ರಂಗಭೂಮಿ ಚಟುವಟಿಕೆ ಮುಂದಿನ ಪೀಳಿಗೆಗೂ ತಲುಪಬೇಕು

| Published : Feb 06 2025, 11:46 PM IST

ರಂಗಭೂಮಿ ಚಟುವಟಿಕೆ ಮುಂದಿನ ಪೀಳಿಗೆಗೂ ತಲುಪಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ರಂಗಭೂಮಿ ಚಟುವಟಿಕೆಗಳು ನಿಂತ ನೀರಾಗದೇ ಪೀಳಿಗೆಯಿಂದ ಪೀಳಿಗೆಗೆ ಸಾಗಬೇಕು. ಆಗ ಮಾತ್ರ ಉಳಿದು ಬೆಳಗಲು ಸಾಧ್ಯ. ಈ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಟಾರಗಳು ನಡೆಯಲು ಸಹಕಾರಿ ಆಗುತ್ತದೆ ಎಂದು ಹಿರಿಯ ರಂಗಕರ್ಮಿ ಸಿದ್ದರಾಜು ಹೇಳಿದ್ದಾರೆ.

- ಹೊನ್ನಾಳಿ ಕನಕದಾಸ ರಂಗಮಂದಿರದಲ್ಲಿ ನಾಟಕೋತ್ಸವಕ್ಕೆ ಚಾಲನೆ ನೀಡಿ ರಂಗಕರ್ಮಿ ಸಿದ್ದರಾಜು- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಂಗಭೂಮಿ ಚಟುವಟಿಕೆಗಳು ನಿಂತ ನೀರಾಗದೇ ಪೀಳಿಗೆಯಿಂದ ಪೀಳಿಗೆಗೆ ಸಾಗಬೇಕು. ಆಗ ಮಾತ್ರ ಉಳಿದು ಬೆಳಗಲು ಸಾಧ್ಯ. ಈ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಟಾರಗಳು ನಡೆಯಲು ಸಹಕಾರಿ ಆಗುತ್ತದೆ ಎಂದು ಹಿರಿಯ ರಂಗಕರ್ಮಿ ಸಿದ್ದರಾಜು ಹೇಳಿದರು.

ಪಟ್ಟಣದ ಅಭಿವ್ಯಕ್ತಿ ಕಲಾ ತಂಡ ಹೊನ್ನಾಳಿಯ 45ನೇ ವರ್ಷಾಚರಣೆ ಅಂಗವಾಗಿ ಯುವಶಕ್ತಿ ಒಕ್ಕೂಟ, ಶ್ರೀ ಚನ್ನಪ್ಪ ಸ್ವಾಮಿ ಜನಕಲ್ಯಾಣ ಸೇವಾ ಟ್ರಸ್ಟ್ ಸಹಯೋಗದಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿ ಧಾತ್ರಿ ರಂಗಸಂಸ್ಥೆ ಕಲಾವಿದರಿಂದ ಪಟ್ಟಣದ ಕನಕದಾಸ ರಂಗಮಂದಿರದಲ್ಲಿ 3 ದಿನಗಳ ನಾಟಕೋತ್ಸವದ ಮೊದಲನೇ ದಿನ ಮಂಗಳವಾರ ರಾತ್ರಿ ಕಾರ್ಯಕ್ರಮಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರಂಗಭೂಮಿ, ಒಂದು ಕಾಲದಲ್ಲಿ ಅತ್ಯಂತ ಪರಿಣಾಕಾರಿಯಾಗಿತ್ತು. ಸಾಮಾಜಿಕ ಬದಲಾವಣೆ ತರುವಂತಹ, ಜನರಿಗೆ ಮನೋರಂಜನೆ ನೀಡುವ ಕಲಾ ಪ್ರಕಾರಗಳಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸಿನಿಮಾ, ಟಿ.ವಿ., ಮೊಬೈಲ್ ಹಾವಳಿ ಹಾಗೂ ಆಧುನಿಕ ಜೀವನಶೈಲಿ ಪ್ರಭಾವಗಳ ಕಾರಣ ರಂಗಭೂಮಿ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಹಾಗಿದ್ದರೂ, ಸಾಣೆಹಳ್ಳಿಯ ಶಿವಸಂಚಾರ, ಹೆಗ್ಗೋಡು ನೀನಾಸಂ, ಧಾತ್ರಿ ರಂಗ ಸಂಸ್ಥೆ, ರಂಗಾಯಣಗಳಂತಹ ಕೆಲವಾರು ಸಂಸ್ಥೆಗಳ ಮೂಲಕ ರಂಗಭೂಮಿ ಚಟುವಟಿಕೆಗಳು ಮುಂದುವರಿಯುತ್ತಿವೆ ಎಂದು ಶ್ಲಾಘಿಸಿದರು.

