ಯುವ ಸಮೂಹಕ್ಕೆ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು : ಮೋಹನ್

| Published : Aug 13 2025, 12:30 AM IST

ಸಾರಾಂಶ

ಚಿಕ್ಕಮಗಳೂರು, ಯುವ ಸಮೂಹದಲ್ಲಿ ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಅದಕ್ಕಾಗಿ ಯುವ ಪೀಳಿಗೆಯಲ್ಲಿ ಪುಸ್ತಕ ಪ್ರೇಮ ಬೆಳೆಸುವ ಚಟುವಟಿಕೆಗಳಿಗೆ ಪ್ರೇರೇಪಿಸಬೇಕು ಎಂದು ಸಾಹಿತಿ ಜಿ.ಎನ್.ಮೋಹನ್ ಹೇಳಿದರು.

ಕೈಮರ ಸಮೀಪದ ದೇವಿಗಿರಿ ಹೋಂ ಸ್ಟೇಯಲ್ಲಿ ದೇವಿಗಿರಿ ಸಂಭ್ರಮ, ದೇವಿಗಿರಿ ಫೌಂಡೇಷನ್ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಯುವ ಸಮೂಹದಲ್ಲಿ ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಅದಕ್ಕಾಗಿ ಯುವ ಪೀಳಿಗೆಯಲ್ಲಿ ಪುಸ್ತಕ ಪ್ರೇಮ ಬೆಳೆಸುವ ಚಟುವಟಿಕೆಗಳಿಗೆ ಪ್ರೇರೇಪಿಸಬೇಕು ಎಂದು ಸಾಹಿತಿ ಜಿ.ಎನ್.ಮೋಹನ್ ಹೇಳಿದರು.ತಾಲೂಕಿನ ಕೈಮರ ಸಮೀಪದ ದೇವಿಗಿರಿ ಹೋಂ ಸ್ಟೇಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಿಗಿರಿ ಸಂಭ್ರಮ ಹಾಗೂ ದೇವಿಗಿರಿ ಫೌಂಡೇಷನ್ ಉದ್ಘಾಟಿಸಿ ಮಾತನಾಡಿದರು. ಹೆಸರಾಂತ ಕವಿ ತೇಜಸ್ವಿಯವರ ತವರೂರಾದ ಚಿಕ್ಕಮಗಳೂರು ಜಿಲ್ಲೆ ಸಾಹಿತ್ಯಾತ್ಮಕ ಚಟುವಟಿಕೆಯಲ್ಲಿ ಜನ ಮನ್ನಣೆಗಳಿಸಿದೆ. ತೇಜಸ್ವಿ ಕೃತಿಗಳು, ಕಥೆ, ಕಾದಂಬರಿಗಳು ಕವಿಗಳ ಹೃದಯದಲ್ಲಿ ನೆಲೆಯೂರಿದೆ. ತಾವು ಸೇರಿದಂತೆ ಬಹುತೇಕರಿಗೆ ತೇಜಸ್ವಿಯವರ ಜೊತೆಗಿನ ಒಡನಾಟ ಕವಿಲೋಕವನ್ನು ಅಪ್ಪಿದಂತೆ ಭಾಸವಾಗಿದೆ ಎಂದರು.

