ಹಳಿಯಾಳದ ರೈತರಿಗೆ ಹೆಚ್ಚಿನ ದರ ಸಿಗಲಿ: ಮಾಜಿ ಶಾಸಕ ಆಗ್ರಹ

| Published : Nov 09 2025, 03:15 AM IST

ಸಾರಾಂಶ

The yield of EID Pari Sugar Factory in Haliyal is 11.85. In this case, our farmers should get a higher price

ಕನ್ನಡಪ್ರಭ ವಾರ್ತೆ ಹಳಿಯಾಳ

ರಾಜ್ಯ ಸರ್ಕಾರ ಶೇ. 11.25 ಇಳುವರಿ ಆಧರಿಸಿ ಪ್ರತಿ ಟನ್ ಕಬ್ಬಿಗೆ ₹3200, ಕಾರ್ಖಾನೆಯವರಿಂದ ಹಾಗೂ ಸರ್ಕಾರದಿಂದ ₹50 ಸೇರಿಸಿ 3300ರೂ ದರವನ್ನು ನಿನ್ನೆ ಘೋಷಿಸಿದೆ. ಆದರೆ ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಇಳುವರಿ ಪ್ರಮಾಣ ಶೇ.11.85 ಇದೆ. ಹೀಗಿರುವಾಗ ನಮ್ಮ ರೈತರಿಗೆ ಹೆಚ್ಚಿನ ದರ ದೊರೆಯಬೇಕು ಎಂದು ಮಾಜಿ ಶಾಸಕ ಸುನೀಲ ಹೆಗಡೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಸೇರಿ ಹಳಿಯಾಳದಲ್ಲಿ ಪ್ರತಿಭಟನೆ ಮಾಡಿ ಪ್ರತಿಟನ್ ಕಬ್ಬಿಗೆ ₹3300 ದರ ನೀಡಬೇಕೆಂದು ಆಗ್ರಹಿಸಿದ್ದೆವು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದು ಅವರು ₹3200 ದರ ನಿಗದಿ ಮಾಡಿದರು. ನಾವು ಶೇ. 11.85 ಇಳುವರಿ ಪ್ರಮಾಣವಿದ್ದರೂ ₹3200ಕ್ಕೆ ಒಪ್ಪಿಗೆ ಸೂಚಿಸಿದ್ದೆವು. ನಾವು ಈಗಲೂ ಈ ದರಕ್ಕೆ ಬದ್ಧರಾಗಿದ್ದೆವೆ. ಆದರೆ ರಾಜ್ಯ ಸರ್ಕಾರ ನಿನ್ನೆ ಘೋಷಿಸಿದ ದರ ನೋಡಿ, ನಮ್ಮ ರೈತರಿಗೂ ಈ ದರ ಘೋಷಣೆಯ ಪ್ರಯೋಜನ ಸಿಗಬೇಕೆಂಬುದು ನಮ್ಮ ಆಗ್ರಹವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರಿಂದ ಬೆಂಬಲ:

ಈಗಾಗಲೇ ನಾವು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿ, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಹಾಗೆಯೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರೊಂದಿಗೂ ಮಾತುಕತೆ ನಡೆಸಿ ಹಳಿಯಾಳದ ಇಳುವರಿ ಪ್ರಮಾಣ ಹೆಚ್ಚಾಗಿರುವುದರಿಂದ ನಮ್ಮ ರೈತರಿಗೆ ಹೆಚ್ಚಿನ ಲಾಭ ದೊರೆಯವುಂತಾಗಬೇಕೆಂದು ಸಹಕರಿಸಬೇಕೆಂದು ಮನವರಿಕೆ ಮಾಡಿದ್ದೇವೆ. ಅದಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದು, ಮುಂದಿನ ವಾರ ಮುಖ್ಯಮಂತ್ರಿಗಳೊಂದಿಗೆ ಭೇಟಿಯಾಗುವ ಭರವಸೆ ನೀಡಿದ್ದು, ಅವರೊಂದಿಗೆ ನಾನು ಹಳಿಯಾಳದ ರೈತರ ನಿಯೋಗ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಕಾರ್ಖಾನೆಯವರು ಹೆಚ್ಚಿನ ದರ ನೀಡಲು ಮೀನಮೇಷ ಮಾಡಿದರೇ ನಾವು ನಮ್ಮ ರೈತರೊಂದಿಗೆ ಪಕ್ಷದ ಕಾರ್ಯಕತರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಪಕ್ಷದ ಮುಖಂಡರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.