ಸಾರಾಂಶ
ಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂಜ್ರ ತೀರ್ಥ ಸ್ವಾಮೀಜಿ 64ನೇ ಜನ್ಮನಕ್ಷತ್ರಾಚರಣೆ ಸಂದರ್ಭದಲ್ಲಿ ಮಣಿಪಾಲ ಮಾಹೆಯು ಅಂಚೆ ಇಲಾಖೆ ಮೂಲಕ ಹೊರತಂದಿರುವ ಆಚಾರ್ಯ ಮಧ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭ ನಡೆಯಿತು.
ಆಚಾರ್ಯ ಮಧ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭಕನ್ನಡಪ್ರಭ ವಾರ್ತೆ ಉಡುಪಿ
ಆಚಾರ್ಯ ಮಧ್ವರು 800 ವರ್ಷಗಳ ಹಿಂದೆ ಭೋದಿಸಿದ ದ್ವೈತ ಸಿದ್ಧಾಂತವನ್ನು ಇಂದು ಜಗತ್ತೇ ಮಾನ್ಯ ಮಾಡುತ್ತಿದೆ. ದ್ವೈತ ಎಂದರೆ ಒಂದರಂತೆ ಇನ್ನೊಂದಿಲ್ಲ, ಪ್ರತಿಯೊಂದು ವೈಶಿಷ್ಟ್ಯಪೂರ್ಣವಾದುದು ಭಿನ್ನವಾದುದು ಎಂದರ್ಥ. ಅದನ್ನು ಅಮೆರಿಕದ ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ ಎಂದು ಕೃಷ್ಣ ಮಠದ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂಜ್ರ ತೀರ್ಥ ಸ್ವಾಮೀಜಿ ಹೇಳಿದರು.ಅವರು ಶನಿವಾರ ಕೃಷ್ಣಮಠದ ರಾಜಾಂಗಣದಲ್ಲಿ ತಮ್ಮ 64ನೇ ಜನ್ಮನಕ್ಷತ್ರಾಚರಣೆ ಸಂದರ್ಭದಲ್ಲಿ ಮಣಿಪಾಲ ಮಾಹೆಯು ಅಂಚೆ ಇಲಾಖೆ ಮೂಲಕ ಹೊರತಂದಿರುವ ಆಚಾರ್ಯ ಮಧ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಸಂದೇಶ ನೀಡಿದರು.ಆಚಾರ್ಯ ಮಧ್ವರದ್ದು ಪ್ರತಿಯೊಂದರಲ್ಲೂ ಸಮತೋಲನವನ್ನು ಕಾಯಬೇಕು ಎನ್ನುವ ನಡು ಸಿದ್ಧಾಂತ. ಇಂದು ಜಗತ್ತು ಎಡ ಮತ್ತು ಬಲ ಎಂಬ ಅತಿರೇಕದ ಸಿದ್ಧಾಂತಗಳಿಂದ ನಲಗುತ್ತಿದೆ. ಈ ಸಂದರ್ಭದಲ್ಲಿ ಮಧ್ವಾಚಾರ್ಯರ ಸಮತೋಲನದ ನಡು ಸಿದ್ಧಾಂತ ಜಗತ್ತಿಗೆ ಅತ್ಯಗತ್ಯವಾಗಿದೆ ಎಂದು ಶ್ರೀಗಳು ಹೇಳಿದರು.ಜಗತ್ತು ಅನೇಕ ತಲ್ಲಣಗಳನ್ನು ಎದುರಿಸುತ್ತಿದೆ. ಈ ಸಂದರ್ಭವನ್ನು ಎದುರಿಸುವಲ್ಲಿ ಆಸ್ತಿಕ ರಾಜಕಾರಣಿಗಳು ಬೇಕು ಎಂದ ಶ್ರೀಗಳು, ಕಾರ್ಯಕ್ರಮದ ಮುಖ್ಯ ಅತಿಥಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಹಿರಂಗವಾಗಿ ತಾನು ಆಸ್ತಿಕ ಎಂದು ಘೋಷಿಸಿದವರು. ನಮ್ಮ ಕೋಟಿ ಗೀತ ಲೇಖನ ಯಜ್ಞದಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಗೀತೆಯ ಲೇಖನ ಮುಗಿಸುವುದರೊಳಗೆ ಅವರ ಮನಸ್ಸಿನ ಆಸೆ ಈಡೇರುತ್ತದೆ ಎಂದು ಹಾರೈಸಿದರು.ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಮತ್ತು ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾಮಹೋಪಾಧ್ಯಾಯ ರಾಮನಾಥಾಚಾರ್ಯರು ಅಭಿವಂದನಾ ಭಾಷಣ ಮಾಡಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂಚೆಚೀಟಿಯನ್ನು ಬಿಡುಗಡೆಗಳಿಸಿದರು. ಅವರನ್ನು ಶ್ರೀಗಳು ಕಡೆಗೋಲು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳಿಗೆ ಆಫ್ರಿಕಾ ಮೈಲ್ಸ್ ಲೀಡರ್‌ಶಿಪ್ ವಿವಿಯ ವತಿಯಿಂದ ಉಪಕುಲಪತಿ ಡಾ.ರವಿ ಆಚಾರ್ಯ ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ, ಮಾಹೆಯ ಸಹಕುಲಪತಿ ಡಾ. ಎಚ್.ಎಸ್.ಬಲ್ಲಾಳ್, ಉಪಕುಲಪತಿ ಡಾ.ಶರತ್ ಕುಮಾರ್, ರಾಜ್ಯ ಅಂಚೆ ಇಲಾಖೆಯ ಅಧೀಕ್ಷಕ ಕೆ.ಪ್ರಕಾಶ್, ದೆಹಲಿಯ ಕೇಂದ್ರ ಸಂಸ್ಕೃತ ವಿವಿ ಉಪಕುಲಪತಿ ಡಾ. ಶ್ರೀನಿವಾಸ ವರಖೇಡಿ, ಬೆಂಗಳೂರಿನ ಮಹಾಂತೇಶ ಚರಂತಿಮಠ, ಬೆಳಗಾವಿಯ ವಿದ್ವಾನ್ ಗುರುರಾಜ ಆಚಾರ್ಯ, ಡಿಸಿ ಸ್ವರೂಪ ಟಿ.ಕೆ. ಉಪಸ್ಥಿತರಿದ್ದರು.---------------ದೇವರು ಅವಕಾಶ ಕೊಟ್ಟೇ ಕೊಡುತ್ತಾನೆ: ಡಿಕೆಶಿ
ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಹುಡುಕುತ್ತಾರೆ. ಅದು ಸುಲಭದ ಕೆಲಸ, ಆದ್ದರಿಂದ ಕೃಷ್ಣ ನನ್ನ ಬಾಯಿಂದ ಯಾವುದೇ ತಪ್ಪು ಮಾಡಿಸಬೇಡ ಎನ್ನುತ್ತಲೇ ಮಾತು ಆರಂಭಿಸಿದ ಡಿ.ಕೆ.ಶಿವಕುಮಾರ್, ಮಾತಿನುದ್ದಕ್ಕೂ ತತ್ವಜ್ಞಾನವನ್ನಾಡಿದರು.ಧರ್ಮ, ಪೂಜೆ ಆಚರಣೆ ಪ್ರದರ್ಶನದ ವಸ್ತುಗಳಲ್ಲ, ಅವು ಅಂತರಂಗದಲ್ಲಿರಬೇಕು. ದೇವನೊಬ್ಬನೇ ನಾಮ ಹಲವು, ಜೀವನದಲ್ಲಿ ಧರ್ಮರಾಯನ ಧರ್ಮನಿಷ್ಠೆ, ಅರ್ಜುನನ ಗುರಿ, ಭೀಮನ ಬಲ, ವಿುಧುರನ ನೀತಿ ಜೊತೆಗೆ ಕೃಷ್ಣನ ತಂತ್ರಗಾರಿಕೆಯೂ ಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕರೆದು ಹೇಳಿದರು.ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ಸೋಲುಗೆಲವು ಸಾಮಾನ್ಯ, ಆದರೆ ದೇವರು ನಮಗೊಂದು ಅವಕಾಶವನ್ನು ಕೊಟ್ಟೆ ಕೊಡುತ್ತಾನೆ. ಆಗ ಕೆಳಗೆ ಕೂತವರೂ ಮೇಲೆ ಕೂರುವ ಅವಕಾಶ ಸಿಗುತ್ತದೆ. ದಾರಿ ಇಲ್ಲದಿದ್ದಲ್ಲಿ ದಾರಿ ಮಾಡಿಕೊಂಡು ಮುನ್ನಡೆಯಬೇಕು ಎಂದು ಮಾರ್ಮಿಕವಾಗಿ ನುಡಿದರು.--------------------ಡಿಕೆಶಿ ಇಷ್ಟವಾಗುತ್ತಾರೆ ಆದ್ರೆ ಅರ್ಥವಾಗಲ್ಲ: ಕೋಟ
ಈ ಡಿ.ಕೆ. ಶಿವಕುಮಾರ್, ಅವರ ಪಕ್ಷದವರಿಗೆ ಮಾತ್ರವಲ್ಲ ಇತರ ಪಕ್ಷದವರಿಗೂ ಇಷ್ಟವಾಗುತ್ತಾರೆ. ಆದರೆ ಅವರು ಯಾರಿಗೂ ಅರ್ಥವಾಗುವುದಿಲ್ಲ. ಅವರು ಸರಿಯಾದುದನ್ನು ಹೇಳಿದ್ದಾರೆ ಎಂದು ನಾವಂದುಕೊಳ್ಳುವಷ್ಟರಲ್ಲಿ ಉಲ್ಟಾ ಹೊಡೆದು ಗೊಂದಲ ಮೂಡಿಸುತ್ತಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.