ಸಾರಾಂಶ
ಗಜೇಂದ್ರಗಡ:
ಹಿಂದವೀ ಸಾಮ್ರಾಜ್ಯದ ಅಧಿಪತಿ ಛತ್ರಪತಿ ಶಿವಾಜಿ ಮಹಾರಾಜರ ಸ್ಫೂರ್ತಿ ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.ಸ್ಥಳೀಯ ಶಿವಾಜಿಪೇಟೆಯ ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನದಲ್ಲಿ ನಡೆದ ಶಿವಾಜಿ ಮಹಾರಾಜರ ೩೯೮ನೇ ಜಯಂತ್ಯೋತ್ಸವ ಸಮಾರಂಭ ಹಾಗೂ ಊಟದ ಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ತಾಯಿಯ ಮಾರ್ಗದರ್ಶನದಲ್ಲಿ ಹಿಂದವೀ ಸಾಮ್ರಾಜ್ಯದ ಸ್ಥಾಪನೆಗೆ ಅಪ್ರತಿಮ ಹೋರಾಟ ನಡೆಸುವ ಮೂಲಕ ಎಲ್ಲರನ್ನು ಸಮಾನರಾಗಿ ಕಾಣುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ ಹಾಗೂ ಪರಾಕ್ರಮ ದೇಶದ ಇತಿಹಾಸದ ಪುಟದಲ್ಲಿ ಸುವಾರ್ಣಕ್ಷರಗಳಿಂದ ಬರೆಯಲಾಗಿದೆ ಎಂದ ಅವರು, ನಿಮ್ಮೆಲ್ಲರ ಆಶೀರ್ವಾದದಿಂದ ಸೇವೆಗೆ ಅವಕಾಶ ಸಿಕ್ಕಿದ್ದು ಸಮಾಜದ ಅಧ್ಯಕ್ಷರು ಹಾಗೂ ಮುಖಂಡರ ಬೇಡಿಕೆಯಂತೆ ಊಟದ ಭವನ ನಿರ್ಮಾಣಕ್ಕೆ ೧೦ ಲಕ್ಷ ಬಿಡುಗಡೆ ಮಾಡುವುದರ ಜತೆಗೆ ಇಂದು ಭೂಮಿಪೂಜೆ ಸಹ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದರೆ ಇನ್ನೂ ೧೦ ಲಕ್ಷ ಅನುದಾನ ಬಿಡುಗಡೆ ಮಾಡುವದಾಗಿ ಭರವಸೆ ನೀಡಿದ ಶಾಸಕರು ಮರಾಠ ಸಮುದಾಯಕ್ಕೆ ಪ್ರತ್ಯೇಕ ಜಮೀನು ಬೇಕು ಎನ್ನುವ ಬೇಡೆಕೆ ನನೆಗುದಿಗೆ ಬಿದ್ದಿತ್ತು. ಆದರೆ ನಾವು ಮತ್ತೆ ಆಡಳಿತಕ್ಕೆ ಬಂದ ಮೇಲೆ ನಿಗದಿಪಡಿಸಿದ್ದ ಸಂಪೂರ್ಣ ಜಾಗದ ಊತಾರನ್ನು ಸಮಾಜಕ್ಕೆ ನೀಡಲಾಗಿದೆ ಎಂದರು.ಸಮಾಜದ ಅಧ್ಯಕ್ಷ ಶೇಖಪ್ಪ ರಾಮಜಿ, ಪ್ರಾಸ್ತಾವಿಕವಾಗಿ ಶಿವಾಜಿ ಹಾಳಕೇರಿ ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಎಂ.ಎಂ.ಕರಿಪುಟ್ಟಣವರ ಉಪನ್ಯಾಸ ನೀಡಿದರು.ಭಗವತ್ ಧ್ವಜಾರೋಹಣವನ್ನು ಮಾರುತಿ ಗಡ್ಡದ ನೆರವೇರಿಸಿದರೆ, ಬೈಕ್ ರ‍್ಯಾಲಿಗೆ ಕೃಷ್ಣಾಜಿ ಸೂರ್ವವಂಶಿ ಚಾಲನೆ ನೀಡಿದರು.ಬಲರಾಮಗಿರಿ ಶಂಕರಗಿರಿ ಗೋಸಾಮಿಮಠ ಸಾನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯ ಶಿವರಾಜ ಘೊರ್ಪಡೆ, ಯಶ್‌ರಾಜ ಘೊರ್ಪಡೆ, ರಾಜೇಂದ್ರ ಘೋರ್ಪಡೆ, ರೇಣುಕಪ್ಪ ಇಂಗಳೆ, ಸುಭಾಸ ನಿಂಬೋಜಿ, ಅಜಿತಸಿಂಹ ಘೋರ್ಪಡೆ, ಕೃಷ್ಣಾಜಿ ಸೂರ್ಯವಂಶಿ, ಪರಸಪ್ಪ ಪೂಜಾರ, ಪರಶುರಾಮ ಡುಮ್ಮಾಳ, ಯಲಪ್ಪ ಪೂಜಾರ, ಮಾರುತಿ ಅವಧೂತ, ಲಕ್ಷ್ಮಣ ರಾಮಜಿ, ಸಂತು ಸ್ವಾಮಿ, ಪರಶುರಾಮ ಚಿಟಗಿ ಸೇರಿ ಇತರರು ಇದ್ದರು. ಪುರಸಭೆ;ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೩೯೮ನೇ ಜಯಂತ್ಯೋತ್ಸವ ನಿಮಿತ್ತ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಪುಷ್ಪಾರ್ಚನೆ ಸಲ್ಲಿಸಿದರು. ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿದರು. ಶ್ರೀಧರ ಬಿದರಳ್ಳಿ, ದುರಗಪ್ಪ ಮುಧೋಳ, ಸಿದ್ದಪ್ಪ ಚೋಳಿನ, ಗುಲಾಂ ಹುನಗುಂದ ಹಾಗೂ ಸಿ.ಡಿ.ದೊಡ್ಡಮನಿ, ಜಿ.ಎನ್.ಕಾಳೆ,ಶಿವಕುಮಾರ ಇಲಾಳ, ಗುರಪ್ಪ ಪಟ್ಟಣಶೆಟ್ಟಿ ಸೇರಿ ಇತರರು ಇದ್ದರು.ಬಿಜೆಪಿ ಕಾರ್ಯಾಲಯ;ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೩೯೮ನೇ ಜಯಂತ್ಯೋತ್ಸವ ಆಚರಿಸಲಾಯಿತು. ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪೂರ, ರಾಜೇಂದ್ರ ಘೋರ್ಪಡೆ, ಶಿವರಾಜ ಗೌಡರ, ಉಮೇಶ ಚನ್ನುಪಾಟೀಲ, ಬಾಳು ಭೋಸ್ಲೆ ಸೇರಿ ಇತರರು ಇದ್ದರು.