ಹೊನ್ನಾ‍ಳಿ ಹಿರಿಯ ರಂಗಕರ್ಮಿ ಪ್ರೇಂಕುಮಾರ ಬಂಡಿಗಡಿ ಮಾತನಾಡಿ, 45 ವರ್ಷಗಳಿಂದರೂ ಅಭಿವ್ಯಕ್ತಿ ಕಲಾ ತಂಡ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಯುವಶಕ್ತಿ ಒಕ್ಕೂಟ ಪದಾಧಿಕಾರಿಗಳು ಹಾಗೂ ಸ್ಥಳೀಯ ಕಲಾಭಿಮಾನೆಗಳ ಸಹಕಾರ ಕಾರಣವಾಗಿದೆ. ಇಂದಿಗೂ ನಾಟಕ, ರಂಗಭೂಮಿ ಕಲಾವಿದರು ಇದ್ದು, ನಾಟಕೋತ್ಸವಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಂದಿನ ಯುವಪೀಳಿಗೆಯಲ್ಲಿ ಇಂತಹ ಕಲೆಗಳ ಬಗ್ಗೆ ಆಸಕ್ತಿ ಬೆಳಸಬೇಕಾಗಿದೆ. ರಂಗಭೂಮಿ ಕಲೆ ಒಂದು ಜೀವಂತ ಕಲೆಯಾಗಿದೆ. ಆಸಕ್ತಿ ಇಲ್ಲದ ಸಾವಿರ ಜನಕ್ಕಿಂತ ಆಸಕ್ತಿ ಇರುವ ನೂರು ಜನ ಪ್ರೇಕ್ಷರಿದ್ದರೆ ಸಾಕು, ರಂಗಭೂಮಿ ಬೆಳೆಯುತ್ತದೆ. ಹೊನ್ನಾಳಿ ರಂಗಭೂಮಿ ಎಂದಾಕ್ಷಣ ದಿವಂಗತ ಚಿದಾನಂದ ಮೂರ್ತಿ ಅವರನ್ನು ಸದಾ ಸ್ಮರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸತ್ಯನಾರಾಯಣ ರಾವ್, ಪಟ್ಟಣಶೆಟ್ಟಿ ಪರಮೇಶ್, ಸತ್ತಿಗೆ ಲೋಕೇಶ್, ಮಲ್ಲಿಕಾರ್ಜುನ ಸ್ವಾಮಿ ಮುಂತಾದವರು ಇದ್ದರು. ಟೈಲರ್ ಬಸವರಾಜ್, ಕತ್ತಿಗೆ ನಾಗರಾಜ್, ಬೆನಕಯ್ಯ ಯುವಶಕ್ತಿ ಒಕ್ಕೂಟದ ಚಿನ್ನಪ್ಪ ಮೇದಾರ, ಕೆ.ವಿ.ಚನ್ನಪ್ಪ, ಬಿ.ಎಲ್.ಕುಮಾರ ಸ್ವಾಮಿ, ಹೊಸಕೇರಿ ಸುರೇಶ್ ಮುಂತಾದವರು ಇದ್ದರು. ಶ್ರೀಕೃಷ್ಣ ಸಂಧಾನ ನಗೆ ನಾಟಕ ಪ್ರದರ್ಶನ ನಡೆಯಿತು.

- - - -5ಎಚ್ಎಎಲ್.ಐ1.ಜೆಪಿಜಿ:

ಹೊನ್ನಾಳಿಯಲ್ಲಿ ಹಿರಿಯ ರಂಗಕರ್ಮಿ ಸಿದ್ದರಾಜು ಮಂಗಳವಾರ ರಾತ್ರಿ ಡೋಲು ಬಾರಿಸುವ ಮೂಲಕ ನಾಟಕೋತ್ಸವಕ್ಕೆ ಚಾಲನೆ ನೀಡಿದರು.