ಸಮಾಜದ ದಿಕ್ಸೂಚಿಯಾಗಿ ಕಾರ್ಯಮಾಡುತ್ತಿರುವ ರಂಗಭೂಮಿ

| Published : Feb 07 2025, 12:31 AM IST

ಸಾರಾಂಶ

ಎಳೆಯರಿಂದ ವೃದ್ಧರವರೆಗೂ ಅವರವರಲ್ಲಿ ಇರುವಂತ ವಿಭಿನ್ನ ಭಾವನೆಗಳನ್ನು ಬೆಳೆಸಿ ಉಳಿಸುತ್ತಿರುವ ರಂಗಭೂಮಿ ಕಲೆಯು ಸಹ ಒಂದು ಉತ್ತಮ ಮಾಧ್ಯಮವಾಗಿ ಪರಿಣಮಿಸುತ್ತಿದೆ ಎಂದು ರಂಗಭೂಮಿ ಕಲಾವಿದೆ ಸನ್ಮತಿ ಅಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಎಳೆಯರಿಂದ ವೃದ್ಧರವರೆಗೂ ಅವರವರಲ್ಲಿ ಇರುವಂತ ವಿಭಿನ್ನ ಭಾವನೆಗಳನ್ನು ಬೆಳೆಸಿ ಉಳಿಸುತ್ತಿರುವ ರಂಗಭೂಮಿ ಕಲೆಯು ಸಹ ಒಂದು ಉತ್ತಮ ಮಾಧ್ಯಮವಾಗಿ ಪರಿಣಮಿಸುತ್ತಿದೆ ಎಂದು ರಂಗಭೂಮಿ ಕಲಾವಿದೆ ಸನ್ಮತಿ ಅಂಗಡಿ ಹೇಳಿದರು.

