ಕನ್ನಡಪ್ರಭ ವಾರ್ತೆ ಬೈಲಹೊಂಗಲ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಚಿತ್ರಕಲಾ ಸ್ಪರ್ಧೆ ಮೂಲಕ ವೇದಿಕೆಗೆ ತಂದು ಪ್ರೋತ್ಸಾಹಿಸಿ ಜವಾಬ್ದಾರಿ ನಿರ್ವಹಿಸುತ್ತಿರುವ ನಾಡಿನ ಹೆಮ್ಮೆಯ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ಗಳ ಕಾರ್ಯ ಅನನ್ಯವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಚಿತ್ರಕಲಾ ಸ್ಪರ್ಧೆ ಮೂಲಕ ವೇದಿಕೆಗೆ ತಂದು ಪ್ರೋತ್ಸಾಹಿಸಿ ಜವಾಬ್ದಾರಿ ನಿರ್ವಹಿಸುತ್ತಿರುವ ನಾಡಿನ ಹೆಮ್ಮೆಯ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ಗಳ ಕಾರ್ಯ ಅನನ್ಯವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ ಹೇಳಿದರು.

ಪಟ್ಟಣದ ಶಾಸಕರ ಮತಕ್ಷೇತ್ರ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.4ರಲ್ಲಿ ಶನಿವಾರ ಕನ್ನಡಪ್ರಭ, ಸುವರ್ಣ ನ್ಯೂಸ್, ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಸ್ಫರ್ಧೆ-2025 ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರು, ಪೋಷಕರು ತಮ್ಮ ಮಕ್ಕಳಲ್ಲಿನ ಅಭಿರುಚಿ ಗುರುತಿಸಿ ಪ್ರೋತ್ಸಾಹಿಸಿದರೆ ಸಾಧನೆ ಮಾಡಲು ಸಾಧ್ಯ. ಬಾಲ್ಯದಿಂದಲೇ ಮಕ್ಕಳಿಗೆ ಶ್ರದ್ಧೆ, ಶಿಸ್ತು ಕಲಿಸಬೇಕು. ಶಿಲ್ಪಕಲೆ, ಚಿತ್ರಕಲೆಗಳು ದೇಶದ ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳ ಉಳಿವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಿಳಿಸಿದರು.

ಒಂದು ಚಿತ್ರ ನೂರು ಶಬ್ದಕ್ಕೆ ಸಮ ಎನ್ನುವಂತೆ ಚಿತ್ರಕಲೆ ಸಮಾಜದಲ್ಲಿ ಉಳಿಯಬೇಕಾಗಿದೆ. ಸ್ಫರ್ಧೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ, ಅದರಲ್ಲಿ ಪಾಲ್ಗೊಂಡು ಜಗತ್ತಿಗೆ ಪ್ರತಿಭೆಯನ್ನು ತೋರಿಸಿಕೊಟ್ಟಾಗ ಹೆಚ್ಚಿನ ಗೌರವ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಕರ್ನಾಟಕ ವನ್ಯ ಜೀವಿ ಚಿತ್ರಕಲಾ ಸ್ಫರ್ಧೆ ಏರ್ಪಡಿಸಿದ್ದು, ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಮುಖ್ಯೋಪಾಧ್ಯಾಯ ಕೆ.ಜಿ.ಭಜಂತ್ರಿ ಮಾತನಾಡಿ, ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸುವ ಮಾಧ್ಯಮ ರಂಗದ ಕಳಕಳಿ ಮೆಚ್ಚುವಂತದ್ದು. ರಾಷ್ಟ್ರ-ರಾಜ್ಯವನ್ನು ಆಳಿ ಹೋದ ಅನೇಕ ರಾಜ ಮಹಾರಾಜರು ಚಿತ್ರಕಲೆಯನ್ನೇ ಉಸಿರಾಗಿಸಿಕೊಂಡಿದ್ದರು. ಅವು ಇಂದಿಗೂ ನೋಡಲು ಜೀವಂತವಾಗಿವೆ. ಹೀಗಾಗಿ ಚಿತ್ರಕಲೆ ನಮ್ಮ ಉಸಿರಾಗಬೇಕು ಎಂದರು.

