ಸಾರಾಂಶ
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅದರಲ್ಲೂ ಅದರಡಿಯಲ್ಲಿ ನಡೆಯುವ ರಕ್ತ ಭಂಡಾರದ ರಕ್ತ ಶೇಖರಣೆ ರಾಜ್ಯದ ಇತರೆ ಶಾಖೆಗಿಂತಲೂ ಅಧಿಕ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ವಿಜಯಕುಮಾರ ಪಾಟೀಲ್ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಿದ ರೆಡ್ ಕ್ರಾಸ್ ಕೊಪ್ಪಳ ಶಾಖೆಯ ೨೦೨೨-೨೩ ಹಾಗೂ ೨೦೨೩-೨೪ರ ವಾರ್ಷಿಕ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಇತರೆ ಶಾಖೆಗೆ ಹೋಲಿಕೆ ಮಾಡಿದರೆ ಕೊಪ್ಪಳ ಶಾಖೆ ಕಾರ್ಯ ಮಾದರಿಯಾಗಿದೆ. ರೆಡ್ ಕ್ರಾಸ್ ಎಂದರೆ ಕೇವಲ ಬ್ಲಡ್ ಬ್ಯಾಂಕ್ ಅಷ್ಟೆ ಅಲ್ಲ, ಸಮಾಜಮುಖಿ ಹತ್ತಾರು ಕಾರ್ಯಗಳು ಇವೆ. ಪ್ರವಾಹ ಬಂದಾಗ, ವಿಪತ್ತು ಎದುರಾದಾಗ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತನ್ನ ಕಾರ್ಯ ಮಾಡುತ್ತಾ ಬಂದಿದೆ. ಅದೇ ಕೊಪ್ಪಳ ಶಾಖೆಯ ಉತ್ತಮ ಕಾರ್ಯ ಮಾಡುವುದಕ್ಕೆ ರಾಜ್ಯ ಶಾಖೆಯ ಸಹಕಾರ ಮಾಡಲಾಗುವುದು. ಶೀಘ್ರದಲ್ಲಿಯೇ ವೆಂಟಿಲೇಟರ್ ಆ್ಯಂಬುಲೆನ್ಸ್ ನೀಡಲಾಗುವುದು ಎಂದರು.ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ನಲಿನ್ ಅತುಲ್ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ. ಈಗಿರುವ ತಂಡ ಸದಾ ಕಾರ್ಯ ತತ್ಪರವಾಗಿದೆ. ಈ ತಂಡ ಅನೇಕ ಅಭಿವೃದ್ಧಿ ಕಾರ್ಯ ಮಾಡಿದೆ. ರೆಡ್ ಕ್ರಾಸ್ ಭವನ ನಿರ್ಮಾಣ ಆಗುತ್ತಿದ್ದು, ಶೀಘ್ರದಲ್ಲಿಯೇ ಉದ್ಘಾಟನೆ ಆಗಲಿದೆ. ಅಲ್ಲಿ ಸ್ಕಿನ್ ಬ್ಯಾಂಕ್, ಬಾಡಿ ಬ್ಯಾಂಕ್ ಸೇರಿದಂತೆ ಹಲವಾರು ತುರ್ತು ಅಗತ್ಯಗಳ ಬ್ಯಾಂಕ್ ಮಾಡುತ್ತಿರುವುದು ಉತ್ತಮ ಯೋಜನೆಯಾಗಿದೆ ಎಂದರು.
ನಿರ್ದೇಶಕರ ಆಯ್ಕೆ ಅಜೆಂಡಾ ಪ್ರಸ್ತಾಪ ಮಾಡಲಾಯಿತು. ಈಗಿರುವ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಮುಂದಿನ ಅವಧಿಗೆ ಮುಂದುವರೆಸುವ ಕುರಿತು ಸಭೆಯಲ್ಲಿ ಮಂಡಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಸದಸ್ಯರ ಆಕ್ಷೇಪಣೆ ಕೇಳಲಾಯಿತು. ಸಭೆಯಲ್ಲಿದ್ದ ಸರ್ವಸದಸ್ಯರು ಸರ್ವಾನುಮತದಿಂದ ಕೈ ಎತ್ತಿ, ಘೋಷಣೆ ಕೂಗಿ ಈಗಿರುವ ಕಾರ್ಯಕ್ರಮ ಮಂಡಳಿ ಸದಸ್ಯರನ್ನು ಮುಂದುವರೆಸಲು ಒಪ್ಪಿಗೆ ಸೂಚಿಸಿದರು. ಇದನ್ನು ಜಿಲ್ಲಾಧಿಕಾರಿ ನಲಿನ್ ಅತುಲ್ ಅನುಮೋದಿಸಿದರು.ನಂತರ ರಕ್ತದಾನಿಗಳನ್ನು, ರಕ್ತದಾನ ಶಿಬಿರ ನಡೆಸಿದವರನ್ನು ಸನ್ಮಾನಿಸಲಾಯಿತು.
ಉಪಸಭಾಪತಿ ಡಾ. ಗವಿಸಿದ್ದನಗೌಡ ಇದ್ದರು. ಜಿಲ್ಲಾ ಶಾಖೆ ಸಭಾಪತಿ ಸೋಮರಡ್ಡಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ರೀನಿವಾಸ ಹ್ಯಾಟಿ ವರದಿ ವಾಚನ ಮಾಡಿದರು. ಸುಧೀರ ಅವರಾದಿ ಲೆಕ್ಕಪತ್ರ ಒಪ್ಪಿಸಿ ಒಪ್ಪಿಗೆ ಪಡೆದರು. ಡಾ. ಚಂದ್ರಶೇಖರ ಕರಮುಡಿ ಸ್ವಾಗತಿಸಿದರು. ಡಾ. ಶಿವನಗೌಡ ವಂದನಾರ್ಪಣೆ ಮಾಡಿದರು. ರಾಜೇಶ ಯಾವಗಲ್ ಕಾರ್ಯಕ್ರಮ ನಿರೂಪಿಸಿದರು. ಅಮೃತ ಸಜ್ಜನ ಪ್ರಾರ್ಥಿಸಿದರು. ಡಾ. ಮಂಜುನಾಥ ಸಜ್ಜನ, ಡಾ. ರವಿಕುಮಾರ ದಾನಿ ಇತರರಿದ್ದರು.