ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಗತ್ತಿನ ಅತ್ಯಂತ ಅಮೂಲ್ಯವಾದ ಜ್ಞಾನ ಸಂಸ್ಕೃತ ಭಾಷೆಯಲ್ಲಿದ್ದು, ಎಲ್ಲ ವಿದ್ಯಾರ್ಥಿಗಳು ಸಂಸ್ಕೃತ ಕಲಿಯಲು ಮುಂದೆ ಬರಬೇಕು ಎಂದು ಸಂಸ್ಕೃತ ಭಾರತಿ ಸಂಘಟನೆ ಅಖಿಲ ಭಾರತೀಯ ಮಹಾಮಂತ್ರಿ ಸತ್ಯನಾರಾಯಣ ಭಟ್ ಹೇಳಿದರು.ನಗರದ ಬಸವೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂಸ್ಕೃತ ಸಪ್ತಾಹ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹತ್ತು ಸಾವಿರ ವರ್ಷಗಳ ಹಿಂದೆ ಋಷಿಮುನಿಗಳ ತಪಸ್ಸು, ತೇಜಸ್ಸಿನ ಬಲದಿಂದ ನಮ್ಮ ದೇಶ ಜ್ಞಾನದ ಭಂಡಾರವಾಗಿತ್ತು. ಇವರ ಪರಂಪರೆಯಿಂದ ನಮ್ಮ ದೇಶಕ್ಕೆ ಅಪಾರ ಗೌರವವಿತ್ತು. ಮೌಲ್ಯಯುತ ಜ್ಞಾನವೇ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯಾಗಿತ್ತು ಎಂದು ಹೇಳಿದರು.ವಿಶ್ವಾಮಿತ್ರ, ಕೌಶಿಕ, ಭಾರದ್ವಾಜ, ಗೌತಮ, ಚರಕ ಮತ್ತಿತರರು ಸಂಸ್ಕೃತದಲ್ಲಿ ಅಪರೂಪದ ಗ್ರಂಥ ರಚಿಸಿದ್ದಾರೆ. ಈ ಗ್ರಂಥಗಳಲ್ಲಿ ಅಪಾರ ಜ್ಞಾನ ಅಡಗಿದೆ. ವಿದೇಶಿಯರು ಕೂಡ ಈ ಜ್ಞಾನಕ್ಕೆ ಮನಸೋತು ಸಂಸ್ಕೃತ ಕಲಿಯಲು ಮುಂದಾಗುತ್ತಿದ್ದಾರೆ. ನಮ್ಮ ದೇಶದ ಅಮೂಲ್ಯ ಆಸ್ತಿ ಎನಿಸಿದ ಈ ಜ್ಞಾನವನ್ನು ಮೊದಲು ಭಾರತೀಯರಾದ ನಾವು ಅಧ್ಯಯನ ಮಾಡಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಸಂಸ್ಕೃತ ಭಾಷೆ ಕಲಿಯಬೇಕು ಎಂದು ಸಲಹೆ ನೀಡಿದರು.
ಸಂಸ್ಕೃತ ಭಾರತಿ ಸಂಘಟನೆಯ ಕರ್ನಾಟಕ ರಾಜ್ಯ ಸಂಘಟನಾ ಮಂತ್ರಿ ಲಕ್ಷ್ಮೀನಾರಾಯಣ ಭುವನಕೋಟೆ ಮಾತನಾಡಿ, ಆಯುರ್ವೇದದಲ್ಲಿ ಅಪಾರ ಜ್ಞಾನವಿದೆ. ಇಲ್ಲಿ ಕಲಿಯಲು ಅವಕಾಶ ಸಿಕ್ಕಿರುವುದು ವಿದ್ಯಾರ್ಥಿಗಳ ಭಾಗ್ಯ. ಚರಕ, ಸುಶ್ರುತರ ಸಂಸ್ಕೃತ ಸಾಹಿತ್ಯ ಅಧ್ಯಯನ ಮಾಡಿ ನೀವೂ ಅವರಂತೆ ಎತ್ತರಕ್ಕೆ ಬೆಳೆದು ದೇಶದ ಕೀರ್ತಿಯನ್ನು ವಿಶ್ವಾದ್ಯಂತ ಬೆಳಗಲು ಅವಕಾಶವಿದೆ ಎಂದರು.ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷೆ ಶಾರದಾ ಕುಲಕರ್ಣಿ ಮಾತನಾಡಿ, 1969ರಲ್ಲಿ ಕೇಂದ್ರ ಸರಕಾರ ಪಾಲಕಿ ಉತ್ಸವ ಸಂಸ್ಕೃತ ವರ್ಷ ಆಚರಿಸಿತು. ಆದರೆ ಅದು ಕೇವಲ ಸರ್ಕಾರದ ಮಟ್ಟದಲ್ಲಿ ನಡೆಯಿತು. ಮುಂದೆ 2000ನೇ ಸಾಲಿನಿಂದ ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆ ದಿನ ವಿಶ್ವ ಸಂಸ್ಕೃತ ದಿನ ಆಚರಿಸಲಾಗುತ್ತದೆ. ಅದು 25 ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಪ್ರಸ್ತುತ ವಿದೇಶಗಳಲ್ಲೂ ಸಂಸ್ಕೃತ ದಿನ ಹಾಗೂ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.
