ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಪತ್ರಿಕಾ ರಂಗ ಸಮಾಜದ 4ನೇ ಅಂಗವಾಗಿದ್ದು, ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪಿ.ಜಿ. ಕೊಣ್ಣೂರ ಹೇಳಿದರು.ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಗ್ರಾಮದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಸ್ವಧಾರ ವಸತಿ ಗೃಹದಲ್ಲಿ ಕರ್ನಾಟಕ ಪತ್ರಕರ್ತರ ಸಂಘ, ಹುಕ್ಕೇರಿ ತಾಲೂಕು ಪತ್ರಕರ್ತರ ಸಂಘ ಹಾಗೂ ನಮ್ಮೂರ ಬಾನುಲಿ ಸಮುದಾಯದ ರೇಡಿಯೋ ಕೇಂದ್ರ ಕರಗುಪ್ಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದಿನಪತ್ರಿಕೆ ಓದುವುದರ ಮೂಲಕ ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು
ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ ಮಾತನಾಡಿ, ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆ ಓದಿ ಜ್ಞಾನ ಬೆಳೆಸಿಕೊಂಡು ಪ್ರಬುದ್ಧ ನಾಗರಿಕರಾಗಬೇಕು. ಜತೆಗೆ ಪತ್ರಿಕೆಗಳಲ್ಲಿ ಬರುವ ಮಹತ್ವದ ಘಟನೆಗಳನ್ನು ಟಿಪ್ಪಣೆ ಮಾಡಿಕೊಂಡು, ವೈಯಕ್ತಿಕ ಬೆಳವಣಿಗೆಗೆ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.ಯಮಕನಮರಡಿ ಲಕ್ಷ್ಮೀ ಅರ್ಬನ್ ಕ್ರೆಡಿಟ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಜಿಂಡ್ರಾಳಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಪಿ.ಜಿ. ಕೊಣ್ಣೂರ ಉಪನ್ಯಾಸ ನೀಡಿದರು. ಯರಗಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯೆ ಕಿರಣ ಚೌಗಲಾ, ಪತ್ರಕರ್ತರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ನಂದಕಿಶೋರ್ ಗೌಡರ ಅತಿಥಿಗಳಾಗಿದ್ದರು.
ಸತ್ಕಾರ: ಹಿರಿಯ ಪತ್ರಕರ್ತ, ಕಲಾವಿದ ಗೋಪಾಲ್ ಚಿಪಣಿ ಸೇರಿದಂತೆ ಗ್ರಾಮೀಣ ಪತ್ರಕರ್ತರನ್ನು ಸತ್ಕರಿಸಲಾಯಿತು. ಹಿರಿಯ ಸಾಹಿತಿ ಎಸ್.ಎಂ. ಶಿರೂರ್, ಕಾ.ಹೋ. ಶಿಂಧೆ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಚೌಗಲಾ, ಮಾರುತಿ ಹನಮವ್ವಗೋಳ, ಡಾ.ಪ್ರಕಾಶ ಹೊಸಮನಿ, ದೀಪಕ ನಾಡಗೌಡ, ಲವ ನಾಗನೂರಿ, ಕುಶಾಲ ನಾಗನೂರಿ, ರಮೇಶ್ ಬಾಗೇವಾಡಿ, ನಿರಂಜನ ಶಿರೂರ, ಎ.ಎಂ. ಕರ್ನಾಚಿ, ನಿಲೇಶ ಜಗಜಂಪಿ, ಫಾರೂಕ್ ಮಂಕಾವಿನಾಗರಾಜ ಹನಮವ್ವಗೋಳ, ಮೀರಾ ಕುಂಬಾರ ಇದ್ದರು.ಪ್ರೊ.ಎ.ವೈ. ಸೋನ್ಯಾಗೋಳ ಸ್ವಾಗತಿಸಿದರು. ಚೇತನ್ ಕುಲಕರ್ಣಿ ಮತ್ತು ಎ.ಎಂ. ಕರ್ನಾಚಿ ನಿರೂಪಿಸಿದರು. ಲಕ್ಷ್ಮಣ ಪೂಜಾರ್ ವಂದಿಸಿದರು. ಹಿಡಕಲ್ ಡ್ಯಾಮ್‌ದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವಿದ್ಯಾರ್ಥಿಗಳು ಮಹಾವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.