ಚಿತ್ರಕಲಾ ಶಿಕ್ಷಕ ರಾಜು ಬಡಿಗೇರ ಮಾತನಾಡಿ, ಚಿತ್ರಕಲೆಯನ್ನು ಅವಿಭಾಜ್ಯ ಅಂಗವಾಗಿಸಿಕೊಂಡು ವಿದ್ಯಾರ್ಥಿಗಳು, ಯುವ ಜನರು ಇರದ ಬಗ್ಗೆ ಅಧ್ಯಯನ ನಡೆಸಿ ಆಸಕ್ತಿ ವಹಿಸಬೇಕು. ಚಿತ್ರಕಲೆ ಮನುಷ್ಯನನ್ನು ನಿಬ್ಬೆರಗಾಗಿಸಿದ್ದು, ಅದಕ್ಕೆ ಮನಸೋತ ಅನೇಕ ಉದಾಹರಣೆಗಳಿವೆ ಎಂದು ಅಭಿಪ್ರಾಯಪಟ್ಟರು.ಎಸ್‌ಡಿಎಂಸಿ ಸದಸ್ಯ ಮಹಾಂತೇಶ ರಾಜಗೋಳಿ ಮಾತನಾಡಿದರು. ಪತ್ರಕರ್ತ ಉದಯ ಕೊಳೇಕರ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ವಾಹಿನಿ ಏರ್ಪಡಿಸಿದ್ದ ಚಿತ್ರಕಲಾ ಸ್ಫರ್ಧೆಗೆ ಸಹಕಾರ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಶಾಲಾ ಶಿಕ್ಷಕರಿಗೆ, ಶಾಲಾ ಎಸ್‌ಡಿಎಂಸಿ ಆಡಳಿತ ಮಂಡಳಿಗೆ, ನಿರ್ಣಾಯಕರಿಗೆ, ಚಿತ್ರಕಲಾ ಶಿಕ್ಷಕರಿಗೆ ಹಾಗೂ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯ ಮೇಲೆ ಎಸ್‌ಡಿಎಂಸಿ ಸದಸ್ಯ ಗದಿಗೆಪ್ಪ ಮಡಿವಾಳರ, ಚಿತ್ರಕಲಾ ಶಿಕ್ಷಕ ಜೆ.ಬಿ.ಪತ್ತಾರ ಇದ್ದರು. ಚಿತ್ರಕಲಾ ಶಿಕ್ಷಕ ರಾಜು ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎನ್.ಹಲಕಿ, ಶಿಕ್ಷಕರಾದ ಪ್ರಶಾಂತ ತಳವಾರ, ಅನೂಪಕುಮಾರ ಹೊಗರ್ತಿ, ಸಂದೀಪ ಕುಲಕರ್ಣಿ, ಪ್ರೌಢ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಾಕ್ಸ್

ವಿಜೇತರಿಗೆ ಬಹುಮಾನ ವಿತರಣೆ

ಸ್ಪರ್ಧೆಯಲ್ಲಿ 8ನೇ ತರಗತಿ ವಿಭಾಗದಲ್ಲಿ ಪಿರದೋಶ ಮುಜಾವರ (ಪ್ರಥಮ), ಪವಿತ್ರಾ ಬಂಡಿವಡ್ಡರ(ದ್ವಿತೀಯ), ರುಖಿಯಾ ಗಾಟಿನ(ತೃತೀಯ) ಸೇರಿ ಬಹುಮಾನ ವಿತರಿಸಿದ್ದು, ಉಳಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

9,10ನೇ ತರಗತಿ ವಿಭಾಗದಲ್ಲಿ ಹರ್ಷಿತಾ ಬಡಿಗೇರ(ಪ್ರಥಮ), ಶ್ರದ್ಧಾ ಪಟ್ಟೇದ(ದ್ವಿತೀಯ) ಮೌನೇಶ ಬಡಿಗೇರ(ತೃತೀಯ) ಸ್ಥಾನ ಪಡೆದಿದ್ದು, ಭಾಗ್ಯಶ್ರೀ ಸಮಾಧಾನಕರ ಬಹುಮಾನ ಪಡೆದರು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ಒಟ್ಟು 47 ವಿದ್ಯಾರ್ಥಿಗಳು ಭಾಗವಹಿಸಿದ್ದರು.