ಸಾರಾಂಶ
ಹಿರೇಮಗಳೂರಿನ ಶ್ರೀದೇವಿ ಭವನದಲ್ಲಿ ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ನೂತನ ಘಟಕದ ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆಧುನಿಕ ಜಗತ್ತಿನಲ್ಲಿ ದಾಸ ಸಾಹಿತ್ಯದ ಸೊಗಡನ್ನು ಪರಿಚಯಿಸಲು ಹಾಗೂ ಯುವ ಪೀಳಿಗೆಗೆ ಸಾಹಿತ್ಯಾತ್ಮಕವಾದ ಅಮೂಲ್ಯ ಜ್ಞಾನವನ್ನು ತುಂಬಲು ದಾಸಶ್ರೇಷ್ಠರ ವಿಚಾರಧಾರೆ ಆಳವಾಗಿ ಬಿತ್ತಬೇಕು ಎಂದು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು. ಹಿರೇಮಗಳೂರಿನ ಶ್ರೀದೇವಿ ಭವನದಲ್ಲಿ ನಡೆದ ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ನೂತನ ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಾದ್ಯಂತ ದಾಸ ಸಾಹಿತ್ಯ ಪಸರಿಸಲು ತಾಲೂಕು, ಹೋಬಳಿ ಮಟ್ಟದಲ್ಲಿ ಘಟಕ ಸ್ಥಾಪಿಸಿ ಕನಕದಾಸರು, ಪುರಂದರದಾಸರು ಸೇರಿದಂತೆ ಪ್ರಖ್ಯಾತ ದಿಗ್ಗಜರ ವಚನ, ಕೀರ್ತನೆಗಳನ್ನು ಸಮಗ್ರವಾಗಿ ತೆರೆದಿಡಬೇಕು. ಜೊತೆಗೆ ಗ್ರಾಮೀಣ ಸೊಗಡಿನ ಬರಹಗಾರರನ್ನು ಗುರುತಿಸಿ ಸಾಹಿತ್ಯ ಲೋಕಕ್ಕೆ ಕರೆ ತರಬೇಕು ಎಂದರು.
ಅಸ್ಪೃಶ್ಯತೆ, ಮೇಲು ಕೀಳು ಎಂಬ ಕೆಟ್ಟ ಸಂಪ್ರದಾಯ ತೊಡೆದು ಹಾಕುವ ಸಲುವಾಗಿ ಅನಾದಿ ಕಾಲದಲ್ಲೇ ದಾಸಶ್ರೇಷ್ಠರು ವಚನಗಳ ಮೂಲಕ ತಮ್ಮದೇ ಶೈಲಿಯಲ್ಲಿ ಇರುವೊಂದೇ ಮನುಷ್ಯ ಜಾತಿ ಎಂದು ಸಾರಿದ ಪರಿಣಾಮ ಇಂದು ಸರ್ವಜನರು ಒಂದೇ ಎಂಬ ಮನೋಭಾವನೆ ಸಮಾಜದಲ್ಲಿದೆ ಎಂದು ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರಾಜ್‌ರಾಜ್ ಕಲ್ಕಟ್ಟೆ ಮಾತನಾಡಿ ದಾರ್ಶನಿಕರ ಕಾಲದಲ್ಲಿ ತಾರತಮ್ಯ ನೀತಿಗಳನ್ನು ಬೇರು ಸಮೇತ ಕಿತ್ತೊಗೆಯಲು ದಾಸಶ್ರೇಷ್ಠರು ಪದಗಳ ಸಾಲಿನಲ್ಲಿ ಕೀರ್ತನೆಗಳನ್ನು ರಚಿಸಿ ಕೊಳಕು ಸಂಪ್ರದಾಯ ಹೋಗಲಾಡಿಸಿ, ಸಮಾಜದ ಸುಧಾರಣೆಗೆ ಮುಂದಾಗಿದ್ದರು ಎಂದು ಪ್ರತಿಪಾದಿಸಿದರು.