ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ: ಸಂಗಣ್ಣ ಕರಡಿ

| Published : Sep 02 2024, 02:07 AM IST

ಸಾರಾಂಶ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯುವಕರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಹಮ್ಮಿಕೊಂಡಿರುವ ಈ ಯುವ ಕಾರ್ಯಾಗಾರದಲ್ಲಿ ಭಾಗವಹಿಸಿರುವ ನೀವೆಲ್ಲರೂ ಪುಣ್ಯವಂತರು ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ಕೊಪ್ಪಳ: ಸಮಾಜದಲ್ಲಾಗುವ ವಿಪತ್ತುಗಳಿಗೆ ಸ್ಪಂದಿಸುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಮಹಾವೀರ ಕಲ್ಯಾಣಮಂಟಪದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ಯುವ ರೆಡ್ ಕ್ರಾಸ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯುವಕರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಹಮ್ಮಿಕೊಂಡಿರುವ ಈ ಯುವ ಕಾರ್ಯಾಗಾರದಲ್ಲಿ ಭಾಗವಹಿಸಿರುವ ನೀವೆಲ್ಲರೂ ಪುಣ್ಯವಂತರು. ಇದನ್ನು ಸದ್ಬಳಕೆ ಮಾಡಿಕೊಂಡು ಮನಪರಿವರ್ತನೆಯೊಂದಿಗೆ ಬೆಳೆಯಬೇಕು ಎಂದರು.

ಯಾರು ತ್ಯಾಗ ಮಾಡುತ್ತಾರೋ, ಅವರು ಬೆಳೆಯುತ್ತಾರೆ. ಅಂಥ ತ್ಯಾಗ ಮತ್ತು ಸೇವಾ ಮನೋಭಾವವನ್ನು ರೆಡ್ ಕ್ರಾಸ್ ಕಲಿಸಿಕೊಡುತ್ತದೆ. ದೇಶ ಪ್ರಗತಿ ಸಾಧಿಸುವುದು ಎಂದರೆ ದೇಶದೊಳಗಿರುವ ಯುವಕರು ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳದಲ್ಲಿ ಪ್ರಾರಂಭಿಸಿದ ಬ್ಲಡ್ ಬ್ಯಾಂಕ್‌ಗೆ ಪರವಾನಗಿ ಪಡೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಲ್ಲಿ ಶಕ್ತಿಮೀರಿ ಶ್ರಮಿಸಿದ್ದೇನೆ. ಅಂಥ ಬ್ಲಡ್ ಬ್ಯಾಂಕ್‌ನಿಂದ ಸಾವಿರಾರು ಜನರಿಗೆ ಜೀವ ಉಳಿಯಲು ಸಾಧ್ಯವಾಗಿದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಉಪಸಭಾಪತಿ ಆನಂದ ಎಸ್. ಜಿಗಜಿನ್ನಿ ಮಾತನಾಡಿ, ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಅರ್ಥಪೂರ್ಣವಾಗಿ ಕಾರ್ಯಾಗಾಕವನ್ನು ಕೊಪ್ಪಳ ಶಾಖೆಯ ಪದಾಧಿಕಾರಿಗಳು ಮಾಡಿದ್ದಾರೆ. ಇದನ್ನು ಭಾಗವಹಿಸಿದ ಶಿಬಿರಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತದೆ. ವಿಪತ್ತು ಬಂದಾಗಲೆಲ್ಲ ಅದು ಸ್ಪಂದಿಸುತ್ತದೆ. ಮಾನವೀಯತೆಯೇ ಅದರ ಮೂಲ ಧ್ಯೇಯ ಎಂದರು.

ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ಜ್ಯಾತ್ಯಾತೀತ, ಧರ್ಮಾತೀತ ಮತ್ತು ಸೀಮಾತೀತವಾಗಿದೆ. ಅದು ಎಲ್ಲ ಎಲ್ಲೆಗಳ ಮೀರಿ ಮಾನವೀಯತೆಗಾಗಿ ಶ್ರಮಿಸುವ ಸಂಸ್ಥೆಯಾಗಿದೆ.

