ಕನ್ನಡದ ನಾಟಕ ರಂಗಕ್ಕೆ ದೊಡ್ಡ ಇತಿಹಾಸವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ವ್ಯಾಖ್ಯಾನಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಕನ್ನಡದ ನಾಟಕ ರಂಗಕ್ಕೆ ದೊಡ್ಡ ಇತಿಹಾಸವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ವ್ಯಾಖ್ಯಾನಿಸಿದರು. ಅವರು ತುಮಕೂರಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ನಾಟಕೋತ್ಸವದ ಅಂಗವಾಗಿ ನಡೆದ ನಿರ್ದಿಗಂತ ತಂಡ ಪ್ರಸ್ತುತಪಡಿಸಿದ ಪ್ರಾಜೆಕ್ಟ ಪಂಚ ತಂತ್ರ ನಾಟಕ ಉದ್ಘಾಟಿಸಿ ಮಾತನಾಡಿದರು. ಕಥೆ, ಕಥೆಗೊಂದು ಉಪಕಥೆ, ಉಪಕಥೆಗೊಂದು ವ್ಯಾಖ್ಯಾನ ಹೀಗೆ ಕಥಾ ಜಗತ್ತನ್ನು ಲೇಖಕರು ಹಿಗ್ಗಿಸುತ್ತಲೇ ಇರುತ್ತಾರೆ. ಅವೆಲ್ಲಾ ನಾಟಕಕ್ಕೆ ದ್ರವ್ಯವಾಗಿ ಬಳಕೆಯಾಗುತ್ತಿರುವ ಶ್ಲಾಘನೀಯ ಎಂದು ತಿಳಿಸಿದರು. ನಾಟಕಗಳ ಕಥಾ ವಸ್ತುಗಳು ಮುಂದಿನ ತಲೆಮಾರನ್ನು ಪ್ರಭಾವಿಸುವಂತಿರಬೇಕು. ನಟರ ಆಂಗಿಕ ಅಭಿನಯ, ಪರಿಕರ, ಧ್ವನಿ ಬೆಳಕು ಹೀಗೆ ಎಲ್ಲಾ ಆಯಾಮಗಳಲ್ಲೂ ವೃತ್ತಿಪರತೆ ಮೆರೆಯುವಂತಾಗಬೇಕು. ಅಂತಹ ಪ್ರಯತ್ನವನ್ನು ಕನ್ನಡ ರಂಗಭೂಮಿ ಮಾಡುತ್ತಲೇ ಇದೆ ಎಂದರು. ನಾಟಕಗಳು ಹೊಸತನದಿಂದ ಕೂಡಿದ್ದು ಪ್ರತಿ ಪ್ರದರ್ಶನವೂ ಒಂದೊಂದು ಅರ್ಥ ಮೂಡುವಂತೆ ಮಾಡುವ ಕೆಲಸವನ್ನು ನಿರ್ದೇಶಕರು ಮಾಡಬೇಕು. ಆಗ ನಾಟಕ ಸೇರಿದಂತೆ ಯಾವುದೇ ಕೃತಿ ತಲೆಮಾರುಗಳನ್ನು ಪ್ರಭಾವಿಸುತ್ತದೆ ಎಂದು ತಿಳಿಸಿದರು.ಜಾನಪದ ಕಲಾವಿದ ಕಂಟಲಗೆರೆ ಸಣ್ಣ ಹೊನ್ನಯ್ಯ ಮಾತನಾಡಿ, ರಂಗಭೂಮಿ ಎಲ್ಲಾ ಪ್ರಾಕಾರಗಳನ್ನು ಒಳಗೊಂಡ ಒಂದು ಕ್ರಿಯೆ. ಪುರಾಣ ರಂಗಭೂಮಿ, ಇತಿಹಾಸ ಹಾಗೂ ಜಾನಪದ ರಂಗಭೂಮಿ ಹೀಗೆ ಬಹು ಆಯಾಮಗಳಲ್ಲಿ ಚಲಿಸುವ ಒಂದು ಮಾಧ್ಯಮ ಎಂದು ಬಣ್ಣಿಸಿದರು. ತುಮಕೂರು ಜಿಲ್ಲೆಯ ನಾಟಕ ಪರಂಪರೆಗೆ ದೊಡ್ಡ ಇತಿಹಾಸವಿದೆ. ಅದರಲ್ಲೂ ಪೌರಾಣಿಕ ರಂಗಭೂಮಿ ವಿಶೇಷ ಸ್ಥಾನ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಶಿಲ್ಪಾ ಅವರು ಮಾತನಾಡಿ ತುಮಕೂರಿನಲ್ಲಿ ನಾಟಕ ಅಕಾಡೆಮಿ, ಝೆನ್ ಟೀಮ್ ವತಿಯಿಂದ ನಡೆಯುತ್ತಿರುವ ಈ ನಾಟಕ ಯಶಸ್ವಿಯಾಗಲಿ ಎಂದು ಆಶಿಸಿದರು.ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಈಗಾಗಲೇ ಸರ್ಕಾರ ಅನುದಾನ ನೀಡಿದೆ. ಶೀಘ್ರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗುವ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ಝೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಉಪಸ್ಥಿತರಿದ್ದರು. .ಕಾರ್ಯಕ್ರಮದ ಬಳಿಕ ಪ್ರಕಾಶ್ ರಾಜ್ ಅವರ ನಿರ್ದಿಗಂತ ತಂಡ ಪ್ರಾಜೆಕ್ಟ್ ಪಂಚತಂತ್ರ ಎಂಬ ನಾಟಕವನ್ನು ಪ್ರದರ್ಶಿಸಿದರು.