ಹಂಚಿನಾಳ ಅವರು ಜಮೀನಿನಲ್ಲಿ ನೀರು ಸಂಗ್ರಹಣೆಗಾಗಿ ಬೃಹತ್ ಕೃಷಿ ಹೊಂಡ ನಿರ್ಮಿಸಿದ್ದಾರೆ. ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಮಳೆ ನೀರು ಕೊಯ್ಲು ಮಾಡಿ ನೀರು ತುಂಬಿಸುವುದರ ಜತೆಗೆ ತುಂಗಭದ್ರಾ ನದಿಯಿಂದ ಕೊಳವೆ ಮುಖಾಂತರ ಈ ಕೃಷಿ ಹೊಂಡಕ್ಕೆ ನಿರಂತರವಾಗಿ ನೀರು ಸಂಗ್ರಹಿಸಿ ಇಡೀ ಕ್ಷೇತ್ರಕ್ಕೆ ನೀರುಣಿಸುತ್ತಾರೆ.

ಮುಂಡರಗಿ: ಕೃಷಿಯಲ್ಲಿ ಲಾಭವಿಲ್ಲ ಎಂದು ಗೊಣಗುವವರ ಮಧ್ಯೆ ಈಶ್ವರಪ್ಪ ಹಂಚಿನಾ‍ಳ ಅವರು ಸಮಗ್ರ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ. ಆ ಮೂಲಕ ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.

ತಾಲೂಕಿನ ನಾಗರಹಳ್ಳಿ ಗ್ರಾಮದ ಈಶ್ವರಪ್ಪ ಹಂಚಿನಾ‍ಳ ಅವರು ಸುಮಾರು 70 ಎಕರೆ ಜಮೀನಿನಲ್ಲಿ ಕೃಷಿ ಜತೆ ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಅರಣ್ಯ ಕೃಷಿ ಮುಂತಾದ ಕ್ಷೇತ್ರಗಳಲ್ಲಿ ತೊಡಗಿದ್ದಾರೆ. ಇವರ ಸಮಗ್ರ ಸಾಧನೆ ಒಳಗೊಂಡಿರುವ "ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳರ ಬದುಕಿನ ಪಯಣ " ಕೃತಿ ಜ. 3ರಂದು ಲೋಕಾರ್ಪಣೆ ಆಗುತ್ತಿದೆ.ಹಂಚಿನಾಳ ಅವರು ಜಮೀನಿನಲ್ಲಿ ನೀರು ಸಂಗ್ರಹಣೆಗಾಗಿ ಬೃಹತ್ ಕೃಷಿ ಹೊಂಡ ನಿರ್ಮಿಸಿದ್ದಾರೆ. ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಮಳೆ ನೀರು ಕೊಯ್ಲು ಮಾಡಿ ನೀರು ತುಂಬಿಸುವುದರ ಜತೆಗೆ ತುಂಗಭದ್ರಾ ನದಿಯಿಂದ ಕೊಳವೆ ಮುಖಾಂತರ ಈ ಕೃಷಿ ಹೊಂಡಕ್ಕೆ ನಿರಂತರವಾಗಿ ನೀರು ಸಂಗ್ರಹಿಸಿ ಇಡೀ ಕ್ಷೇತ್ರಕ್ಕೆ ನೀರುಣಿಸುತ್ತಾರೆ.ಮುಖ್ಯವಾಗಿ ಕಬ್ಬು, ಭತ್ತ, ಮೆಕ್ಕೆಜೋಳ, ಜೋಳ, ಶೇಂಗಾ ಮುಂತಾದ ಬೆಳೆಗಳನ್ನು ಸಾವಯವ ವಿಧಾನದಲ್ಲೇ ಬೆಳೆಯುತ್ತಿದ್ದಾರೆ. ವೈವಿಧ್ಯಮಯವಾದ ತೋಟಗಾರಿಕೆ ಬೆಳೆಗಳಾದ ವಿವಿಧ ಬಗೆಯ ಮಾವು, ಚಿಕ್ಕು, ಪೇರಲ, ಲಿಂಬೆ, ಸೀತಾಫಲ, ಅಂಜೂರ, ಹಲಸು, ಜಂಬೂನೇರಳೆ ಹಾಗೂ ವಿವಿಧ ತರಕಾರಿಗಳು, ಗುಲಾಬಿ ಹೂವಿನ ಬೆಳೆ, ಪ್ಲಾಂಟೇಶನ್ ಬೆಳೆಗಳಲ್ಲಿ ಖಾದ್ಯ ತೈಲದ ಎಣ್ಣೆ, ತಾಳೆ, ತೆಂಗು, ಗೋಡಂಬಿ ಬೆಳೆದು ಸಾಧನೆ ಮಾಡಿದ್ದಾರೆ.

