ಹೂವಿನಹಡಗಲಿ ಮಾಗಳ ರೈಜಿಂಗ್‌ ಪೈಪ್‌ಲೈನ್‌ ಕಾಮಗಾರಿ ಶೀಘ್ರವೇ ಪೂರ್ಣ

| Published : Jun 02 2024, 01:47 AM IST

ಹೂವಿನಹಡಗಲಿ ಮಾಗಳ ರೈಜಿಂಗ್‌ ಪೈಪ್‌ಲೈನ್‌ ಕಾಮಗಾರಿ ಶೀಘ್ರವೇ ಪೂರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬಲದಂಡೆ ಭಾಗದಲ್ಲಿ 1619 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಲು ಯೋಜನೆಯ ಪೈಪ್‌ಲೈನ್‌ 4.3 ಕಿ.ಮೀ. ಉದ್ದವಿದೆ.

ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟ ಬಲದಂಡೆ ಭಾಗದ ಮಾಗಳ ರೈಜಿಂಗ್‌ ಮೇನ್‌ ಸ್ಟೀಲ್‌ ಪೈಪ್‌ಲೈನ್‌ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

ಈ ಯೋಜನೆ ಕುರಿತು ಕನ್ನಡಪ್ರಭ ವಿಶೇಷ ಸರಣಿ ವರದಿಗಳನ್ನು ಪ್ರಕಟಿಸಿ, ಸರ್ಕಾರವನ್ನು ಕಣ್ಣು ತೆರೆಸುವ ಕೆಲಸ ಮಾಡಿತ್ತು. ಇದರ ಫಲವಾಗಿ ಇಂದು ಮಾಗಳ ರೈಜಿಂಗ್‌ ಮೇನ್‌ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಬಲದಂಡೆ ಭಾಗದಲ್ಲಿ 1619 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಲು ಯೋಜನೆಯ ಪೈಪ್‌ಲೈನ್‌ 4.3 ಕಿ.ಮೀ. ಉದ್ದವಿದೆ. ಈಗಾಗಲೇ ಸ್ಟೀಲ್‌ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡು ವಾಲ್‌ ಅಳವಡಿಸುತ್ತಿದ್ದಾರೆ. 15ರಿಂದ 20 ದಿನದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

₹11.34 ಕೋಟಿ ಕಾಮಗಾರಿ:

ಮೊದಲು ಸಿಮೆಂಟ್‌ ಪೈಪ್‌ಲೈನ್‌ ಮೂಲಕ ಕಾಲುವೆಗಳಿಗೆ ನೀರೆತ್ತುವ ಮೂಲಕ ರೈತರ ಜಮೀನುಗಳಿಗೆ ನೀರುಣಿಸಲಾಗುತ್ತಿತ್ತು. ಆದರೆ ಪೈಪ್‌ಲೈನ್‌ ಸಾಕಷ್ಟು ಕಡೆಗಳಲ್ಲಿ ಒಡೆದಿದ್ದ ಪರಿಣಾಮ ಸ್ಟೀಲ್‌ ಪೈಪ್‌ಲೈನ್‌ ಮಾಡಲು ₹9.56 ಕೋಟಿ ಅಂದಾಜು ಪಟ್ಟಿ ಸಿದ್ಧವಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಆರಂಭಗೊಳ್ಳದ ಕಾಮಗಾರಿಗೆ ಮತ್ತೆ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸಿ ₹11.34 ಕೋಟಿ ವೆಚ್ಚದಲ್ಲಿ ಮಾಗಳ ರೈಜಿಂಗ್‌ ಮೇನ್‌ ಕಾಮಗಾರಿ ಪೂರ್ಣಗೊಳ್ಳುತ್ತಿದೆ.

1619 ಹೆಕ್ಟೇರ್‌ ಪ್ರದೇಶಕ್ಕೆ ನೀರು:

ಯೋಜನೆಯ ಬಲದಂಡೆ ಭಾಗದ ಮಾಗಳ, ಕೆ.ಅಯ್ಯನಹಳ್ಳಿ, ಅಲ್ಲಿಪುರ, ಹಿರೇಹಡಗಲಿ, ಹಗರನೂರು, ವಡ್ಡನಹಳ್ಳಿ ತಾಂಡಾದ ಸಾವಿರಾರು ರೈತರ 1619 ಹೆಕ್ಟೇರ್‌ ಪ್ರದೇಶಕ್ಕೆ 5 ಕಿ.ಮೀ. ಉದ್ದ ಕಾಲುವೆ ಮೂಲಕ ಪ್ರತ್ಯೇಕವಾಗಿ ಮಾಗಳ ರೈಜಿಂಗ್ ಮೇನ್ ಯೋಜನೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ಒಳಗೊಂಡಿದೆ.

ಈ ಭಾಗದ ಖುಷ್ಕಿ ಜಮೀನು ಹೊಂದಿರುವ ರೈತರಿಗೆ ಈ ಯೋಜನೆ ಆಸರೆಯಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುತ್ತಾರೆಂಬ ಕನಸು ರೈತರದ್ದು.

ಮಾಗಳ ರೈಜಿಂಗ್‌ ಮೇನ್‌ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಲ್ಲಿ ವಾಲ್‌ಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ರಾಘವೇಂದ್ರ.