ಕೊಪ್ಪಳದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್ ನಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿ, ಉತ್ತಮ ಚಿಕಿತ್ಸೆ ದೊರೆಯಲು ಸಾಧ್ಯವಾಗಿದೆ. ರಕ್ತ ಸಿಗದೆ ಇದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಕಳುಹಿಸುವ ಸ್ಥಿತಿ ಇತ್ತು. ಆದರೀಗ, ಇಲ್ಲಿಯೇ ಚಿಕಿತ್ಸೆ ದೊರೆಯುವಂತೆ ಆಗಿದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಡಾ. ಕೃಷ್ಣ ವಿ. ಓಂಕಾರ, ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ, ಭಾರೆಕ್ರಾ ಪ್ರ.ಕಾ. ಡಾ. ಶ್ರೀನೀವಾಸ ಹ್ಯಾಟಿ, ಉಪಸಭಾಪತಿ ಡಾ. ಗವಿಸಿದ್ದನಗೌಡ ಪಾಟೀಲ್, ಗೌರವ ಕೋಶಾಧ್ಯಕ್ಷ ಸುಧೀರ ಅವರಾಧಿ, ನಿರ್ದೇಶಕರಾದ ಡಾ. ಚಂದ್ರಶೇಖರ ಕರಮುಡಿ, ಡಾ. ಶಿವನಗೌಡ, ಡಾ. ದಾನರಡ್ಡಿ, ಡಾ. ಮಂಜುನಾಥ ಇದ್ದರು. ನಿರ್ದೇಶಕ ರಾಜೇಶ ಯಾವಗಲ್ ನಿರೂಪಿಸಿದರು.

ಯೋಗ ತರಬೇತಿಡಾ. ಮಂಜುನಾಥ ಸಜ್ಜನ ಮತ್ತು ಡಾ. ಭಾಗ್ಯಶ್ರೀ ಗಾಯದ ಅವರು ಎರಡು ದಿನಗಳ ಕಾಲ ಯೋಗ ತರಬೇತಿ ನೀಡಿದರು. ಎರಡು ದಿನಗಳ ನಿತ್ಯವೂ ಬೆಳಗ್ಗೆ 5.30ಕ್ಕೆ ಯೋಗ ಶಿಬಿರ ನಡೆಸಲಾಯಿತು. ರಾಷ್ಟ್ರಧ್ವಜ ಮಹತ್ವ ಕುರಿತು ಭಾರತ ಸೇವಾ ದಳದ ಜಿಲ್ಲಾ ಶಿಕ್ಷಕ ಬಸವರಾಜ ಪತ್ರಿ ಅವರು ತಿಳಿಸಿಕೊಟ್ಟರು.ಯಶಸ್ವಿ

ಕೊಪ್ಪಳದಲ್ಲಿ ಯುವ ರೆಡ್ ಕ್ರಾಸ್ ಕಾರ್ಯ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಅಚ್ಚುಕಟ್ಟಾದ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆನಂದ ಜಿಗಜಿನ್ನಿ ಉಪಸಭಾಪತಿಗಳು ಭಾರೆಕ್ರಾ ರಾಜ್ಯಶಾಖೆ ಅತ್ಯುತ್ತಮ ಶಿಕ್ಷಣ

ಮೂರು ದಿನಗಳ ಕಾಲ ನಮಗೆ ಕಾರ್ಯಾಗಾರದಲ್ಲಿ ಅತ್ಯುತ್ತಮ ಶಿಕ್ಷಣ ದೊರೆತಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಪಾಠ ಹೇಳಲಾಗಿದೆ. ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡುವ ಮನೋಧರ್ಮ ಬೆಳೆಸಿದ್ದಾರೆ. ಅಚ್ಚುಕಟ್ಟಾದ ವ್ಯವಸ್ಥೆ ಇತ್ತು.

ಭವಾನಿ ಪಾಟೀಲ್ ಕಲಬುರಗಿ ಶಿಬಿರಾರ್ಥಿ