. ಶಹರ ಠಾಣೆ ಬಳಿ ಕಾಮಗಾರಿ ನಡೆದ ಪಿಬಿ ರಸ್ತೆಯಲ್ಲಿ ಮಹಾರಾಷ್ಟ್ರ ಮೂಲದ ಮತ್ತೊಂದು ಟ್ರಕ್ ಸುಮಾರು ಕೆಲವು ದಿನಗಳ ಹಿಂದೆ ಎರಡು ಅಡಿ ಆಳಕ್ಕೆ ಸಿಲುಕಿಕೊಂಡಿತ್ತು. ಮಂಗಳವಾರ ಹುಕ್ಕೇರಿಮಠದ ಎದುರು ಮತ್ತೊಂದು ಲಾರಿ ಸಿಲುಕಿದೆ. ಹೀಗೆ ನಿತ್ಯವೂ ಒಂದೊಂದು ಕಡೆ ಅವಾಂತರ ಸೃಷ್ಟಿಯಾಗುತ್ತಲೇ ಇದೆ.

ಚೆನ್ನೈ ಮೂಲದ ಎಜಿಪಿ ಪ್ರಥಮ ಸಿಟಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾವೇರಿ ನಗರದ 15,000 ಮನೆಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಇದಕ್ಕಾಗಿ ನಗರದ ಹಳೇ ಪಿಬಿ ರಸ್ತೆ, ಗುತ್ತಲ ರಸ್ತೆ, ಹಾವೇರಿ- ದೇವಗಿರಿ ರಸ್ತೆ, ವಿದ್ಯಾನಗರ, ಬಸವೇಶ್ವರ ನಗರ ಸೇರಿದಂತೆ ವಿವಿಧೆಡೆ ಎಲ್ಲೆಂದರಲ್ಲಿ ಗುಂಡಿ ತೋಡಿ, ಜಲ್ಲಿಕಲ್ಲು, ಮಣ್ಣು ಹಾಕಿ ನಾಪತ್ತೆಯಾಗುತ್ತಿದ್ದಾರೆ. ರಸ್ತೆ ಸರಿಪಡಿಸುವುದನ್ನೇ ಮರೆತಿದ್ದಾರೆ. ಇದು ವಾಹನ ಸವಾರರು. ಪಾದಚಾರಿಗಳ ಸಂಕಷ್ಟಕ್ಕೆ ಕಾರಣವಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ಪಿಬಿ ರಸ್ತೆ, ಗುತ್ತಲ ರಸ್ತೆ, ಸೇರಿ ಇತರ ರಸ್ತೆಗಳಲ್ಲಿ ಕಾಮಗಾರಿ ಮಾಡಲು ಅನುಮತಿ ಪಡೆದಿದ್ದಾರೆ. ಮಳೆಗಾಲದಲ್ಲಿ ಕಾಮಗಾರಿ ಮಾಡದಂತೆ ಹಾಗೂ ಗುಂಡಿ ತೋಡಿದ ಜಾಗದಲ್ಲಿ ಮೊದಲಿದ್ದಂತೆ ಉತ್ತಮ ಗುಣಮಟ್ಟದ ರಸ್ತೆ, ಪಾದಚಾರಿ ಮಾರ್ಗ ಮಾಡುವಂತೆ ಲೋಕೋಪಯೋಗಿ ಇಲಾಖೆ ಸ್ಪಷ್ಟವಾಗಿ ಸೂಚಿಸಿದೆ. ಸದ್ಯ ಮಳೆಗಾಲ ಇರುವ ಕಾರಣ ಕಾಮಗಾರಿ ಬಂದ್ ಮಾಡುವಂತೆಯೂ ಸೂಚಿಸಲಾಗಿತ್ತು. ಆದರೆ, ಕಾಮಗಾರಿ ನಿಲ್ಲಿಸದೇ, ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಮುಂದುವರಿದಿದೆ. ಗುಂಡಿ ಅಗೆದು ಸರಿಯಾಗಿ ಮುಚ್ಚದೇ ಕಾಮಗಾರಿ ಮಾಡುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಷ ಮಂಗಳೂರು ಆರೋಪಿಸಿದ್ದಾರೆ.

ಮಳೆಗಾಲದಲ್ಲೇ ಯುಜಿಡಿ ಕಾಮಗಾರಿ: ನಗರದಲ್ಲಿ ಮಳೆಗಾಲದಲ್ಲೇ ರಸ್ತೆ ಅಗೆಯುವ ಎಲ್ಲ ಕಾಮಗಾರಿ ಶುರುವಾಗಿದೆ. ಹಾನಗಲ್ಲ ರಸ್ತೆಯಲ್ಲಿ ಯುಜಿಡಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ಪೈಪ್‌ ಹಾಕಿ ಮುಚ್ಚಿದ್ದ ಮಣ್ಣು ಅರ್ಧ ಅಡಿಯಷ್ಟು ಇಳಿದಿದೆ. ಭಾರವಾದ ವಾಹನಗಳು ಬಂದರೆ ಸಿಲುಕುವುದು ನಿಶ್ಚಿತ. ಅದೇ ರೀತಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳಿಗೂ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯಿಂದ ಹಲವೆಡೆ ಧಕ್ಕೆ ಉಂಟಾಗಿದೆ. ಗುಂಡಿ ಸರಿಯಾಗಿ ಮುಚ್ಚದ ಕಾರಣ ಮಳೆ ಬಂದರೆ ಅವ್ಯವಸ್ಥೆಯಾಗುತ್ತಿದೆ. ಕರ್ಜಗಿ ರಸ್ತೆಯ ಕುಡಿಯುವ ನೀರಿನ ಪೈಪ್‌ಲೈನ್ ಡ್ಯಾಮೇಜ್ ಮಾಡಿದ್ದರು. ಆ ಲೈನ್ ಬಂದ್ ಮಾಡಿಸಿದ್ದೇವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಹಾಳಾಗಿರುವ ರಸ್ತೆಗೆ ಡಾಂಬರ್ ಹಾಕುವುದು, ಪೇವರ್ಸ್‌ ಅಳವಡಿಸುವುದು ಸೇರಿದಂತೆ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಪೌರಾಯುಕ್ತ ಪರಶುರಾಮ ಚಲವಾದಿ.ಅವೈಜ್ಞಾನಿಕ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಪ್ರಮುಖ ರಸ್ತೆಗಳನ್ನೆಲ್ಲ ಅಗೆದುಹಾಕಲಾಗಿದೆ. ಮುಚ್ಚಿದ ಮಣ್ಣು ಇಳಿದಿದೆ. ಸಂಬಂಧಪಟ್ಟ ಗುತ್ತಿಗೆದಾರರೇ ಮರು ಡಾಂಬರೀಕರಣ ಮಾಡಿಕೊಡಬೇಕು. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಬೇಕು ಎನ್ನುತ್ತಾರೆ ನಾಗರಿಕ ಸತೀಶ ಮಡಿವಾಳರ.