ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾಗಿದೆ. ಶಿಕ್ಷಣ, ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ಎಲ್ಲವೂ ಕೂಡ ಪ್ರಜಾಪ್ರಭುತ್ವದ ಅಡಿ ನಡೆಯುತ್ತಿದೆ. ಹಾಗಾಗಿ ಅತಿದೊಡ್ಡ ಆರ್ಥಿಕತೆ ಮತ್ತು ಅತಿ ಹೆಚ್ಚು ಯುವ ಪಡೆ ಹೊಂದಿರುವ ಭಾರತ ದೇಶದತ್ತ ಇಡೀ ಪ್ರಪಂಚವೇ ತಿರುಗಿ ನೋಡುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇಶ ಅಭಿವೃದ್ಧಿಯಾಗಬೇಕೆಂದರೆ ಅಲ್ಲಿನ ಪ್ರಜಾಪ್ರಭುತ್ವ ಬಲಿಷ್ಠವಾಗಿರಬೇಕು. ಇಡೀ ವಿಶ್ವದಲ್ಲಿಯೇ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯುವ ಸಮುದಾಯದ ಪಾತ್ರ ಬಹುಮುಖ್ಯ ಎಂದು ತಹಸೀಲ್ದಾರ್ ಡಾ.ಅಶೋಕ್ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾಗಿದೆ. ಶಿಕ್ಷಣ, ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ಎಲ್ಲವೂ ಕೂಡ ಪ್ರಜಾಪ್ರಭುತ್ವದ ಅಡಿ ನಡೆಯುತ್ತಿದೆ. ಹಾಗಾಗಿ ಅತಿದೊಡ್ಡ ಆರ್ಥಿಕತೆ ಮತ್ತು ಅತಿ ಹೆಚ್ಚು ಯುವ ಪಡೆ ಹೊಂದಿರುವ ಭಾರತ ದೇಶದತ್ತ ಇಡೀ ಪ್ರಪಂಚವೇ ತಿರುಗಿ ನೋಡುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್ ಮಾತನಾಡಿ, ಶಾಲಾ ಕಾಲೇಜು ಹಂತದ ವಿದ್ಯಾರ್ಥಿಗಳು ವಿದ್ಯಾವಂತ, ಬುದ್ದಿವಂತರಾಗಿ ಸಂಸತ್‌ನಲ್ಲಿ ಸದನಗಳು ಮತ್ತು ಪ್ರಶ್ನೋತ್ತರಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿದುಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯಶಸ್ವಿಗೊಳಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳ ಯಶಸ್ವಿಗಾಗಿ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇಲ್ಲಿ ಆಯ್ಕೆಯಾದ 35 ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಕಳಹಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಕಾಂತಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಎನ್.ಮಂಜುನಾಥ್ ಮತ್ತು ಬಿಇಒ ಕಚೇರಿ ಶಿಕ್ಷಣ ಸಂಯೋಜಕ ಎಂ.ಡಿ.ಶಿವಕುಮಾರ್ ಅವರು ಕಾರ್ಯಕ್ರಮದ ಕಾರ್ಯ ನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ವೀಣಾ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಎಸ್‌ಎಸಿ ಕಾಲೇಜಿನ ಪ್ರಾಧ್ಯಾಪಕರಾದ ಗೋಪಾಲ್, ಶಿವಣ್ಣ, ಹಂಪೇಶ್, ಗಾಯತ್ರಿ ಸೇರಿದಂತೆ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ನಂತರ ವಿಧಾನಸಭಾ ಅಧಿವೇಶನದ ಮಾದರಿಯಲ್ಲಿಯೇ ನಡೆದ ಶಾಲಾ ಕಾಲೇಜು ವಿದ್ಯಾರ್ಥಿಗಳ ಯುವ ಸಂಸತ್ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ ನೆರೆದಿದ್ದ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.