ದಾಸ ಸಾಹಿತ್ಯ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ ಹೆಚ್ಚು ಮುಂಚೂಣಿಯಲ್ಲಿತ್ತು. ಆ ಭಾಗದಲ್ಲಿ ಜನಿಸಿದ ಕನಕದಾಸರು ಉಡುಪಿ ಶ್ರೀಕೃಷ್ಣನ ದರ್ಶನ ಭಾಗ್ಯಕ್ಕಾಗಿ ನೂರಾರು ಕಿಲೋ ಮೀಟರ್ ಭಜನೆಯೊಂದಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿದ ವೇಳೆ ದೈವ ಶಕ್ತಿ ಕನಕರಲ್ಲಿ ತುಂಬಿದ ಬಳಿಕವೇ ಕೃಷ್ಣನ ವಿಗ್ರಹ ಕನಕದಾಸರ ಕೀರ್ತನೆಗೆ ಮೆಚ್ಚಿ ದರ್ಶನ ಭಾಗ್ಯ ಲಭಿಸಿತು ಎಂದು ಹೇಳಿದರು.ನೂತನ ಅಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್ ಮಾತನಾಡಿ, ಮಾನವನ ನೆಮ್ಮದಿ, ಸುಖಮಯ ಜೀವನಕ್ಕೆ ದಾಸ ಸಾಹಿತ್ಯ ಪೂರಕ ಹಾಗೂ ಮನಸ್ಸನ್ನು ಹದಗೊಳಿಸುವ ಶಕ್ತಿಯಿದೆ. ಅನೇಕ ವಿದ್ವಾಂಸರ ಸಂಗೀತದಿಂದ ಸಾಹಿತ್ಯದ ಬಗ್ಗೆ ಒಲವು ಹೊಂದಿ ಇದೀಗ ಜಿಲ್ಲಾ ಸಾರಥ್ಯ ವಹಿಸಿದ್ದು ಮುಂದೆ ಕನ್ನಡಾಂಬೆ ಸೇವೆಯಲ್ಲಿ ತೊಡಗುತ್ತೇನೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾಸ ಸಾಹಿತ್ಯ ರಾಜ್ಯ ಸಂಚಾಲಕ ಸೂರಿ ಶ್ರೀನಿವಾಸ್, ಜಿಲ್ಲೆಯ ಪ್ರತಿ ತಾಲೂಕಿನಾದ್ಯಂತ ಘಟಕ ಸ್ಥಾಪಿಸಿ ಜವಾಬ್ದಾರಿ ಕೊಡುವ ಮುಖಾಂತರ ಕನ್ನಡತಾಯಿ ಭುವನೇಶ್ವರಿಗೆ ಸಾಹಿತ್ಯದ ದಿವ್ಯಾಭರಣವನ್ನು ಅಲಂಕರಿಸುವ ಕಾಯಕ ಮಾಡಬೇಕು ಎಂದು ಸಲಹೆ ಮಾಡಿದರು.ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮ ಶೇಖರ್, ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮೀ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ ಉಪಸ್ಥಿತರಿದ್ದರು.
ನೂತನ ಜಿಲ್ಲಾ ಪದಾಧಿಕಾರಿಗಳು: ಹಿರೇನಲ್ಲೂರು ಶಿವು (ಅಧ್ಯಕ್ಷ), ನಾಗಶ್ರೀ ತ್ಯಾಗರಾಜ್ (ಉಪಾಧ್ಯಕ್ಷ), ಭಗವಾನ್, ಸುಮಾ ಪ್ರಸಾದ್ (ಗೌರವಾಧ್ಯಕ್ಷ), ಮುನಾವರ್, ಕಿರಣ್‌ಕುಮಾರ್ (ಪ್ರಧಾನ ಕಾರ್ಯದರ್ಶಿಗಳು), ಸಿಂಗಟಗೆರೆ ಸಿದ್ದಪ್ಪ (ಕೋಶಾಧ್ಯಕ್ಷ), ಪದ್ಮಾವತಿ ಶ್ರೀನಿವಾಸ್, ಸುನೀತ ಕಿರಣ್‌ಕುಮಾರ್ (ಸಂಘಟನಾ ಕಾರ್ಯದರ್ಶಿಗಳು), ಕೆ.ಎನ್.ನಾಗಭೂಷಣ್, ವಿಜಯಕುಮಾರಿ, ಮೋಹನ್‌ಕುಮಾರ್ (ಸದಸ್ಯರು).ಪೋಟೋ ಫೈಲ್ ನೇಮ್ 12 ಕೆಸಿಕೆಎಂ 2ಹಿರೇಮಗಳೂರಿನ ಶ್ರೀದೇವಿ ಭವನದಲ್ಲಿ ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ನೂತನ ಘಟಕದ ಪದಗ್ರಹಣ ಸಮಾರಂಭ ನಡೆಯಿತು.