ಸಾರಾಂಶ
ಭಟ್ಕಳ: ತಾಲೂಕಿನಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಮರಳು ಸರಬರಾಜು ಸ್ಥಗಿತಗೊಂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾವಿರಾರು ಕಾರ್ಮಿಕರು ಬುಧವಾರ ಪಟ್ಟಣದಲ್ಲಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ಮರಳು ಸರಬರಾಜು ಆರಂಭಿಸಬೇಕು ಎಂದು ತಾಲೂಕು ಆಡಳಿತ ಸೌಧದ ಮುಂದೆ ಎರಡೂವರೆ ತಾಸಿಗೂ ಅಧಿಕ ಕಾಲ ಧರಣಿ ನಡೆಸಿದರು.
ಜಿಲ್ಲಾಧಿಕಾರಿ ಮತ್ತ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಿ ಮರಳು ಸಮಸ್ಯೆ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಕಾರ್ಮಿಕರು ಪಟ್ಟು ಹಿಡಿದರು. ಕಾರ್ಮಿಕರು ಮರಳು ಸಮಸ್ಯೆಯಿಂದ ನಮಗೆ ಕೆಲಸವಿಲ್ಲವಾಗಿದೆ. ಕಳೆದ ಆರು ತಿಂಗಳಿನಿಂದ ಖಾಲಿ ಕುಳಿತುಕೊಳ್ಳುವಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಆರಂಭದಲ್ಲಿ ಎಸಿ ಡಾ. ನಯನಾ ಅವರು ಮನವಿ ಸ್ವೀಕರಿಸಲು ಆಗಮಿಸಿದರೂ ಸ್ಥಳಕ್ಕೆ ಡಿಸಿ ಅವರೇ ಬರಬೇಕು ಎಂದು ಪ್ರತಿಭಟನಾನಿರತ ಕಾರ್ಮಿಕರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಸುರೇಶ ಪೂಜಾರಿ, ಆರು ತಿಂಗಳಿನಿಂದ ಮರಳು ಸರಬರಾಜು ಇಲ್ಲದೇ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲಸವಿಲ್ಲದೇ ಖಾಲಿ ಕುಳಿತುಕೊಳ್ಳುವಂತಾಗಿದೆ.
ಕಾರ್ಮಿಕರು ಈ ಸಲ ದೀಪಾವಳಿ ಹಬ್ಬವನ್ನೂ ಸರಿಯಾಗಿ ಆಚರಿಸಿಲ್ಲ. ಮರಳಿಲ್ಲದೇ ವ್ಯಾಪಾರ- ವಹಿವಾಟಿಗೂ ಹೊಡೆತ ಬಿದ್ದಿದೆ. ಬೇರೆ ತಾಲೂಕುಗಳಲ್ಲಿ ಮರಳಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಭಟ್ಕಳದಲ್ಲಿ ಮಾತ್ರ ಮರಳಿಗೆ ಭಾರೀ ಸಮಸ್ಯೆ ಉಂಟಾಗಿದೆ. ಮರಳಿಲ್ಲದೇ ಅಭಿವೃದ್ಧಿ ಕಾಮಗಾರಿ, ಮನೆ, ಕಟ್ಟಡ ಮುಂತಾದ ನಿರ್ಮಾಣ ಕೆಲಸಕ್ಕೆ ಭಾರೀ ಹಿನ್ನಡೆ ಆಗಿದೆ. ಮರಳು ಸಮಸ್ಯೆಯಿಂದ ಕಾರ್ಮಿಕರು ಭಾರೀ ತೊಂದರೆ ಅನುಭವಿಸಿದ್ದರಿಂದ ಸರ್ಕಾರ ಕಾರ್ಮಿಕರಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಕುಂದಾಪುರ ತಾಲೂಕಿನಿಂದ ಮರಳು ಸರಬರಾಜು ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಕಾರ್ಮಿಕ ಸಂಘಟನೆಯ ಶ್ರೀಧರ ನಾಯ್ಕ, ಲೋಕೇಶ ನಾಯ್ಕ, ರಾಮಾ ನಾಯ್ಕ ಮುಂತಾದವರು ಮಾತನಾಡಿ, ಮರಳು ಸಮಸ್ಯೆಯನ್ನು ಜಿಲ್ಲಾಡಳಿತ ಆದಷ್ಟು ಬೇಗ ಬಗೆಹರಿಸಿ ಕಾರ್ಮಿಕರಿಗೆ ಕೆಲಸ ಸಿಗುವಂತೆ ಮಾಡಬೇಕೆಂದು ಆಗ್ರಹಿಸಿದರು.