ಪಟ್ಟಣದ ದೇಸಾಯಿ ಕೋಟೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ರಂಗ ಆರಾಧನಾ ಸಂಸ್ಕೃತಿಕ ಸಂಘಟನೆ ಸವದತ್ತಿಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ೨೮ನೇ ಪರಸಗಡ ನಾಟಕೋತ್ಸವ-೨೦೨೫ರ ಕಾರ್ಯಕ್ರಮದಲ್ಲಿ ರಂಗ ಆರಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಂಗಭೂಮಿಯ ನವರಸಗಳೊಂದಿಗೆ ಸದಾ ಹೊಸತನವನ್ನು ತೆರೆದಿಡುತ್ತ ಸಮಾಜದ ದಿಕ್ಸೂಚಿಯಾಗಿ ಕಾರ್ಯಮಾಡುತ್ತಿದ್ದು, ಈ ರಂಗಭೂಮಿಯಲ್ಲಿ ಕಲಾವಿದೆಯಾಗಿ ನನಗೆ ಅವಕಾಶ ದೊರಕಿರುವುದು ಪುಣ್ಯ ಎಂದರು. ಮಕ್ಕಳಿಗೆ ಒಂದು ಕೊಠಡಿಯಲ್ಲಿ ಪಾಠ ಮಾಡುವುದಕ್ಕಿಂತ ಆ ಪಾಠವನ್ನು ರಂಗ ಚಟುವಟಿಕೆಗಳ ಮೂಲಕ ಪ್ರಸ್ತುತಪಡಿಸುವುದರಿಂದ ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದರು.ಜನಪದ ಸಾಹಿತ್ಯ ಉಪನ್ಯಾಸಕಿ ಲಕ್ಷ್ಮೀ ಆರಿಬೆಂಚಿ ಮಾತನಾಡಿ, ಮಹಿಳಾ ಸ್ವಾತಂತ್ರ್ಯ ಹೋರಾಟದ ಜೀವನ ಬಿಂಬಿಸುವ ನಾಟಕಗಳು ಮುಂದಿನ ದಿನಮಾನಗಳಲ್ಲಿ ಈ ವೇದಿಕೆ ಮೇಲೆ ನೆರವೇರಲಿ ಎಂದರು.ವಿಷಯಾ ಜೇವೂರ ರಂಗಚಂದ್ರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ರಂಗಭೂಮಿ ನನ್ನ ಉಸಿರಾಗಿದ್ದು, ರಂಗಭೂಮಿ ಮಾನವೀಯ ಸಂಬಂಧಗಳನ್ನು ಬೆಸೆಯುವ ಉತ್ತಮ ಕೊಂಡಿಯಾಗಿದೆ. ರಂಗಭೂಮಿ ಉಳಿಯಬೇಕಿರುವುದರಿಂದ ಮಹಿಳೆಯರು ರಂಗಭೂಮಿಯಲ್ಲಿ ಭಾಗವಹಿಸಲು ಕುಟುಂಬದವರು ಸಹಕಾರ ನೀಡಬೇಕು ಎಂದು ತಿಳಿಸಿದರು.ಪ್ರತಿವರ್ಷ ರಂಗ ಆರಾಧನಾ ಸಂಸ್ಕೃತಿಕ ಸಂಘಟನೆಯಿಂದ ನಡೆಯುವ ಪರಸಗಡ ನಾಟಕೋತ್ಸವದಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡುತ್ತಿದ್ದು, ಈ ಸಲ ಮಹಿಳಾ ಕಲಾವಿದರನ್ನು ಗುರುತಿಸಿ ಸಂಸ್ಥೆಯಿಂದ ಮೂರು ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಗತಿಪರ ರೈತ ರುದ್ರಪ್ಪ ರಾಜಪ್ಪ ಶಿಂಧೆ ಅವರು ಕೊಡ ಮಾಡುವ ರಂಗ ಆರಾಧಕ ಪ್ರಶಸ್ತಿಗೆ ಧಾರವಾಡದ ಸನ್ಮತಿ ಅಂಗಡಿ ಹಾಗೂ ಹಿರಿಯ ನ್ಯಾಯವಾದಿ ದಿ.ವಿ.ಆರ್.ಕಾರದಗಿಯವರ ಇವರ ಸ್ಮರಣಾರ್ಥ ಕೊಡ ಮಾಡುವ ರಂಗ ಆರಾಧಕ ಪ್ರಶಸ್ತಿಗೆ ಆರತಿ ದೇವಶಿಖಾಮಣಿ ಮತ್ತು ರಂಗ ಆರಾಧನಾ ಸಂಸ್ಥೆಯ ಹಿರಿಯ ಪೋಷಕರಾದ ದಿ.ಚಂದ್ರಕಾಂತ ಸುಳ್ಳದರವರ ಸ್ಮರಣಾರ್ಥ ಕೊಡ ಮಾಡುವ ರಂಗ ಚಂದ್ರ ಪ್ರಶಸ್ತಿಗೆ ವಿಷಯ ಜೇವೂರವರಿಗೆ ನೀಡಿ ಗೌರವಿಸಲಾಯಿತು.ಸುಮಿತ್ರಾ ಕಾರದಗಿ, ಶೋಭಾ ಸುಳ್ಳದ, ಕಮಲಾತಾಯಿ ಶಿಂಧೆ, ಸ್ವಾತಿ ಸಿದ್ದಯ್ಯ ವಡಿಯರ, ಸುನಿತಾ ದ್ಯಾಮನಗೌಡರ, ಲಕ್ಷ್ಮೀ ಆರಿಬೆಂಚಿ, ಜಯಶ್ರಿ ಬೋನಗೇರಿ, ಪ್ರಭಾವತಿ ಧನ್ಯಾಳ ಉಪಸ್ಥಿತರಿದ್ದರು. ಪ್ರತಿಭಾ ವಕ್ಕುಂದ ನಿರೂಪಿಸಿ, ವಂದಿಸಿದರು.