ಸಾರಾಂಶ
ಪೌರಾಣಿಕ ನಾಟಕಗಳನ್ನು ಕಲಿಯುವ ಆಸಕ್ತಿಯನ್ನು ಒಮ್ಮೆ ಬೆಳೆಸಿಕೊಂಡರೆ ಸಾಕು. ಅದು ವ್ಯಕ್ತಿಯನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಹಕಾರಿಯಾಗುತ್ತದೆ. ನಾಟಕದಲ್ಲಿ ಬರುವ ಸನ್ನಿವೇಶಗಳು ಮನುಷ್ಯನನ್ನು ಬದಲಿಸುವ ಗುಣವನ್ನು ಹೊಂದಿವೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಲಾವಿದರ ಹಗಲಿರುಳಿನ ಶ್ರಮದಿಂದಾಗಿ ರಂಗ ಕಲೆ ಜೀವಂತಾಗಿದೆ ಎಂದು ಸಮಾಜ ಸೇವಕ, ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಹೇಳಿದರು. ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಡಾ.ರಾಜ್‌ಕುಮಾರ್ ಕಲಾಸಂಘದವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ 10 ದಿನಗಳ ಪೌರಾಣಿಕ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಪೌರಾಣಿಕ ನಾಟಕಗಳನ್ನು ಕಲಿಯುವ ಆಸಕ್ತಿಯನ್ನು ಒಮ್ಮೆ ಬೆಳೆಸಿಕೊಂಡರೆ ಸಾಕು. ಅದು ವ್ಯಕ್ತಿಯನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಹಕಾರಿಯಾಗುತ್ತದೆ. ನಾಟಕದಲ್ಲಿ ಬರುವ ಸನ್ನಿವೇಶಗಳು ಮನುಷ್ಯನನ್ನು ಬದಲಿಸುವ ಗುಣವನ್ನು ಹೊಂದಿವೆ ಎಂದರು.ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ಇಂದಿನ ಟಿವಿ ಮಾಧ್ಯಮಗಳಿಂದ ಪೌರಾಣಿಕ ನಾಟಕಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವ ನಡುವೆಯೂ ಹಗಲಿನಲ್ಲಿಯೇ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುವ ಧೈರ್ಯವನ್ನು ಆಯೋಜಕರು ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಡದಹಳ್ಳಿ ಪಂಚಭೂತೇಶ್ವರ ಶ್ರೀ ಮಠದ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ಪೌರಾಣಿಕ ನಾಟಕಗಳನ್ನು ನೋಡುವುದು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಭಕ್ತಿ ಮತ್ತು ಭಾವನೆಯ ಸಂಕೇತವಾಗಿವೆ. ಪೌರಾಣಿಕ ನಾಟಕಗಳು ಸ್ವಾಸ್ಥ್ಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತವೆ ಎಂದರು.ವೇದಿಕೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್, ಮಾಜಿ ಕಾರ್ಯದರ್ಶಿ ಬಲ್ಲೇನಹಳ್ಳಿ ಮಂಜುನಾಥ್, ರಂಗ ಕಲಾವಿದರಾದ ಶಿಕ್ಷಕ ಎಲ್.ಎಸ್. ಧರ್ಮಪ್ಪ, ಹರಿಹರಪುರ ಮಹದೇವೇಗೌಡ, ಜೈ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಕೆ.ಎನ್.ತಮ್ಮಯ್ಯಣ್ಣ, ಡಾ.ರಾಜಕುಮಾರ್ ಕಲಾ ಸಂಘದ ಅಧ್ಯಕ್ಷ ದೇವರಾಜು, ನಾಟಕೋತ್ಸವದ ಸಂಚಾಲಕ ಹೊಸಹೊಳಲು ರಘು, ಅಂಬೇಡ್ಕರ್ ಕಲಾ ಸಂಘದ ಅಧ್ಯಕ್ಷ ಸುನಿಲ್ ಕುಮಾರ್, ಹಿರಿಯ ಕಲಾವಿದ ಚಟ್ಟೇನಹಳ್ಳಿ ನಾಗರಾಜು, ಡ್ರಾಮಾ ಮಾಸ್ಟರ್ ವಿಷಕಂಠ, ಗಾಯಕ ಸುರೇಶ್ ಹರಿಜನ, ಸೇರಿದಂತೆ ಹಲವರು ಉಪಸ್ಥಿತರಿದ್ದರು.