ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮೌಲ್ಯಗಳು ಮುಖವಾಣಿಯಾಗಿವೆಯೇ ಹೊರತು ಮುಖಾಮುಖಿಗೊಂಡಿಲ್ಲ. ಹಾಗೆಯೇ ಸಪ್ತರ್ಷಿಗಳು ಮುಖವಾಣಿಗಳಾಗಿದ್ದಾರೆ. ಮುಖಾಮುಖಿಗೊಂಡಿಲ್ಲ ಎಂದು ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.ಇಲ್ಲಿನ ಶ್ರೀ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಗಣೇಶ ಅಮೀನಗಡ ರಚಿಸಿ, ನಿರ್ದೇಶಿಸಿದ ಮಧುರಚೆನ್ನ ಏಕವ್ಯಕ್ತಿ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 20ನೇ ಶತಮಾನದ ಮಹತ್ವದ ಕವಿ ಮಧುರಚೆನ್ನರನ್ನು ಸ್ಮರಿಸುವ ಕೆಲಸಗಳಾಗುತ್ತಿಲ್ಲ ಎಂದರು.
ಮಧುರಚೆನ್ನರ ಇಡೀ ಬದುಕನ್ನು ಒಂದು ಗಂಟೆಯ ಅವಧಿಯಲ್ಲಿ ಅನಾವರಣಗೊಳಿಸುವ ಏಕವ್ಯಕ್ತಿ ನಾಟಕ ಮಹತ್ವಪೂರ್ಣವಾದುದು. ಮಧುರಚೆನ್ನರ ಜೊತೆಗೆ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಮಹತ್ವವನ್ನು ಮನಗಾಣಿಸಬೇಕಿದೆ. ಅವರು ವಚನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಕುರಿತು ಸ್ಮರಣೀಯ ಕಾರ್ಯಗಳಾಗಬೇಕಿವೆ ಎಂದು ಅಶಿಸಿದರು.ನಾಟಕ ಉದ್ಘಾಟಿಸಿದ ಹಿರಿಯ ಲೇಖಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ನವೋದಯದ ಕವಿಗಳಲ್ಲಿ ಮಧುರಚೆನ್ನರು ಪ್ರಮುಖರು. ಶುದ್ಧಚಾರಿತ್ರ‍್ಯ ನಿರ್ಮಿಸುವ ನಿಟ್ಟಿನಲ್ಲಿ ಅವರು ಸಾಹಿತ್ಯ ರಚಿಸಿದರು. ಆಧ್ಯಾತ್ಮಿಕ ಅಂಶಗಳ ಮೂಲಕ ನೈತಿಕಪ್ರಜ್ಞೆಯನ್ನು ಬೆಳೆಸಿಕೊಂಡು, ಬದುಕಿ ಬರೆದವರು ಮಧುರಚೆನ್ನರು. ಅವರ ಮಾನವೀಯ ಪ್ರಜ್ಞೆ ನೆಲೆಗೊಳ್ಳುವಲ್ಲಿ ಈ ಏಕವ್ಯಕ್ತಿ ನಾಟಕ ನೆರವಾಗಲಿದೆ ಎಂದರು.
ಗುರುಮಠಕಲ್‌ನ ಶ್ರೀ ಶಾಂತವೀರ ಮರುಘರಾಜೇಂದ್ರ ಸ್ವಾಮೀಜಿ, ಶಿರಸಂಗಿಯ ಬಸವ ಮಹಾಂತ ಸ್ವಾಮೀಜಿ, ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ ಗುಡಸಿ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹಾಗೂ ನಾಟಕಕಾರ ಗಣೇಶ ಅಮೀನಗಡ ವೇದಿಕೆ ಮೇಲಿದ್ದರು.
ನಂತರ ಜಗದೇವ ಗಲಗಲಿ ಅವರು ಮಧುರಚೆನ್ನ ನಾಟಕ ಪ್ರಸ್ತುತಪಡಿಸಿದರು. ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾದ ಡಾ.ದೊಡ್ಡಮಲ್ಲಯ್ಯ, ಎಸ್.ಷಣ್ಮುಖಪ್ಪ, ಬಸವರಾಜ ಕಟ್ಟಿ, ನಾಗರಾಜ ಸಂಗಂ, ಮಲ್ಲಿಕಾರ್ಜುನಪ್ಪ, ಮುರುಗೇಶ್, ಉಪನ್ಯಾಸಕ ಪರಮೇಶ್ವರಪ್ಪ, ಜಗದೇವ ಗಲಗಲಿ, ಶಾಂತಾ, ದೊಡ್ಡಪೇಟೆ ಜಗದೀಶ್, ಶ್ರೀನಿ ಮಲ್ಲಿಕಾರ್ಜುನ, ಜಿ.ಟಿ.ನಂದೀಶ್, ನಾಗರಾಜ, ರಾಜಶೇಖರ್ ಇದ್ದರು.