ಸಾರಾಂಶ
ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಬೀದರ್ ಪ್ರಧಾನ ಅಂಚೆ ಕಚೇರಿಯಲ್ಲಿ ಜನಸಂಪರ್ಕ ಸಭೆಯಲ್ಲಿ ತಹಸೀಲ್ದಾರ್ ದಿಲಶದ್ ಮಹತ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಅಂಚೆ ಇಲಾಖೆಯು ಮತದಾರರ ಗುರುತಿನ ಚೀಟಿಗಳನ್ನು ತುಂಬಾ ಶೀಘ್ರವಾಗಿ ಮತ್ತು ಸರಿಯಾಗಿ ವಿಲೇವಾರಿ ಮಾಡಿದ್ದ ಕಾರ್ಯ ಪ್ರಶಸಂಸನಿಯವಾಗಿದೆ ಎಂದು ಬೀದರ್ ತಹಸೀಲ್ದಾರ್ ದಿಲಶದ್ ಮಹತ್ ಸ್ಮರಿಸಿದರು.ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಬೀದರ್ ಪ್ರಧಾನ ಅಂಚೆ ಕಚೇರಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಕಳೆದ ವಾರವೇ ಸುಮಾರು 15,000ಕ್ಕೂ ಹೆಚ್ಚು ನೋಟಿಸ್‌ಗಳನ್ನ ಕಂದಾಯ ಇಲಾಖೆ ಬೀದರ್ ಪ್ರಧಾನ ಅಂಚೆ ಕಚೇರಿಗೆ ಕಳುಹಿಸಿದ್ದು, ಇಲಾಖೆಯವರು ಅದನ್ನು ಒಂದೇ ದಿನದಲ್ಲಿ ಬುಕ್ ಮಾಡಿ ದಾಖಲೆ ಸಾಧಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ಇಲಾಖೆಯು, ಪ್ರತಿಯೊಬ್ಬರ ಜೀವನದಲ್ಲಿಯೂ ಹಾಸುಹೊಕ್ಕಾಗಿ ಸಾಮಾನ್ಯ ಜನರೊಂದಿಗೆ ಆತ್ಮೀಯವಾದ ಸಂಬಂಧವನ್ನು ಹೊಂದಿದೆ ಎಂದು ಹೇಳಿದರು.ಅಂಚೆ ಅಧೀಕ್ಷಕರಾದ ವಿ ಎಲ್ ಚಿತಕೋಟೆ ಮಾತನಾಡಿ ಇಲಾಖೆಯ ವಿವಿಧ ಸೇವೆಗಳ ಬಗ್ಗೆ ಸವಿಸ್ತಾರವಾಗಿ ಅರಿವು ಮೂಡಿಸಿದರು.
ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಬಿ ಜಿ ಶೆಟಕಾರ ಮಾತನಾಡಿ, ಸಾರ್ವಜನಿಕರು ಇಲಾಖೆಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಜಿಲ್ಲೆಯ ಅಂಗವಿಕಲರ ಕ್ಷೇಮಾಭಿವೃದ್ಧಿ ಅಧಿಕಾರಿ ಸುಭಾಷ್ ರತ್ನ ಅವರು, ಇಲಾಖೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಬಹಳ ಮುತುವರ್ಜಿಯಿಂದ ಮಾಡುತ್ತಲಿದೆ ಎಂದರು.
ಚಿದಾನಂದ ಕಟ್ಟಿ ಸ್ವಾಗತಿಸಿದರು, ಕಲ್ಲಪ್ಪ ಕೋಣಿ ಪ್ರಾಸ್ತಾವಿಕ ಮಾತನಾಡಿದರು, ಮಂಗಲಾ ಭಾಗವತ್ ನಿರೂಪಿಸಿದರು. ದತ್ತಾತ್ರಿ ವಂದಿಸಿದರು.