ಪ್ರಸ್ತುತ ಜಿಲ್ಲೆ ಕಾಫಿಯ ತವರೂರು. ವಿಶೇಷ ಹಾಗೂ ವಿಶಿಷ್ಟವಾಗಿ ಸಿಗುವ ಚಿಕ್ಕಮಗಳೂರಿನ ಕಾಫಿ ಅದ್ಬುತವಾಗಿದೆ. ಒಮ್ಮೆ ಸೇವಿಸಿದರೆ ನಿರಂತರವಾಗಿ ಸೇವಿಸಬೇಕು ಎನಿಸುತ್ತದೆ. ಜೊತೆಗೆ ತೇಜಸ್ವಿ ಜೀವನದ ನಂಟು ನಮ್ಮಲ್ಲಿರುವ ಕಾರಣ ಮಲೆನಾಡು ಸಾಹಿತ್ಯ ಕ್ಷೇತ್ರದಲ್ಲೂ ವಿಶೇಷತನ ಹೊಂದಿದೆ ಎಂದು ಹೇಳಿದರು.ಹಿರಿಯ ಚಿತ್ರ ಕಲಾವಿದ ರಾ.ಸೂರಿ ಮಾತನಾಡಿ, ಬರಡು ಭೂಮಿಯನ್ನು ಸ್ವಚ್ಚಂದ ಪರಿಸರವನ್ನಾಗಿ ಮಾರ್ಪಾಡಿಸಿ ಯುವ ಕಲಾವಿದರು, ಸಾಹಿತ್ಯಾಭಿಮಾನಿ ಹಾಗೂ ಬರಹಗಾರರಿಗೆ ವೇದಿಕೆ ಸೃಷ್ಟಿಸಿಕೊಟ್ಟಿರುವ ದೇವಿಗಿರಿ ಫೌಂಡೇಷನ್‌ಗೆ ಕೃತಜ್ಞತೆಗಳು. ಮುಂದಿನ ದಿನಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಪ್ರೇರೇಪಿಸುವ ಕಾರ್ಯ ರೂಪಿಸಲಿ ಎಂದು ಆಶಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ನಾರಾಯಣಪುರ ಮಾತನಾಡಿ, ಹಿಂದಿನ ಕಾಫಿ ತೋಟ ನೈಸಗಿಕವಾಗಿತ್ತು. ತಣ್ಣನೆ ವಾತಾವರಣ ನೈಜವಾಗಿ ಸಿಗುತ್ತಿತ್ತು. ಇದೀಗ ಸಿಲ್ವರ್ ಮರಗಳಿಂದ ಪ್ರಕೃತಿ ನೈಸರ್ಗಿಕ ಸಂಪತ್ತು ಕ್ಷೀಣಿಸಿದೆ. ಅಲ್ಲದೇ ಕಾಫಿ ತೋಟದಲ್ಲಿ ತಾಪಮಾನ ಏರಿದೆ. ಹೀಗಾಗಿ ಪರಿಸರಕ್ಕೆ ಪೂರಕವಾದ ಕೃಷಿ ಚಟುವಟಿಕೆ ನಡೆಸಬೇಕಿದೆ ಎಂದರು.ಚಿಪ್‌ಸ್ಕೇಟ್ ಸೆಕ್ಯೂರಿಟಿ ಸಿಸ್ಟಮ್ ಮಾಲೀಕ ಕಿಶನ್‌ಗೌಡ ಮಾತನಾಡಿ, ರಾಷ್ಟ್ರದಲ್ಲೇ ಶುದ್ಧಗಾಳಿ ದೊರಕುವ ಜಿಲ್ಲೆ ನಮ್ಮದು. ನಾವೆಲ್ಲರೂ ಪ್ರಕೃತಿ ಸಂರಕ್ಷಿಸುವ ಜೊತೆಗೆ ಇಂದಿನ ಯುವಕರಿಗೆ ಪೂರ್ವಿಕರ ಆಚಾರ- ವಿಚಾರ ಹಾಗೂ ಪರಂಪರೆ ಉಳಿಸುವ ಜೀವನಶೈಲಿ ಅಳವಡಿಸಲು ಗಟ್ಟಿಯಾಗಿ ನಿಲ್ಲಬೇಕಿದೆ ಎಂದರು.ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ವ್ಯಂಗ್ಯ ಚಿತ್ರಕಾರ ಗುಜ್ಜಾರಪ್ಪ, ಚಿತ್ರ ನಿರ್ದೇಶಕ ಎಂ.ಜಿ.ವಿಜಯ್‌ಕುಮಾರ್, ಎಸ್ಟೇಟ್ ಮಾಲೀಕರಾದ ಡಿ.ಸಿ.ರಮಾದೇವಿ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಶಾಂತಿನಿ ಕೇತನ ಮಹಾವಿದ್ಯಾಲಯ ಪ್ರಾಚಾರ್ಯ ವಿಶ್ವ ಕರ್ಮ ಆಚಾರ್ಯ, ರಂಗಭೂಮಿ ಕಲಾವಿದ ಉಮೇಶ್ ಬೀರೂರು ಉಪಸ್ಥಿತರಿದ್ದರು. 12 ಕೆಸಿಕೆಎಂ 2ಚಿಕ್ಕಮಗಳೂರು ತಾಲೂಕಿನ ಕೈಮರ ಸಮೀಪದ ದೇವಿಗಿರಿ ಹೋಂಸ್ಟೇನಲ್ಲಿಲ ನಡೆದ ಕಾರ್ಯಕ್ರಮದಲ್ಲಿ ದೇವಿಗಿರಿ ಸಂಭ್ರಮ ಹಾಗೂ ದೇವಿಗಿರಿ ಫೌಂಡೇಷನ್ ಅನ್ನು ಸಾಹಿತಿ ಜಿ.ಎನ್‌. ಮೋಹನ್‌ ಉದ್ಘಾಟಿಸಿದರು.