ಸಾರಾಂಶ
ಹುಬ್ಬಳ್ಳಿ:
ಬೇರೆ ಪಕ್ಷದಲ್ಲಿದ್ದು ಏನೇ ತಪ್ಪು ಮಾಡಿದ್ದವರು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ವಾಷಿಂಗ್ ಪೌಡರ್ ನಿರ್ಮಾದಂತೆ ಸ್ವಚ್ಛವಾಗಲಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಲೇವಡಿ ಮಾಡಿದರು.ಗಾಲಿ ಜನಾರ್ದನ ರೆಡ್ಡಿ ಕೆಕೆಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ ಬಿಜೆಪಿ ಸೇರ್ಪಡೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರೇ ಗಾಲಿ ಜನಾರ್ದನ ರೆಡ್ಡಿ ಅವರನ್ನು ದೂರ ಇಟ್ಟಿದ್ದರು. ಇದೀಗ ಚುನಾವಣೆಯಲ್ಲಿ ಸೀಟುಗಳು ಕಡಿಮೆ ಬರುವ ಸರ್ವೇ ರಿಪೋರ್ಟ್ ಬರುತ್ತಿದ್ದಂತೆಯೇ ಅವರನ್ನು ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದರು.
ನಾನು ಲಂಚ ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಮೋದಿ, ಇದೀಗ ಭ್ರಷ್ಟಾಚಾರ ಆರೋಪ ಹೊತ್ತಿರುವ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ. ಆಗ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದವರು ತಮ್ಮ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಂತೆ ಅವರು ಶುದ್ಧರಾಗಿ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲಿನ ಭಯ ಆರಂಭವಾಗಿದೆ. ಅದೇ ಕಾರಣಕ್ಕೆ ಭ್ರಷ್ಟಾಚಾರದ ಆರೋಪದ ಮೇಲೆ ದೂರ ಇಟ್ಟ ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ. ಇದರಲ್ಲಿ ಯಾವುದೇ ವಿಶೇಷತೆಯಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಹಿಂದೆ ಶೇ. 37ರಷ್ಟು ಮತಗಳು ಬಂದಿದ್ದವು, ಇದೀಗ ಶೇ. 29ರಷ್ಟು ಬರಬಹುದು, ದೇಶಾದ್ಯಂತ 200 ಸೀಟುಗಳು ಬಿಜೆಪಿಗೆ ಬರಲಿವೆ. ಇದು ಸರ್ವೇ ಮಾಹಿತಿಯಿಂದಲೇ ಬಹಿರಂಗಗೊಂಡಿದೆ ಎಂದರು.ಕಳೆದ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಮೇಲೆ ನಡೆಯಬೇಕು. ಅದು ಬಿಟ್ಟು ಇದೀಗ ಆರೋಪ-ಪ್ರತ್ಯಾರೋಪಗಳ ಮೇಲೆ ನಡೆಯುವಂತಾಗಿದೆ. ಇದು ದುರ್ದೈವದ ಸಂಗತಿ. ವಿಶ್ವಗುರು ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರ ಕಾಲದಲ್ಲೇ ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಹೋಗಿವೆ. ಜಿಯೋ ಕಂಪನಿಗೆ ಜಾಹೀರಾತು ಕೊಡುವ ಮೋದಿ ಅವರು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಜಾಹೀರಾತು ನೀಡಲಿಲ್ಲ. ಉಚಿತವಾಗಿ ಸೇವೆ ನೀಡುವ ಜಿಯೋ ಲಾಭದ ಹಾದಿಯಲ್ಲಿದ್ದರೆ ಬಿಎಸ್‌ಎನ್‌ಎಲ್ ಯಾಕೆ ನಷ್ಟದಲ್ಲಿದೆ. ಇದರ ಬಗ್ಗೆ ಯಾಕೆ ಯಾರೂ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.