ಸಂಘಟನೆಯ ಪ್ರಮುಖರ ಮಾತುಗಳಿಗೂ ಕ್ಯಾರೆ ಅನ್ನದ ಕಾರ್ಮಿಕರು ಮರಳು ಇಂದಿನಿಂದಲೇ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಡಿಸಿ, ಉಸ್ತುವಾರಿ ಸಚಿವರು ಆಗಮಿಸಲೇ ಬೇಕು ಎಂದು ಪದೇ ಪದೇ ಪಟ್ಟು ಹಿಡಿದಿದ್ದರಿಂದ ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಮುಖಂಡರೂ ಸಹ ಅಸಹಾಯಕರಾದರು.ಒಂದು ಹಂತದಲ್ಲಿ ಕಾರ್ಮಿಕರು ಡೀಸಿ ಮತ್ತು ಉಸ್ತುವಾರಿ ಸಚಿವರು ಸ್ಥಳಕ್ಕೆ ಬರದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದರು. ಆಕ್ರೋಶಗೊಂಡಿದ್ದ ಕಾರ್ಮಿಕರನ್ನು ಸಮಾಧಾನ ಪಡಿಸಲು ಕಾರ್ಮಿಕ ಸಂಘಟನೆಯ ಪ್ರಮುಖರು ಹರಸಾಹಸಪಟ್ಟರು. ಅಂತಿಮವಾಗಿ ಸಹಾಯಕ ಆಯುಕ್ತರು ಆಗಮಿಸಿ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಅವರಿಗೆ ವಿಷಯ ತಿಳಿಸಿರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ನಾಯ್ಕ, ಸದಸ್ಯ ಮಿಸ್ಭಾ, ಸೆಂಟ್ರಿಂಗ್ ಸಂಘದ ಕಾರ್ಯದರ್ಶಿ ಶಿವರಾಮ ನಾಯ್ಕ, ಪೇಂಟಿಂಗ್ ಸಂಘದ ರಾಮ ನಾಯ್ಕ, ಮಂಜುನಾಥ ಗೊಂಡ, ಟಿಪ್ಪರ್ ಅಸೋಸಿಯೇಶನ್ ಅಧ್ಯಕ್ಷ ಅಜೀಜ್, ಕೂಲಿ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ನಾಯ್ಕ, ಕಿರಣ ಶಿರೂರು, ನಾಗೇಶ ನಾಯ್ಕ, ನಾಗೇಂದ್ರ ನಾಯ್ಕ, ದಯಾನಂದ ನಾಯ್ಕ, ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರು ಪಾಲ್ಗೊಂಡಿದ್ದರು. ಕಾರ್ಮಿಕರಿಂದಲೇ ಮುಖಂಡರ ತರಾಟೆಸಂಘಟನೆಯ ಪ್ರಮುಖರ ಮಾತುಗಳನ್ನೂ ಕೇಳದೇ ಮರಳು ಸರಬರಾಜು ಭರವಸೆ ಸಿಗುವ ವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ನೇತೃತ್ವ ವಹಿಸಿದ್ದ ಕಾರ್ಮಿಕ ಸಂಘಟನೆಗಳ ಪ್ರಮುಖರಿಗೂ ದಿಕ್ಕು ತೋಚದಂತಾಯಿತು. ಒಂದು ಹಂತದಲ್ಲಿ ನೇತೃತ್ವದ ವಹಿಸಿದ್ದ ಪ್ರಮುಖರನ್ನೇ ತೀವ್ರ ತರಾಟೆಗೆ ತೆಗೆದುಕೊಂಡ ಕಾರ್ಮಿಕರು ತಾವೇ ಮೈಕ್ ಹಿಡಿದು ತಮ್ಮ ಆಕ್ರೋಶ ಹೊರಹಾಕಲು ಶುರು ಮಾಡಿದ್ದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.ತಾಳ್ಮೆ ಪರೀಕ್ಷಿಸದಿರಿ ಎಂದ ಕಾರ್ಮಿಕ ಮಹಿಳೆ
ಮರಳು ಸರಬರಾಜಿಗಾಗಿ ನಡೆದ ಪ್ರತಿಭಟನೆಯಲ್ಲಿ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಆಕ್ರೋಶವನ್ನು ಹೊರಹಾಕಿ, ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ ಘಟನೆ ನಡೆಯಿತು.ಪ್ರತಿಭಟನೆ ಸಂದರ್ಭದಲ್ಲಿ ಕುಳಿತ ಸ್ಥಳದಲ್ಲೇ ಮೈಕ್ ಹಿಡಿದು ಮಾತನಾಡಿದ ಕಾರ್ಮಿಕ ಮಹಿಳೆ, ತಾಲೂಕಿನಲ್ಲಿ ಸಮರ್ಪಕ ಮರಳು ಸರಬರಾಜು ಆಗದೇ ಆರು ತಿಂಗಳಾಗಿದೆ. ನಮಗೆ ಕೆಲಸ ಇಲ್ಲವಾಗಿದೆ. ಕೆಲಸ ಇಲ್ಲದಿದ್ದರೆ ನಾವು ಜೀವನ ನಡೆಸುವುದು ಹೇಗೆ? ಮಾಡಿದ ಸಾಲ ಮರುಪಾವತಿ ಮಾಡುವುದು ಹೇಗೆ? ಆರು ವರ್ಷದಿಂದ ಇಲ್ಲದ ಮರಳು ಸಮಸ್ಯೆ ಈಗ ಯಾಕೆ ಶುರುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ನೀವು ಮರಳು ಸಮಸ್ಯೆ ಬಗೆಹರಿಸದೇ ಇದ್ದರೆ ರಸ್ತೆಗೆ ಇಳಿಯುತ್ತೇವೆ ಎಂದೂ ಎಚ್ಚರಿಕೆ ನೀಡಿದರು. ಪ್ರತಿಟನೆಯಲ್ಲಿ ಅನೇಕ ಕಾರ್ಮಿಕ ಮಹಿಳೆಯೂ ಪಾಲ್ಗೊಂಡಿದ್ದು, ಮರಳು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.