ಸಾರಾಂಶ
ಗುಳೇದಗುಡ್ಡ ಪಟ್ಟಣದ ಹೊಸಪೇಟೆಯ ಶ್ರೀ ಸಾಲೇಶ್ವರ ದೇವಸ್ಥಾನದ ಜಾತ್ರೋತ್ಸವದ ನಿಮಿತ್ತ ಶ್ರೀ ಸಂಗನಬಸವೇಶ್ವರ ನಾಟ್ಯ ಸಂಘ ಎಸ್.ಆರ್. ಗೌಡ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನನ್ನ ಗಂಡ ನೀ ಹೌದು, ನಿನ್ನ ಹೆಂಡತಿ ನಾನಲ್ಲ ನಾಟಕ ಪ್ರದರ್ಶನ ಜರುಗಿತು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಲೋಕದ ಅಂಕುಡೊಂಕು ತಿದ್ದಿ ತೀಡುವ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಸೌಹಾರ್ದತೆ, ಸಮಾನತೆ ಮೂಡಿಸುವಲ್ಲಿ ನಾಟಕಗಳ ಪಾತ್ರ ಮಹತ್ವದ್ದಾಗಿದೆ. ಆದರೆ, ಆಧುನಿಕ ಕಾಲಘಟ್ಟದಲ್ಲಿ ರಂಗಭೂಮಿ ಕಲೆ ನಶಿಸುತ್ತಿದೆ. ರಂಗ ಕಲಾವಿದರು ಕೂಡ ತೆರೆಮರೆಗೆ ಸರಿಯುತ್ತಿದ್ದಾರೆ. ರಂಗಕಲೆಗೆ ನಿರಂತರ ಪ್ರೊತ್ಸಾಹ, ಪ್ರೇರಣೆ ನೀಡುವ ಕೆಲಸ ಸರ್ಕಾರ ಮಾಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.ಬುಧವಾರ ರಾತ್ರಿ ಪಟ್ಟಣದ ಹೊಸಪೇಟೆಯ ಶ್ರೀ ಸಾಲೇಶ್ವರ ದೇವಸ್ಥಾನದ ಜಾತ್ರೋತ್ಸವದ ನಿಮಿತ್ತ ಶ್ರೀ ಸಂಗನಬಸವೇಶ್ವರ ನಾಟ್ಯ ಸಂಘ ಎಸ್.ಆರ್. ಗೌಡ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನನ್ನ ಗಂಡ ನೀ ಹೌದು, ನಿನ್ನ ಹೆಂಡತಿ ನಾನಲ್ಲ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ನಾಟಕ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಕಲಾವಿದರು ರಂಗಭೂಮಿಯ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ನಿರಂತರವಾಗಿ ರಂಗಭೂಮಿ ಕಲೆ ಸಾಹಿತ್ಯಕ್ಕೆ ಸರ್ಕಾರ ಕೂಡ ಸೂಕ್ತ ಸಹಾಯ ಸಹಕಾರ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಶ್ರೀ ಸಂಗನಬಸವೇಶ್ವರ ನಾಟ್ಯ ಸಂಘದ ಅಧ್ಯಕ್ಷ ರವೀಂದ್ರ ಗೌಡ್ರ ಪ್ರಸ್ತಾವಿಕವಾಗಿ ಮಾತನಾಡಿ, ಹವ್ಯಾಸಿ ರಂಗಕಲಾ ಕಲಾವಿದರು ಹಬ್ಬ, ಹುಣ್ಣಿಮೆ, ಜಾತ್ರೆಗಳಲ್ಲಿ ನಡೆಯುವ ನಾಟಕೋತ್ಸವದಲ್ಲಿ ಅಭಿನಯಿಸುವ ಮೂಲಕ ರಂಗಭೂಮಿ ಕಲೆ ಜೀವಂತವಾಗಿರಿಸಬೇಕು. ರಂಗಕಲೆ, ಕಲಾವಿದರು ಉಳಿದಾಗ ಮಾತ್ರ ನಾಡಿನ ಶ್ರೀಮಂತ ಸಂಸ್ಕೃತಿಯ ಅಸ್ತಿತ್ವ ಉಳಿಯುತ್ತದೆ ಎಂದು ಹೇಳಿದರು.ನಾಟಕೋತ್ಸವದಲ್ಲಿ ಪುರಸಭೆ ಸದಸ್ಯ ಪ್ರಶಾಂತ ಜವಳಿ, ನಾಟ್ಯ ಸಂಘ ಉಪಾಧ್ಯಕ್ಷ ಹುಚ್ಚಪ್ಪ ಲಾಯದಗುಂದಿ, ವಿಶ್ವನಾಥಯ್ಯ ಹಿರೇಮಠ, ಅಯ್ಯಪ್ಪ ಅಯ್ಯಪ್ಪಸ್ವಾಮಿ ಹಿರೇಮಠ, ಗೋಪಾಲಪ್ಪ ಫಲಮಾರಿ, ಶೇಖರಪ್ಪ ಪುರಾಣಿ, ಬಸವರಾಜ ತಾಂಡೂರ, ಸಂತೋಷ ಉದ್ನೂರ, ಗಣೇಶ್ ಉಂಕಿ, ಚಂದ್ರು ಉಂಕಿ ಇತರರು ಇದ್ದರು.