ಹಣದ ಹಿಂದೆ ಓಡುವ ಧಾವಂತದಲ್ಲಿ ಯುವಜನ ಮರೆತ್ತಿದ್ದಾರೆ ಸಂಸ್ಕೃತಿ

| Published : May 14 2024, 01:05 AM IST

ಹಣದ ಹಿಂದೆ ಓಡುವ ಧಾವಂತದಲ್ಲಿ ಯುವಜನ ಮರೆತ್ತಿದ್ದಾರೆ ಸಂಸ್ಕೃತಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಇಂದಿನ ಯುವ ಜನರು ಹಣ ಮಾಡುವ ಧಾವಂತದಲ್ಲಿ ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ವಿಜಯರಂಗ ಕೋಟೆತೋಟ ತಿಳಿಸಿದರು.

ಕುದುರೆಗುಂಡಿಯಲ್ಲಿ ರಾಜ್ಯಮಟ್ಟದ ಹೆಬ್ಬಾರ ಕ್ರಿಕೆಟ್ ಲೀಗ್ ಪಂದ್ಯಾವಳಿ ಸಮಾರೋಪದಲ್ಲಿ ವಿಜಯರಂಗ ಕೋಟೆ ತೋಟ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಇಂದಿನ ಯುವ ಜನರು ಹಣ ಮಾಡುವ ಧಾವಂತದಲ್ಲಿ ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ವಿಜಯರಂಗ ಕೋಟೆತೋಟ ತಿಳಿಸಿದರು.

ಭಾನುವಾರ ಸಂಜೆ ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾ ಹಾಗೂ ತಾಲೂಕು ಯುವ ಹೆಬ್ಬಾರ ಬಳಗ ಏರ್ಪಡಿಸಿದ್ದ 2 ದಿನಗಳ ರಾಜ್ಯ ಮಟ್ಟದ ಹೆಬ್ಬಾರ ಕ್ರಿಕೆಟ್‌ ಲೀಗ್‌ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸನಾತನ ಸಂಸ್ಕೃತಿಯನ್ನು ಇಂದಿನ ಶಿಕ್ಷಣದಲ್ಲಿ ಕಲಿಸುತ್ತಿಲ್ಲ. ಶಿವಮೊಗ್ಗ ತಾಲೂಕು ಹೆಬ್ಬಾರ ಘಟಕದ ಯುವ ಬಳಗದ ನೇತೃತ್ವದಲ್ಲಿ ಸಮಾಜದ ಯವಜನರಿಗೆ ಮೇ 25 ರ ಶನಿವಾರ ಸನಾತನ ಸಂಸ್ಕೃತಿ ಕಲಿಸುವ ಶಿಬಿರ ಏರ್ಪಡಿಸ ಲಾಗಿದೆ. ಎಲ್ಲಾ ತಾಲೂಕು ಘಟಕದ ಯುವಜನರು ಈ ಶಿಬಿರದಲ್ಲಿ ಭಾಗವಹಿಸಬೇಕು. ಕ್ರಿಕೆಟ್‌ ಪಂದ್ಯಾವಳಿ ಏರ್ಪಡಿಸಿ ದಾಗ ಹೆಚ್ಚು ಯುವಕರು ಭಾಗವಹಿಸುತ್ತಿದ್ದಾರೆ. ಆದ್ದರಿಂದ ಕ್ರಿಕೆಟ್‌ ಆಟಗಾರರ ವಾಟ್ಸಾಪ್‌ ಗ್ರೂಪ್‌ ರಚಿಸುವಂತೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕೊಪ್ಪ ಯಸ್ಕಾನ್‌ ಸಂಸ್ಥೆ ಅಧ್ಯಕ್ಷ ವೈ.ಎಸ್‌.ಸುಬ್ರಮಣ್ಯ ಮಾತನಾಡಿ, ನಮ್ಮ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾವನ್ನು ಹೆಬ್ಬಿಗೆ ಚಂದ್ರಶೇಖರಯ್ಯ ಹುಟ್ಟು ಹಾಕಿದ್ದು ಈಗ ಸಂಘಟನೆ ದೊಡ್ಡದಾಗಿ ಬೆಳೆದಿದೆ. ನಮ್ಮ ಸಮಾಜದಿಂದ ಶಿವಮೊಗ್ಗದಲ್ಲಿ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ಪ್ರಾರಂಭವಾಗಿದೆ. ಉತ್ತಮವಾಗಿ ಬೆಳೆವಣಿಗೆ ಹೊಂದುತ್ತಿದೆ. ಯುವ ಬಳಗ ಪ್ರಾರಂಭವಾಗಿದೆ. ಪ್ರತಿವರ್ಷ ಶೃಂಗೇರಿ ಮಠದಲ್ಲಿ ಗುರು ದರ್ಶನ ಕಾರ್ಯಕ್ರಮ ನಡೆಯುತ್ತಿದೆ. ಸಮಾಜದಲ್ಲಿ ಪರಸ್ಪರ ಪರಿಚಯ ಬೆಳೆದು ಸಂಬಂಧಗಳು ವೃದ್ಧಿ ಯಾಗುತ್ತಿದೆ. ಬೆಂಗಳೂರಿನ ಘಟಕದವರು ಮಲೆನಾಡಿನ ಹೆಬ್ಬಾರ ಸಮಾಜದ ಸದಸ್ಯರನ್ನು ಕರೆಸಿ ಅಲ್ಲಿ ಕಾರ್ಯಕ್ರಮ ನಡೆಸಬಹುದು ಎಂದು ಸಲಹೆ ನೀಡಿದರು.

ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಚ್‌.ಎಸ್‌.ಶಿವಶಂಕರ್‌ ಗೆದ್ದ ಕ್ರಿಕೆಟ್‌ ತಂಡ ಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿ, ಈಗಾಗಲೇ ಹೆಬ್ಬಾರ ಸಮಾಜದ ಯುವಕರಿಗೆ ಕ್ರಿಕೆಟ್‌ ಪಂದ್ಯಾವಳಿ ನಡೆಸುತ್ತಿದ್ದೀರಿ. ಇದೇ ರೀತಿ ಸಮಾಜದ ಮಹಿಳೆಯರಿಗೂ ವಿವಿಧ ಆಟೋಟ ಹಾಗೂ ಇತರೆ ಸ್ಪರ್ಧೆಗಳನ್ನು ಏರ್ಪಡಿಸುವಂತೆ ಸಲಹೆ ನೀಡಿದರು.

ಶಿವಮೊಗದಲ್ಲಿ ನಡೆಯಲಿರುವ ಸಂಸ್ಕೃತಿ ಶಿಬಿರಕ್ಕೆ ಪ್ರತಿ ತಾಲೂಕು ಘಟಕದಿಂದ 16 ರಿಂದ 25 ವರ್ಷದ ಒಳಗಿನ 5 ಜನ ಯುವಕರನ್ನು ಕಳಿಸಬೇಕು. ಪೋಷಕರು ತಮ್ಮ ಮಕ್ಕಳನ್ನು ಕಳಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಮಲೆನಾಡು ಹೆಬ್ಬಾರ ಸಮಾಜದ ವಿಪ್ರದ್ವನಿ ಸಂಪಾದಕ ಕೀಳಂಬಿ ರಾಜೇಶ್‌ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ದೊಡ್ಡದಾಗಿದೆ. ಯುವಕರು ಸಮಾಜದ ಎಲ್ಲಾ ಆಯಾಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ರಾಜ್ಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿ ಏರ್ಪಡಿಸಿರುವುದರಿಂದ ಸಮಾಜದ ಸಂಘಟನೆಗೆ ಅನುಕೂಲವಾಗಿದೆ ಎಂದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೊಸನಗರ ಎ ತಂಡ ಪ್ರಥಮ ಬಹುಮಾನ ಪಡೆಯಿತು. ಶೃಂಗೇರಿ ತುಂಗಾ ಭದ್ರ ತಂಡ ದ್ವಿತೀಯ ಸ್ಥಾನ ಪಡೆಯಿತು. ಗೆದ್ದ ತಂಡಗಳಿಗೆ ನಗದು ಹಾಗೂ ಆಕರ್ಷಕ ಶೀಲ್ಡ್ ನೀಡಲಾಯಿತು. ಕ್ರಿಕೆಟ್‌ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳ 13 ತಂಡಗಳು ಭಾಗವಹಿಸಿದ್ದವು.

ಸಭೆ ಅಧ್ಯಕ್ಷತೆಯನ್ನು ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ನರಸಿಂಹರಾಜಪುರ ತಾಲೂಕು ಘಟಕದ ಅಧ್ಯಕ್ಷ ಸೇತುವೆ ಮನೆ ಸುಬ್ರಮಣ್ಯ ವಹಿಸಿದ್ದರು. ಅತಿಥಿಗಳಾಗಿ ಶಿವಮೊಗ್ಗ ಘಟಕದ ಉಪಾಧ್ಯಕ್ಷ ಶಂಕರ ನಾರಾಯಣ್‌, ನರಸಿಂಹರಾಜ ಪುರ ತಾಲೂಕು ಘಟಕದ ಕಾರ್ಯದರ್ಶಿ ಕೆ.ವಿ.ಪ್ರಭಾಕರ ಉಪಸ್ಥಿತರಿದ್ದರು. ಹೊಸನಗರದ ಗಿರೀಶ್‌, ಶೃಂಗೇರಿ ಸುಭಾಷ್ ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಎ.ವಿ.ಪ್ರಶಾಂತ್ ಎ.ಎಸ್‌.ವೆಂಕಟರಮಣ , ಕೆ.ಆರ್.ಶಿವಕುಮಾರ್ ಇದ್ದರು.