ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ಘಟಕ ಪ್ರಸಕ್ತ ವರ್ಷದ ಮೊದಲ ಶಿಬಿರವನ್ನು ತಾಲೂಕಿನ ಬಾಲೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ರೈತ ಮುಖಂಡ ಒ.ಟಿ.ತಿಪ್ಪೇಸ್ವಾಮಿ ಶಿಬಿರವನ್ನು ಉದ್ಘಾಟಿಸಿದರು.ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಸಂತಸ ತಂದಿದೆ. ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಇರುವುದಿಲ್ಲ, ಕೆಲವೊಂದು ಸಂದರ್ಭದಲ್ಲಿ ಸ್ವಚ್ಛತೆ ಇಲ್ಲವಾದರೆ ರೋಗಗಳು ನಮ್ಮನ್ನು ವ್ಯಾಪಿಸುತ್ತವೆ, ಈ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮನೆ, ಮನೆಗೂ ತೆರಳಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಗ್ರಾಮದ ಹಲವಾರು ರಸ್ತೆಗಳನ್ನು ಸ್ವಚ್ಚಗೊಳಿಸುವ ಮೂಲಕ ಜನರ ಸಂತೋಷಕ್ಕೆ ಕಾರಣಕರ್ತರಾಗಿದ್ಧಾರೆ. ಇಂತಹ ಶಿಬಿರಗಳು ಎಲ್ಲಾ ಗ್ರಾಮಗಳಲ್ಲೂ ನಡೆಯುವಂತಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಎಸ್‌ಎಸ್ ಅಧಿಕಾರಿ ಡಾ.ಜೆ.ತಿಪ್ಪೇಸ್ವಾಮಿ, ಕಾಲೇಜಿನಿಂದ ಪ್ರತಿವರ್ಷ ಹಮ್ಮಿಕೊಳ್ಳುವ ಶಿಬಿರಗಳು ಗ್ರಾಮೀಣ ಮಟ್ಟದಲ್ಲೇ ಏರ್ಪಡಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಎಲ್ಲರಿಂದಲೂ ಹೆಚ್ಚು ಸಹಕಾರ ಸಿಗುತ್ತದೆ. ಶಿಬಿರಗಳಿಂದ ಗ್ರಾಮದ ಸ್ವಚ್ಛತೆಯ ಜೊತೆಗೆ ಜನರ ವಿಶ್ವಾಸ ಗಳಿಸುವಲ್ಲಿ ನಾವು ಸಫಲರಾಗುತ್ತೇವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ.ಓ.ಬಾಬುಕುಮಾರ್ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ನಮ್ಮ ಕಾಲೇಜಿನಿಂದ ಶಿಬಿರ ಹಮ್ಮಿಕೊಂಡು ಗ್ರಾಮದ ಜನರಿಗೆ ಸ್ವಚ್ಛತೆಯ ಜೊತೆಗೆ ಇತರೆ ಚಟುವಟಿಕೆಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ. ವಿದ್ಯಾರ್ಥಿಗಳು ಹಲವಾರು ಗ್ರಾಮೀಣ ಕಲೆಗಳನ್ನು ಪ್ರದರ್ಶಿಸಿ ಜನರಿಗೆ ಕಲೆಯ ಬಗ್ಗೆಯೂ ಮಾಹಿತಿ ನೀಡುತ್ತಾರೆ. ಜನರ ಸಹಕಾರದೊಂದಿಗೆ ಕಾಲೇಜಿನ ಬೋಧಕ ಮತ್ತು ಸಿಬ್ಬಂದಿ ವರ್ಗ ಶಿಬಿರವನ್ನು ಯಶಸ್ವಿಗೊಳಿಸುವ ನಿಟ್ಟಿನಿಂದ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಗ್ರಾಮದ ಜನರು ಶಿಬಿರದ ಚಟುವಟಿಕೆಗಳ ಬಗ್ಗೆ ಆಸಕ್ತಿಹೊಂದಿರುವುದು ಕಂಡುಬಂದಿದೆ ಎಂದರು. ಗ್ರಾಪಂ ಸದಸ್ಯ ಒ.ಟಿ.ರಾಜೇಶ್, ಮುಖಂಡರಾದ ಪಿ.ಟಿ.ಪ್ರಶಾಂತ್‌ರೆಡ್ಡಿ, ಶಂಕರಮೂರ್ತಿ, ಆರ್.ಟಿ.ಭೀಮಣ್ಣ, ಆರ್.ಚಿದಾನಂದಪ್ಪ, ಒ.ಜಿ.ರವಿ, ಕೃಷ್ಣಾರೆಡ್ಡಿ, ಜಿ.ಕೆ.ಪ್ರವೀಣ್, ಪ್ರಾಧ್ಯಾಪಕರಾದ ಮುಜೀಬುಲ್ಲಾ, ಡಾ.ಡಿ.ಕರಿಯಣ್ಣ, ಡಾ.ಜಿ.ವಿ.ರಾಜಣ್ಣ, ಚಂದ್ರಶೇಖರ್, ಉಮೇಶ್, ನಂದಿನಿ ಮುಂತಾದವರು ಭಾಗವಹಿಸಿದ್ದರು.