ಜಗತ್ತು ಹಿಂಸೆಯಿಂದ ಬಳಲುತ್ತಿದೆ: ಎಸ್. ಜಿ. ಸಿದ್ದರಾಮಯ್ಯ

| Published : Oct 04 2024, 01:02 AM IST

ಜಗತ್ತು ಹಿಂಸೆಯಿಂದ ಬಳಲುತ್ತಿದೆ: ಎಸ್. ಜಿ. ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತು ಯುದ್ಧವನ್ನು ಎದುರಿಸುತ್ತಿದೆ. ಅಲ್ಲಲ್ಲಿ ನಡೆಯುತ್ತಿರುವ ಯುದ್ಧಗಳು, ಹಿಂಸೆಗಳನ್ನು ನೋಡಿದರೇ ಜಗತ್ತು ಈಗ ಹಿಂಸೆಯಿಂದ ಬಳಲುತ್ತಿದೆ.

ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ

ಜಗತ್ತಿನ ತಲ್ಲಣಗಳಿಗೆ ಸಾಹಿತ್ಯ ಸ್ಪಂದಿಸಬೇಕಾಗಿದೆ

ಪ್ಯಾಲೆಸ್ತೇನ್, ಉಕ್ರೇನ್, ಮಣಿಪುರದಲ್ಲಿನ ಹಿಂಸೆಯಿಂದ ಅನಾವರಣ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಗತ್ತು ಯುದ್ಧವನ್ನು ಎದುರಿಸುತ್ತಿದೆ. ಅಲ್ಲಲ್ಲಿ ನಡೆಯುತ್ತಿರುವ ಯುದ್ಧಗಳು, ಹಿಂಸೆಗಳನ್ನು ನೋಡಿದರೇ ಜಗತ್ತು ಈಗ ಹಿಂಸೆಯಿಂದ ಬಳಲುತ್ತಿದೆ ಎಂದು ಹಿರಿಯ ಸಾಹಿತಿ ಎಸ್. ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿರುವ ತಲ್ಲಣಗಳಿಗೆ ಸ್ಪಂದಿಸಬೇಕಾಗಿದೆ. ಅಂಥ ಸಾಹಿತ್ಯದ ಅಗತ್ಯವಿದೆ. ಇದನ್ನು ತಡೆಯುವ ದಿಸೆಯಲ್ಲಿ ಪ್ರಯತ್ನಗಳಾಗಬೇಕಾಗಿದೆ ಎಂದರು.

ಕೊಪ್ಪಳ ದಸರಾ ಕಾವ್ಯ ಸಂಭ್ರಮ, ಮೈಸೂರು ದಸರಾ ಇದ್ಯಾವುದು ಸಂಭ್ರಮದಿಂದ ಆಗಬೇಕಾಗಿರುವುದಲ್ಲ. ಹಿಂಸೆಯನ್ನು ವಿರೋಧಿಸಿ, ಶಾಂತಿಯನ್ನು ಬೋಧಿಸುವಂತಾಗಬೇಕು. ಅಂಥ ಕಾಲಘಟ್ಟದಲ್ಲಿ ನಾವಿದ್ದೇವೆ. ಸಿನೆಮಾಗಳು ಸಂಸ್ಕೃತಿಯನ್ನ ಹಾಳು ಮಾಡಿವೆ. ಸಾಹಿತ್ಯ, ಸಂಸ್ಕೃತಿ ಎಂದರೇ ಕೇವಲ ತೆವಲಿಗಾಗಿ ಅಲ್ಲ, ಅದು ಸಾಮಾಜಿಕ ಜವಾಬ್ದಾರಿಯಾಗಿದೆ. ಹೊಣೆಗಾರಿಕೆ ಇರದ ಸಾಹಿತ್ಯ ಸಾಹಿತ್ಯವೇ ಅಲ್ಲ. ಪ್ಯಾಲೆಸ್ತೀನ್ ಹಿಂಸೆ, ಉಕ್ರೇನ್‌ ಯುದ್ಧದ ಹಾನಿ ಹಾಗೂ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷ ಅತ್ಯಂತ ಕಳವಳಕಾರಿಯಾಗಿದೆ. ಇದೆಲ್ಲಕೂ ಪರಿಹಾರಬೇಕಾಗಿದೆ ಎಂದು ಹೇಳಿದರು.

