ಸಾರಾಂಶ
ಪಟ್ಟಣದ ಮಠದ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಹಾರಥೋತ್ಸವವು ಮಂಗಳವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತಿ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಮಠದ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಹಾರಥೋತ್ಸವವು ಮಂಗಳವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತಿ ವಿಜ್ರಂಭಣೆಯಿಂದ ನೆರವೇರಿತು.ಶ್ರೀ ಗುರು ರಾಯರ ಮಹಾ ರಥೋತ್ಸವದ ನಿಮಿತ್ತವಾಗಿ ಮಂಗಳವಾರ ಬೆಳಿಗ್ಗೆಯಿಂದಲೇ ಶ್ರೀ ರಾಯರ ಬೃಂದಾವನದ ಸನ್ನಿಧಾನದಲ್ಲಿ ಹೋಮ, ರಥ ಪುಣ್ಯಾಹ, ದಿಗ್ಬಲಿ, ಮಹಾ ಮಂಗಳಾರತಿ ನಡೆದು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಹಂಸಾರೂಡ ರಾಘವೇಂದ್ರ ಸ್ವಾಮಿಗಳ ಹೂವಿನ ಅಲಂಕಾರವನ್ನು ಮಾಡಿ ಪೂಜಿಸಲಾಯಿತು.
ನಂತರ ಶ್ರೀ ರಾಯರ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ವಿವಿಧ ವಾದ್ಯ ಮೇಳಗಳೊಂದಿಗೆ ಹಾಗೂ ಶ್ರೀ ರಾಯರ ಮಂತ್ರಘೋಷಗಳೊಂದಿಗೆ ರಥದ ಬಳಿ ಹೊತ್ತು ತಂದ ಭಕ್ತರು ರಥಕ್ಕೆ ಮೂರು ಬಾರಿ ಪ್ರದಕ್ಷಿಣೆ ಮಾಡಿಸಿ ರಥದಲ್ಲಿ ಶ್ರೀ ರಾಯರ ಉತ್ಸವ ಮೂರ್ತಿಯನ್ನು ಕುಳ್ಳಿರಿಸುತ್ತಿದ್ದಂತೆಯೇ ಭಕ್ತಾಧಿಗಳು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.ರಥೋತ್ಸವಕ್ಕೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ತಾಲೂಕು ಬಿಜೆಪಿ ಪಕ್ಷದ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಭಾಗವಹಿಸಿ ದೇವರ ದರ್ಶನ ಪಡೆದರು.
ಶ್ರೀ ರಾಘವೇಂದ್ರ ಸ್ವಾಮಿ ಸೇವಾಟ್ರಸ್ಟಿನ ಅಧ್ಯಕ್ಷ ಪ.ನ.ಕೃಷ್ಣ ಉಪಾಧ್ಯ, ಸಿ.ವಿ.ಸುಮತೀಂದ್ರ, ಕೆ.ರಾಮಮೂರ್ತಿ, ಸಿ.ಜಿ.ವೆಂಕಟೇರ್ಶ, ಮಾರ್ಕೋಡ್ ವಿದ್ಯಾರಣ್ಯ, ಎ.ಎನ್.ಗುರುಪ್ರಸಾದ್, ಪಿ.ವಿ.ವಾದಿರಾಜ, ಪುರಸಭೆಯ ಸದಸ್ಯ ಪಟ್ಲಿನಾಗರಾಜ್, ಬಾಲಸುಬ್ರಮಣ್ಯ, ರಂಗನಾಥರಾವ್, ಎಸ್.ಎಸ್.ಭವನ್ ರಾಜಣ್ಣ, ಎನ್.ವಿ.ಹರೀಶ್, ರವಿಕುಮಾರ್, ರಾಜುಕರಡೇರ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತರಕಾರಿ ಮಂಜುನಾಥ್, ಕುಬೇಂದ್ರೋಜಿರಾವ್, ವಸಂತ್ ಕುಮಾರ್, ಭಕ್ತರು ಇದ್ದರು.ರಥೋತ್ಸವದ ನಂತರ ಬಂದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.