1973- 74ರಲ್ಲಿ ರೇಷ್ಮೆ ಕೃಷಿ ಇಲಾಖೆಯಡಿ ಮಣ್ಣಿನಿಂದ ರೇಷ್ಮೆಯ ತನಕ (ಸ್ವಾಯಿಲ್ ಟು ಸಿಲ್ಕ್ ) ಯೋಜನೆಯಡಿ ರೇಷ್ಮೆ ಬೆಳೆ ಬೆಳೆದು ಸೈ ಎನಿಸಿಕೊಂಡರು. ನಿರಂತರವಾಗಿ ಹೈನುಗಾರಿಕೆ ಹಾಗೂ ಸಾವಯವ ಕೃಷಿಗಾಗಿ ವಿವಿಧ ತಳಿಗಳ ದೇಸೀಯ ಆಕಳು ಸಾಕಿದ್ದಾರೆ. 1985- 86ರಲ್ಲಿ ನಾಗರಹಳ್ಳಿ ಪಕ್ಕದ ಕಕ್ಕೂರ ತಾಂಡಾ (ಆಶಾಕಿರಣ)ದಲ್ಲಿ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿ, ನಿತ್ಯ 100 ಲೀಟರ್ ಹಾಲು ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಇದೀಗ ಅಲ್ಲಿ ಪ್ರತಿ ಮನೆಗೂ ಹೈನುಗಾರಿಕೆ ಇದೆ. 2018- 19ರಲ್ಲಿ ಜಾಲವಾಡಗಿ ಸಮೀಪ 30 ಎಕರೆ ಜಮೀನಿನಲ್ಲಿ ಗೋಡಂಬಿ ಬೆಳೆಯನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಹಂಚಿನಾಳ ಅವರ ಕೃಷಿ ಸಾಧನೆ ಮೆಚ್ಚಿ 2006- 07ರಲ್ಲಿ ರಾಜ್ಯ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿ ನೀಡಿದೆ. ಅಲ್ಲದೇ ಸರ್ಕಾರ ಇವರನ್ನು ಚೀನಾ, ಇಸ್ರೇಲ್, ಮಲೇಷ್ಯಾ, ಥೈಲ್ಯಾಂಡ್ ದೇಶಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸಿ ಅಲ್ಲಿನ ಕೃಷಿ ಬಗ್ಗೆ ಅಧ್ಯಯನ ಮಾಡಿಸಿದೆ.

ಸ್ವಾಭಿಮಾನದ ಬದುಕು: ಕೃಷಿ, ತೋಟಗಾರಿಕೆ ಉತ್ಪನ್ನಗಳ ಇಳುವರಿಯನ್ನು ಹೆಚ್ಚಿಸುವ ಉತ್ಕೃಷ್ಟ ಗುಣಮಟ್ಟದ ಪೌಷ್ಟಿಕಯುಕ್ತ ಉತ್ಪನ್ನಗಳನ್ನು ಬೆಳೆದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ತೋಟಗಾರಿಕೆ ಇಲಾಖೆ ವಿಶ್ರಾಂತ ಹಿರಿಯ ಸಹಾಯಕ ನಿರ್ದೇಶಕರಾದ ಸುರೇಶ ಕುಂಬಾರ ತಿಳಿಸಿದರು.