ಇಂದಿನ ರಾಜಕೀಯ, ರಾಜಕಾರಣಿಗಳ ಕುರಿತು ಮಾತನಾಡುವಂತೆ ಇಲ್ಲ. ಅವರಿಗೆ ಸಾಹಿತಿಗಳ ಭಾಷೆಯೇ ಅರ್ಥವಾಗುವುದಿಲ್ಲ, ಅದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿಯೂ ಅವರಿಲ್ಲ. ಅವರ ನಡೆ, ನುಡಿ, ಅವರಾಡುವ ಭಾಷೆ, ಪರಸ್ಪರ ದ್ವೇಷ ನೋಡಿದರೇ ಅವರಿಗೆ ತಿದ್ದಿ ಹೇಳುವ ಯಾವ ಸಾಧ್ಯತೆಯೂ ಇಲ್ಲ. ರಾಜಕಾರಣಿಗಳು ಅನೈತಿಕ ಗುಂಡಿಗೆ ಬಿದ್ದಿದ್ದಾರೆ ಎಂದು ಕಿಡಿಕಾರಿದರು.ರಾಯಚೂರು ವಿವಿ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಮಾತನಾಡಿ, ನಾನು ಸಾಹಿತಿ ಅಲ್ಲ, ನಾನು ರಾಜ್ಯಶಾಸ್ತ್ರ ವಿಭಾಗದವನಾಗಿದ್ದೇನೆ. ಹೀಗಾಗಿ, ನಾನು ಸಾಹಿತ್ಯದ ವಿಮರ್ಶೆಯ ಗೋಜಿಗೆ ಹೋಗುವುದಿಲ್ಲ. ಆದರೆ, ಇಂದಿನ ರಾಜಕಾರಣಿಗಳು ರಾಜಕೀಯ ವಿಜ್ಞಾನದಲ್ಲಿ ವಿಜ್ಞಾನವನ್ನು ಮರೆತುಬಿಟ್ಟಿದ್ದಾರೆ. ಜ್ಞಾನ ಇಲ್ಲದವರಾಗಿದ್ದಾರೆ ಎಂದಾಗ ಸಭಿಕರು ಅಜ್ಞಾನಿಗಳು ಎಂದು ಕೂಗಿದರು. ಹಾಗಂತ ನಾನು ಕರೆಯುವುದಿಲ್ಲ, ಕೆಲವರು ಜ್ಞಾನಿಗಳು ಇದ್ದಾರೆ ಎಂದರು.

ಕಲಬುರಗಿಯ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಸದ್ಯದ ಸ್ಥಿತಿಯಲ್ಲಿ ನೈತಿಕತೆಯ ಕುರಿತು ಮಾತನಾಡುವುದು ಕಷ್ಟಕರವಾಗುತ್ತದೆ ಎಂದರು.

ವಿಜಯನಗರ ವಿವಿ ಕುಲಸಚಿವ ಎಸ್.ಎನ್. ರುದ್ರೇಶ, ಕೃಷ್ಣದೇವರಾಯ ವಿವಿಯ ಕುಲಪತಿ ಎಂ. ಮನಿರಾಜು ಮಾತನಾಡಿದರು.

ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಇದ್ದರು. ಕೊಪ್ಪಳ ವಿವಿ ಕುಲಸಚಿವ ಕೆ.ವಿ. ಪ್ರಸಾದ ಸ್ವಾಗತಿಸಿದರು. ವರ್ಷಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.