ಬಸವೇಶ್ವರ ವಿದ್ಯಾವರ್ಧಕ ಸಂಘದ ಗೌರ್ನಿಂಗ್ ಕೌನ್ಸಿಲ್ ಚೇರ್ಮನ್ ಮಲ್ಲಿಕಾರ್ಜುನ ಸಾಸನೂರ, ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್. ಹಿರೇಮಠ ಮಾತನಾಡಿದರು. ಇದಕ್ಕೂ ಮೊದಲು ಪಾಣಿನಿ ಹಾಗೂ ಪತಂಜಲಿ ಮಹರ್ಷಿ ಭಾವಚಿತ್ರಗಳ ಪೂಜೆ ನಡೆಯಿತು.ಶಿವರಾಮ ಹೆಗಡೆ, ಎಸ್.ಆರ್. ದೇಸಾಯಿ, ರಮೇಶ ದಾಬಡೆ, ಡಾ.ಶ್ವೇತಾ ಮನಗೂಳಿ, ಡಾ.ವಿ.ಎಸ್. ಚೌಧರಿ, ಡಾ.ಮಂಜುಳಾ ವಿ.ಕೆ., ಡಾ.ಪುನೀತ ಘಾಟಗೆ, ಡಾ.ಸ್ಮೀತಾ ನೂಲ್ವಿ, ಡಾ.ಜಿ.ಎಸ್. ಕುಲಕರ್ಣಿ, ಡಾ.ವಿ.ಎಸ್. ಹಿರೇಮಠ, ಡಾ.ಸಿ.ಆರ್. ಹೊನವಾಡ ಇತರರಿದ್ದರು.
ಜನಮನ ಸೆಳೆದ ನಾಟಕ: ನಗರದ ವಿದ್ಯಾಗಿರಿ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲೂ ಸಪ್ತಾಹದ ಉದ್ಘಾಟನೆ ಕಾರ್ಯಕ್ರಮ ಸಾಂಕೇತಿಕವಾಗಿ ನಡೆಯಿತು. ಸಂಸ್ಕೃತ ಭಾರತಿ ಸಂಘಟನೆ ಅಖಿಲ ಭಾರತೀಯ ಮಹಾಮಂತ್ರಿ ಸತ್ಯನಾರಾಯಣ ಭಟ್ ಸಂಸ್ಕೃತದ ಆಕರ್ಷಕ ಕಥೆಗಳನ್ನು ಹೇಳಿ ಮಕ್ಕಳನ್ನು ರಂಜಿಸಿದರು. ಸಂಸ್ಕೃತ ಭಾರತಿ ಸಂಘಟನೆ ಕರ್ನಾಟಕ ರಾಜ್ಯ ಸಂಘಟನ ಮಂತ್ರಿ ಲಕ್ಷ್ಮೀನಾರಾಯಣ ಭುವನಕೋಟೆ, ಸಂಸ್ಕೃತ ಕಲಿಯುವಂತೆ ಮಕ್ಕಳನ್ನು ಹುರಿದುಂಬಿಸಿದರು. ಶಾಲೆ ಮಕ್ಕಳು ಬಾಲಿಕಾಯಾಃ ಮಿತಾಹಾರ ಎಂಬ ಸಂಸ್ಕೃತ ನಾಟಕ ಪ್ರದರ್ಶಿಸಿ ಜನಮನ ಸೆಳೆದರು. ಶಾಲೆ ಪ್ರಾಚಾರ್ಯ ಸುರೇಶ ಹೆಗಡೆ, ಶಾರದಾ ಕುಲಕರ್ಣಿ, ಅನ್ನಪೂರ್ಣಾ ಬಿದರಿ, ಲಕ್ಷ್ಮೀ ನಾಯಕ, ಸುಪ್ರಿಯಾ ತಿವಾರಿ, ಅರುಣಾ ಹಳ್ಳಿ, ಯಲಗೂರೇಶ ಪಾಟೀಲ ಇತರರು ಇದ್ದರು.