ಜನಸಾಮಾನ್ಯರಿಗೆ ಉತ್ತಮ ಆಶಯಗಳನ್ನು ನೀಡುವುದೇ ತರಳಬಾಳು ಹುಣ್ಣಿಮೆ ಮಹೋತ್ಸವದ ಉದ್ದೇಶವಾಗಿದ್ದು, ವೈರಾಗ್ಯ ಪ್ರಜ್ಞೆಯೊಂದಿಗೆ ಸಮಾಜವನ್ನು ತಿದ್ದುವ ಕಾರ್ಯ ಶ್ರೀ ಮಠದ ಜಗದ್ಗುರುಗಳಿಂದ ನಡೆಯುತ್ತಿದೆ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಭದ್ರಾವತಿ: ಜನಸಾಮಾನ್ಯರಿಗೆ ಉತ್ತಮ ಆಶಯಗಳನ್ನು ನೀಡುವುದೇ ತರಳಬಾಳು ಹುಣ್ಣಿಮೆ ಮಹೋತ್ಸವದ ಉದ್ದೇಶವಾಗಿದ್ದು, ವೈರಾಗ್ಯ ಪ್ರಜ್ಞೆಯೊಂದಿಗೆ ಸಮಾಜವನ್ನು ತಿದ್ದುವ ಕಾರ್ಯ ಶ್ರೀ ಮಠದ ಜಗದ್ಗುರುಗಳಿಂದ ನಡೆಯುತ್ತಿದೆ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶ್ರೀಗಳು ಸೋಮವಾರ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಮೂರನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ತರಳಬಾಳು ಮಠ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ತನ್ನ ಧ್ಯೇಯೋದ್ದೇಶಗಳ ಮೂಲಕ ಜನಕಲ್ಯಾಣದ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಹಿರಿಯ ಗುರುಗಳು ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸುವ ಬಲಿಷ್ಠ ಬುನಾದಿ ಹಾಕಿದ್ದರಿಂದಲೇ ಇಂದಿನ ಜಗದ್ಗುರುಗಳು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದರು. ರೈತರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಜಗದ್ಗುರುಗಳು ಅಗ್ರಗಣ್ಯರಾಗಿದ್ದಾರೆ. ವಿಎಎಸ್‌ಎಲ್ ಜಾಗ ಹಿಂದೆ ಕಸದ ತೊಟ್ಟಿಯಾಗಿದ್ದು, ತರಳಬಾಳು ಹುಣ್ಣಿಮೆ ದಿನ ನಂದನವನವಾಗಿ ಪರಿವರ್ತನೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಜೀರ್ಣೋದ್ಧಾರಗೊಳ್ಳಲಿದೆ ಎಂಬ ಭರವಸೆ ನೀಡಿದರು. ಸಹೋದರತ್ವ ಉಳಿಸಿಕೊಳ್ಳುವುದೇ ನಿಜವಾದ ರಾಜಕಾರಣ. ಜನಪ್ರತಿನಿಧಿಗಳು ಉತ್ತಮ ಕಾರ್ಯಗಳನ್ನು ಮಾಡಿ ಸ್ವತಂತ್ರ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಉತ್ತಮ ಆಶಯಗಳನ್ನು ಬೆಳೆಸಿಕೊಳ್ಳಲು ವಚನಗಳ ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಮನುಷ್ಯ ಲೌಕಿಕ ಹಾಗೂ ಪಾರಮಾರ್ಥಿಕ ಅರ್ಥಗಳನ್ನು ಅರಿತು ಆತ್ಮೋದ್ಧಾರಕ್ಕಾಗಿ ಶ್ರಮಿಸಬೇಕು. ಭಕ್ತಿ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಭಗವಂತನನ್ನು ಸ್ಮರಿಸುವ ಮೂಲಕ ದೈವತ್ವವನ್ನು ಕಾಣಲು ಸಾಧ್ಯ. ಸಮೃದ್ಧ ರಾಜ್ಯ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಇಂತಹ ಸಮಾರಂಭಗಳು ಅಗತ್ಯವಿವೆ ಎಂದರು. ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಇಂದು ಭಾರತ ಗಣರಾಜ್ಯವಾಗಿ ರೂಪುಗೊಂಡ ದಿನವಾಗಿದೆ. ಕಳೆದ ೭೦ ವರ್ಷಗಳ ಸಾಧನೆ-ಆಗುಹೋಗುಗಳ ಕುರಿತು ಆತ್ಮಪರಿಶೀಲನೆ ಅಗತ್ಯವಿದೆ. ಕೆಲವು ದೇಶಗಳಲ್ಲಿ ಆಕ್ರಮಣದ ಮೂಲಕ ಸಂಸ್ಕೃತಿ ಬದಲಾವಣೆಯಾಗುತ್ತಿರುವುದು ವಿಷಾದನೀಯ. ಪ್ರಸ್ತುತ ಭಾರತದಲ್ಲಿ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಒಗ್ಗಟ್ಟಿನ ಪ್ರಯತ್ನ ಅಗತ್ಯವಾಗಿದೆ. ಈ ನಡುವೆ ಅನೇಕ ಆಳ್ವಿಕೆಗಳ ನಡುವೆಯೂ ನಮ್ಮ ಸಂಸ್ಕೃತಿ ಉಳಿದಿರುವುದು ನಮ್ಮ ಶ್ರದ್ಧೆ ಮತ್ತು ಕಾಳಜಿಯ ಫಲ. ಇದರಿಂದಲೇ ಭಾರತ ಶ್ರೀಮಂತ ದೇಶವಾಗಿದೆ. ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾನೀಯರನ್ನು ಈ ದಿನ ಸ್ಮರಿಸಬೇಕು ಎಂದರು.ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ತರಳಬಾಳು ಹುಣ್ಣಿಮೆ ಮಹೋತ್ಸವ ನಾಡಹಬ್ಬವಾಗಿ, ಸರ್ವಧರ್ಮೀಯ ಹಾಗೂ ಸಾಂಸ್ಕೃತಿಕವಾಗಿ ರೂಪುಗೊಂಡಿದೆ ಎಂದರು. ತುಂಗಭದ್ರ ನದಿಯಿಂದ ೪೪ ಕೆರೆಗಳಿಗೆ ನೀರು ಹರಿಸುವ ಕಾರ್ಯದಲ್ಲಿ ಅವರ ಸಲಹೆ ಹಾಗೂ ಶ್ರಮ ಶ್ಲಾಘನೀಯವಾಗಿದೆ. ನೀರಿನ ಸದುಪಯೋಗದಿಂದ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ. ಈ ಕಾರ್ಯದಿಂದ ಜಗದ್ಗುರುಗಳು ಆಧುನಿಕ ಭಗೀರಥರಾಗಿದ್ದಾರೆ ಎಂದು ಹೇಳಿದರು. ಬೇಲೂರು ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ದೇಶದಲ್ಲಿ ಮಠಮಾನ್ಯಗಳಿಲ್ಲದಿದ್ದರೆ ಶಿಕ್ಷಣ ಹಾಗೂ ಮೌಲ್ಯಗಳು ಬೆಳೆದುಬರುತ್ತಿರಲಿಲ್ಲ. ಬರಡು ಭೂಮಿಗೆ ಜಲಧಾರೆ ನೀಡುವ ಮೂಲಕ ರೈತರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ಪರಮಪೂಜ್ಯರಿಂದ ನಡೆಯುತ್ತಿದೆ ಎಂದರು.ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಿಂದಗಿ ಸಪ್ತಸ್ವರ ಕಲಾವಿದರ ಬಳಗದ ಯಶವಂತ್ ಬಡಿಗೇರ್ ವಚನಗೀತೆ, ಆನಗೋಡು ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳ ಬಂಜಾರ ನೃತ್ಯ, ಶಿವಮೊಗ್ಗ ಸಹಚೇತನ ನಾಟ್ಯಾಲಯ ಕಲಾವಿದರಿಂದ ಭರತನಾಟ್ಯ ಹಾಗೂ ಜನಪದ ನೃತ್ಯ, ಪಲ್ಲಾಗಟ್ಟೆ ಸಿದ್ದಮ್ಮ ಗ್ರಾಮೀಣ ಪ್ರೌಢಶಾಲಾ ವಿದ್ಯಾರ್ಥಿಗಳ ಕಂಗೀಲು ನೃತ್ಯ, ತಮಿಳುನಾಡಿನ ಕೊಯಮತ್ತೂರಿನ ಜಿತೇಶ್ ಅವರ ಯೋಗ ಪ್ರದರ್ಶನ ಗಮನ ಸೆಳೆದವು. ಮಿಮಿಕ್ರಿ ಕಲಾವಿದ ಮಿಮಿಕ್ರಿ ಗೋಪಿಯವರ ಪ್ರದರ್ಶನ ಜನರನ್ನು ಆಕರ್ಷಿಸಿತು.ಕಾರ್ಯಕ್ರಮದಲ್ಲಿ ಎಂ.ಎಸ್.ಚಂದ್ರಶೇಖರ್ ಸ್ವಾಗತಿಸಿದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಪ ಸದಸ್ಯ ರಮೇಶ್‌ಬಾಬು, ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ, ಎಚ್.ಆರ್.ಬಸವರಾಜಪ್ಪ ಇತರರಿದ್ದರು.