ಸಾರಾಂಶ
ಕಾರವಾರ: ಯುವ ಜನತೆ ಪಕ್ಷಕ್ಕೆ ಆಧಾರಸ್ತಂಭ ಇದ್ದಂತೆ. ಪಕ್ಷದ ಯುವ ಮೋರ್ಚಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಪಕ್ಷದ ಚಟುವಟಿಕೆಗಳಲ್ಲಿ ಇನ್ನು ಹೆಚ್ಚು ಕ್ರಿಯಾಶೀಲವಾಗಿ ತೊಡಗಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೂ ತಲುಪಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ತಿಳಿಸಿದರು.
ಕಾರವಾರ ಹಾಗೂ ಅಂಕೋಲಾ ಮಂಡಲಗಳಲ್ಲಿ ಬುಧವಾರ ಜರುಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ. ಪಕ್ಷ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಪಕ್ಷಕ್ಕಾಗಿ ನಾವೇನು ಮಾಡಿದ್ದೇವೆ. ಮಾಡುತ್ತಿದ್ದೇವೆ ಎನ್ನುವುದನ್ನು ಯೋಚಿಸಿ ಮತ್ತಷ್ಟು ಹುಮ್ಮಸ್ಸಿನಿಂದ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ. ಇಂತಹ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಕಾರವಾರ ಗ್ರಾಮೀಣ ಮಂಡಲ, ಅಂಕೋಲಾ ಮಂಡಲ ಹಾಗೂ ಕಾರವಾರ ನಗರ ಮಂಡಲದಲ್ಲಿ ಯುವಮೋರ್ಚಾ ಕಾರ್ಯಕಾರಿಣಿ ನಡೆಯಿತು.ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರೇಮ ಕುಮಾರ, ಯುವ ಮೋರ್ಚಾ ಪಕ್ಷದ ಬೆನ್ನೆಲುಬು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸಾಗಬೇಕು ಅಂತಾದರೆ ಯುವ ಮೋರ್ಚಾ ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಯುವ ಮೋರ್ಚಾ ಅಧ್ಯಕ್ಷ ಸುರೇಂದ್ರ ಗಾಂವ್ಕರ್, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಜಗದೀಶ ನಾಯಕ ಮೊಗಟಾ, ಸಂಜಯ ಸಾಳುಂಕೆ, ನಾಗೇಶ ಕುರ್ಡೇಕರ, ಪ್ರಮೋದ ನಾಯ್ಕ, ಸಂಜಯ ನಾಯ್ಕ ಮತ್ತಿತರರು ಇದ್ದರು.ಕರ್ನಾಟಕ ಭೂಷಣ ಪ್ರಶಸ್ತಿ ವಿಜೇತ ಸುರೇಂದ್ರ ಗಾಂವ್ಕರ್ ಹಾಗೂ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರೇಮ ಕುಮಾರ್ ಅವರಿಗೆ ರೂಪಾಲಿ ನಾಯ್ಕ್ ಗೌರವಿಸಿದರು.